Advertisement

ಕನ್ನಡದ ಕಂಬಾರರು

08:15 AM Feb 18, 2018 | |

ಚಂದ್ರಶೇಖರ ಕಂಬಾರರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಸಾಮಾನ್ಯವಾಗಿ ಅಕಾಡೆಮಿಗೆ ಹೀಗೆ ಚುನಾವಣೆ ನಡೆಯುವುದು ಅಪರೂಪ. ಉಪಾಧ್ಯಕ್ಷರಾಗಿದ್ದವರು ಅಧ್ಯಕ್ಷರಾಗುವುದು ರೂಢಿ. ಕೆಲವೊಮ್ಮೆ ಹೀಗೆ ಚುನಾವಣೆ ನಡೆಯುತ್ತದೆ. ವಿನಾಯಕಕೃಷ್ಣ ಗೋಕಾಕರು ಅಧ್ಯಕ್ಷರಾದಾಗ ಅವಿರೋಧವಾಗಿ ಆಯ್ಕೆಯಾಗಿದ್ದರು. ಯು. ಆರ್‌. ಅನಂತಮೂರ್ತಿಯವರು ಅಧ್ಯಕ್ಷರಾದಾಗ ಹೀಗೆಯೇ ಚುನಾವಣೆ ನಡೆದಿತ್ತು. ಈಗ ಕಂಬಾರರು ಚುನಾವಣೆಯ ಮೂಲಕವೇ ಆಯ್ಕೆಯಾಗಿದ್ದಾರೆ. ನಾಡಿನ ಅತ್ಯುನ್ನತ ಸಾಹಿತ್ಯಕ ಸಂಸ್ಥೆಯಾದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪದವಿ ಕನ್ನಡಕ್ಕೆ ಮೂರನೆಯ ಸಲ ಒದಗಿ ಬಂದಿದೆ. ಇದು ಕನ್ನಡಿಗರೆಲ್ಲರಿಗೂ ನಿಜಕ್ಕೂ ಹೆಮ್ಮೆಯ ಸಂಗತಿ.

Advertisement

ತೀವ್ರಸ್ಪರ್ಧೆಯ ನಡುವೆ
ಈ ಸಲ ಮೂವರು ಜ್ಞಾನಪೀಠ ಪ್ರಶಸ್ತಿ ಪಡೆದವರು ಸ್ಪರ್ಧೆಯಲ್ಲಿದ್ದರು. ಒಡಿಯಾ ಭಾಷೆಯ ಪ್ರತಿಭಾರಾಯ್‌, ಮರಾಠಿಯ ಬಾಲಚಂದ್ರ ನೆಮಾಡೆ ಸ್ಪರ್ಧಿಸಿದ್ದ ಮತ್ತಿಬ್ಬರು. ನೆಮಾಡೆಯವರಿಗೆ ಅಂತಹ ಆಸಕ್ತಿ ಇದ್ದಂತಿರಲಿಲ್ಲ. ಆದರೆ, ಪ್ರತಿಭಾರಾಯ್‌ ನಾಡಿನಾದ್ಯಂತ ಸಂಚರಿಸಿ ತೀವ್ರ ಸ್ಪರ್ಧೆಯೊಡ್ಡುವ ಸುಳುಹು ನೀಡಿದ್ದರು. ಆದರೆ, ನಮ್ಮ ಕಂಬಾರರ ಆಯ್ಕೆ ಬಹುಪಾಲು ನಿಶ್ಚಿತ ಎಂಬಂಥ ನಿರೀಕ್ಷೆಯ ವಾತಾವರಣ ಇತ್ತೆಂಬುದು ಹತ್ತಿರದವರಿಗೆ ಗೊತ್ತಿತ್ತು. ನಿರೀಕ್ಷೆ ಸುಳ್ಳಾಗಲಿಲ್ಲ. ನನಗೆ ತಿಳಿದಂತೆ ನಾಡಿನ ಸಾಹಿತ್ಯವಲಯದ ಎಲ್ಲ ಸಂವೇದನಾಶೀಲರ ಜೊತೆ ಕಂಬಾರರಿಗೆ ನಿಕಟ ಸಂಬಂಧವಿದೆ. ಕಂಬಾರರ ಸೃಜನಶೀಲ ಪ್ರತಿಭೆಯ ಬಗ್ಗೆ ಅವರೆಲ್ಲರಿಗೂ ಅಪಾರ ಗೌರವವಿದೆ.

ಕಂಬಾರರಿಗೂ ಅಕಾಡೆಮಿಗೂ ದಶಕಗಳ ನಂಟು. ಈ ಮೊದಲು ಅವರು ಎರಡು ಅವಧಿಗೆ ಅಕಾಡೆೆಮಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಕಳೆದ ಅವಧಿಯಲ್ಲಿ ಅವರು ಅಕಾಡೆಮಿಯ ಉಪಾಧ್ಯಕ್ಷರಾಗಿದ್ದರು. ಸಂಗೀತ ನಾಟಕ ಅಕಾಡೆಮಿ, ನ್ಯಾಷನಲ್‌ ಸ್ಕೂಲ್‌ ಆಫ್ ಡ್ರಾಮಾ ಮೊದಲಾದ ರಾಷ್ಟ್ರೀಯ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಅವರಿಗಿದೆ. ನಮ್ಮ ಕನ್ನಡ ವಿಶ್ವವಿದ್ಯಾಲಯದ ಆರಂಭದ ಕುಲಪತಿಗಳಾಗಿ ಅದನ್ನು ಕಟ್ಟಿ ಬೆಳೆಸಿದವರು ಅವರು. ಈಗ ಕೇಂದ್ರ ಸಾಹಿತ್ಯ ಅಕಾಡೆಮಿಯ ನೇತೃತ್ವ ವಹಿಸಿದ್ದಾರೆ. ಅವರ ಈ ಹಿಂದಿನ ಸುದೀರ್ಘ‌ ಆಡಳಿತಾನುಭವ ಅವರ ಬೆನ್ನಿಗಿರುವುದರಿಂದ ನಾಡಿನ ಅತ್ಯುನ್ನತ ಸಾಹಿತ್ಯಕ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸುತ್ತಾರೆಂಬುದು ಸಹಜ ನಿರೀಕ್ಷೆ. 

ಕಳೆದ ಐದು ವರ್ಷಗಳು ಕಂಬಾರರ ಜೊತೆ ಅಕಾಡೆಮಿಯ ಕಾರ್ಯ ಚಟುವಟಿಕೆಗಳಲ್ಲಿ ನಿಕಟವಾಗಿ ಒಡನಾಡುವ ಅವಕಾಶ ನನಗಿತ್ತು. ಆಗ ನಾವು ಅಕಾಡೆಮಿಯ ಕಾರ್ಯವ್ಯಾಪ್ತಿ ಹಾಗೂ ನಿರ್ವಹಿಸಬಹುದಾದ ಜವಾಬ್ದಾರಿಯ ಬಗ್ಗೆ ಸಾಕಷ್ಟು ಚರ್ಚಿಸುತ್ತಿದ್ದೆವು. ಕಂಬಾರರು ಮೂಲತಃ ಕನಸುಗಾರರು. ಕಂಡ ಕನಸನ್ನು ಸಾಕಾರಗೊಳಿಸಬಲ್ಲ  ಕ್ರಿಯಾಶೀಲರು. ಅವರದು ಸದ್ಯ ಲಾಭದ ಮನೋಭಾವವಲ್ಲ, ದೀರ್ಘಾವಧಿಯಲ್ಲಿ ಫ‌ಲ ನೀಡಬಲ್ಲ ಕ್ರಿಯಾಯೋಜನೆ ರೂಪಿಸುವಲ್ಲಿ ಅವರು ಆಸಕ್ತರು.

ಕಂಬಾರರು ನನ್ನೊಡನೆ ಮಾತನಾಡುತ್ತ ಅನೇಕ ಸಲ ಹೇಳಿದ್ದಿದೆ: ಸಾಹಿತ್ಯ ಅಕಾಡೆಮಿ ನಾಡಿನ ಎಲ್ಲ ಭಾಷೆಗಳನ್ನೂ ಪ್ರತಿನಿಧಿಸುವ ಅತ್ಯುನ್ನತ ಸಾಹಿತ್ಯಕ ಸಂಸ್ಥೆ. ಕೇಂದ್ರ ಸರ್ಕಾರ ಭಾಷೆ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ಯಾವುದೇ ನಿರ್ಣಯ ಕೈಗೊಳ್ಳುವಾಗ ಅಕಾಡೆಮಿಯ ಮಾರ್ಗದರ್ಶನ ಪಡೆಯುವಂತಾಗಬೇಕು. ಅಂತಹ ವಾತಾವರಣವನ್ನು ನಾವು ಸೃಷ್ಟಿಸಬೇಕು. ಈಗ ಕಂಬಾರರು ಅಕಾಡೆೆಮಿಯ ಅಧ್ಯಕ್ಷರಾಗಿ ಅಂತಹ ಒತ್ತಡವನ್ನು ಸರ್ಕಾರದ ಮೇಲೆ ತರುವ ಎಲ್ಲ ಸಾಧ್ಯತೆಯೂ ಇದೆ. ಸರ್ಕಾರಕ್ಕೆ ಅಕಾಡೆಮಿ ಮಾರ್ಗದರ್ಶನ ನೀಡುವಂತಾಗಬೇಕು. ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ಸಂಗತಿಗಳಲ್ಲಿ ಸಾಹಿತಿಗಳ ಪ್ರಾತಿನಿಧಿಕ ಸಂಸ್ಥೆಯಾದ ಸಾಹಿತ್ಯ ಅಕಾಡೆಮಿಯ ಅಭಿಪ್ರಾಯವೇ ನಿರ್ಣಾಯಕವಾಗಬೇಕು. ಬ್ಯುರೋಕ್ರಸಿಯಾಗಲೀ, ರಾಜಕಾರಣಿಗಳಾಗಲೀ ಅಕಾದೆಮಿಯ ಅಭಿಪ್ರಾಯವನ್ನು ಗೌರವಿಸುವಂತಾಗಬೇಕು. ಅದರ ಸ್ವಾಯತ್ತತೆಯನ್ನು ರಕ್ಷಿಸಬೇಕು.

Advertisement

ಉಪಾಧ್ಯಕ್ಷರಾಗಿದ್ದಾಗ…
ಈ ಹಿನ್ನೆಲೆಯಲ್ಲಿಯೇ ಕಂಬಾರರು ಉಪಾಧ್ಯಕ್ಷರಾಗಿದ್ದಾಗ ಶಿಕ್ಷಣ ಮಾಧ್ಯಮವಾಗಿ 
ಪ್ರಾದೇಶಿಕ ಭಾಷೆಗಳಿರಬೇಕೆಂಬ ವಿಷಯದಲ್ಲಿ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ನಿಲುವಳಿಯೊಂದನ್ನು ಮಂಡಿಸಿ ಅದನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟಿದ್ದರು. ಮಾತ್ರವಲ್ಲ, ಸಾಹಿತಿಗಳ ನಿಯೋಗದೊಂದಿಗೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ನಾಡಿನಾದ್ಯಂತ ಐದು ಲಕ್ಷ ಜನರ ಸಹಿ ಮಾಡಿಸಿ ಅದನ್ನು ಪ್ರಧಾನಿಗೆ ಸಲ್ಲಿಸಿದ್ದರು. ಕಂಬಾರರು ಈಗ ಅಧ್ಯಕ್ಷರಾಗಿರುವುದರಿಂದ ಈ ಸಂಗತಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಇದು ಸಾಧ್ಯವಾದರೆ ದೇಶ ಭಾಷೆಗಳ ಭವಿಷ್ಯವೇ ಬದಲಾಗಿಬಿಡುತ್ತದೆ. ಇಂಗ್ಲಿಶಿನ ದಬ್ಟಾಳಿಕೆಯಿಂದ ನಮ್ಮ ಮಕ್ಕಳು ನಮ್ಮ ಕೈತಪ್ಪಿ ಹೋಗುತ್ತಾರೆಂಬ ಆತಂಕವಿರುವುದಿಲ್ಲ.

ಕಂಬಾರರಿಗಿರುವ ಮತ್ತೂಂದು ಕನಸು-ಭಾರತೀಯ ಸಾಹಿತ್ಯವನ್ನು ಜಗತ್ತಿಗೆ ಸೂಕ್ತ ರೀತಿಯಲ್ಲಿ ಪರಿಚಯಿಸಬೇಕೆಂಬುದು. ಆಮದು ಬುದ್ಧಿಯಿಂದ ನಾವು ಪಾರಾಗಬೇಕಾದರೆ ನಮ್ಮ ಸಾಹಿತ್ಯದ ಸತ್ವವನ್ನು ನಾವು ಸರಿಯಾಗಿ ಗ್ರಹಿಸಬೇಕು, ಮತ್ತು ಅದನ್ನು ಜಗತ್ತಿಗೆ ತಿಳಿಸಿಕೊಡಬೇಕು. ಇದಕ್ಕೆ ಸೂಕ್ತ ವೇದಿಕೆ ಸಾಹಿತ್ಯ ಅಕಾಡೆಮಿ. ಈಗ ಕಂಬಾರರು ಅದರ ನೇತೃತ್ವ ವಹಿಸಿರುವುದರಿಂದ ಇದು ಸಾಧ್ಯವಾಗುತ್ತದೆಂಬ ಭರವಸೆಯಿದೆ.

ದೇಶಭಾಷೆಗಳನ್ನು ಜ್ಞಾನದ ಭಾಷೆಗಳನ್ನಾಗಿ ಬೆಳೆಸಬೇಕೆಂಬುದು ಕಂಬಾರರ ಮತ್ತೂಂದು ಆಶಯ. ಆಧುನಿಕ ಅಗತ್ಯಗಳಿಗೆ ತಕ್ಕಂತೆ, ತಂತ್ರಜ್ಞಾನದ ನೆರವು ಪಡೆದು ನಮ್ಮ ಭಾಷೆಗಳನ್ನು ಸಮಕಾಲೀನಗೊಳಿಸುವುದರತ್ತ ಅವರ ಆಸಕ್ತಿ. ಕೇಂದ್ರ, ರಾಜ್ಯ ಸರ್ಕಾರಗಳು ಈ ಬಗ್ಗೆ ಯೋಜನೆ ರೂಪಿಸಬೇಕು. ಹಾಗೆ ರೂಪಿಸುವಂತೆ ಅಕಾದೆಮಿ ಸರ್ಕಾರಗಳ ಮೇಲೆ ಒತ್ತಡ ಹೇರಬೇಕು. ಕಂಬಾರರು ಈ ದಿಕ್ಕಿನಲ್ಲಿ ಪ್ರಯತ್ನ ಮಾಡುತ್ತಾರೆಂದು ನಾವು ನಿರೀಕ್ಷಿಸಬಹುದು.

   ಕಂಬಾರರು ನಮ್ಮ ಕಾಲದ ದಾರ್ಶನಿಕ ಪ್ರತಿಭೆಯ ಶ್ರೇಷ್ಠ ಲೇಖಕರು. ನಮ್ಮಲ್ಲೇ ಇರುವ ತಿಳಿವಳಿಕೆ ಹಾಗೂ ಪಶ್ಚಿಮದಿಂದ ಹರಿದು ಬರುತ್ತಿರುವ ಜಾnನಪ್ರವಾಹ ಇವೆರಡರ ಸಂಘರ್ಷದ ಒಡಲಿನಲ್ಲಿ ಹುಟ್ಟಿಬರುವ ಅರಿವು ನಮ್ಮನ್ನು ಮುನ್ನಡೆಸಬೇಕಾಗಿದೆ ಎಂಬುದು ಕಂಬಾರರು ಎಚ್ಚರದಿಂದ ರೂಢಿಸಿಕೊಂಡು ಬಂದ ನಿಲುವಾದರೂ, ನಮ್ಮ ನೆಲದ ಅಂತಃಸತ್ವದ ಬಗ್ಗೆ ಅವರಿಗೆ ಅಪಾರ ಪ್ರೀತಿ, ನಂಬುಗೆ. ನಾವು ನಿರ್ಲಕ್ಷಿಸಿದ ಅನುಭವ ಲೋಕಗಳ ಒಳಹೊಕ್ಕು ಅಲ್ಲಿನ ಚೈತನ್ಯವನ್ನು ಸಮಕಾಲೀನ ಬದುಕಿಗೆ ಆವಾಹಿಸಿಕೊಳ್ಳಬೇಕೆಂಬುದು ಅವರ ಹಂಬಲ. ಕಂಬಾರರ ಈ ಆಸಕ್ತಿಗಳು ಭಾರತೀಯ ಸಾಹಿತ್ಯಕ್ಕೇ ಹೊಸ ಚೈತನ್ಯ ನೀಡಬಲ್ಲುವು. ಜಾಗತೀಕರಣದ ಅಪಾಯ, ನಗರಕೇಂದ್ರಿತ ಪ್ರಗತಿಯ ಪರಿಕಲ್ಪನೆ, ಜನಪದರ ಆತ್ಮನಾಶ, ಅಭಿವೃದ್ಧಿಯ ಹೆಸರಿನಲ್ಲಿ ಬರುತ್ತಿರುವ ಆಮದು ಯೋಜನೆಗಳು ನಮ್ಮ ಅಂತಃಸತ್ವವನ್ನೇ ಹೀರುತ್ತಿವೆ. ಇಂತಹ ಸಂದರ್ಭದಲ್ಲಿ ದೇಸಿ ಸತ್ವದ ಬಗ್ಗೆ ಕಾಳಜಿಯಿರುವ ಕಂಬಾರರಂಥವರು ನಾಡಿಗೆ ಮಾರ್ಗದರ್ಶನ ಮಾಡುವ ಸಾಧ್ಯತೆಯಿರುವ ಸಂಸ್ಥೆಯೊಂದರ ನೇತೃತ್ವ ವಹಿಸುತ್ತಿರುವುದು ನಾಡಿಗೆ ಭರವಸೆಯ ಬೆಳ್ಳಿಬೆಳಕು.

ನರಹಳ್ಳಿ ಬಾಲಸುಬ್ರಹ್ಮಣ್ಯ

Advertisement

Udayavani is now on Telegram. Click here to join our channel and stay updated with the latest news.

Next