Advertisement

ಜನಪ್ರತಿನಿಧಿಗಳಿಗೆ ಗೌರವ ನೀಡದ ಅಧಿಕಾರಿಗಳು

12:12 PM Mar 07, 2019 | Team Udayavani |

ತುಮಕೂರು: ಮಹಾ ನಗರಪಾಲಿಕೆ ಅಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳಿಗೆ ಗೌರವ ನೀಡುತ್ತಿಲ್ಲ. ಮಹಿಳಾ ಸದಸ್ಯರ ಬಗ್ಗೆ ಗೌರವಯುತವಾಗಿ ಪಾಲಿಕೆ ಅಧಿಕಾರಿಗಳು ಮಾತನಾಡಬೇಕು ಎಂದು ಒತ್ತಾಯಿಸಿ, ಪಾಲಿಕೆಯ ಸದಸ್ಯರು ಅಧಿಕಾರಿಗಳ ಮೇಲೆ ಮುಗಿ ಬಿದ್ದ ಘಟನೆ ಬುಧವಾರ ತುಮಕೂರು ಮಹಾನಗರ ಪಾಲಿಕೆಯ ಪ್ರಥಮ ಸಾಮಾನ್ಯ ಸಭೆಯಲ್ಲಿ ನಡೆಯಿತು.

Advertisement

ಮಹಾ ನಗರ ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ಮೇಯರ್‌ ಲಲಿತಾ ರವೀಶ್‌ ಅಧ್ಯಕ್ಷತೆ ಯಲ್ಲಿ ಸಭೆ ಆರಂಭವಾಗುತ್ತಲೇ ನಗರದಲ್ಲಿರುವ ಕಸದ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯಿತು. ಕಸ ನಿರ್ವಹಣೆಯಲ್ಲಿ ಪಾಲಿಕೆ ಅಧಿಕಾರಿಗಳು ವಿಫ‌ಲರಾಗಿದ್ದಾರೆ. ಪರಿಸರ ಎಂಜಿನಿಯರ್‌ಗಳಿಗೆ ವಾರ್ಡ್‌ ಗಳು ಎಲ್ಲಿವೆ ಎಂದೇ ಗೊತ್ತಿಲ್ಲ. ವಾರ್ಡ್‌ಗಳನ್ನು ನೋಡೇ ಇಲ್ಲ ಎಂದು ಸದಸ್ಯರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಮೊದಲು ನನ್ನ ಮಾತು ಕೇಳಿ: ಈ ವೇಳೆ ಪಾಲಿಕೆ ಆರೋಗ್ಯ ಅಧಿಕಾರಿ ಡಾ.ನಾಗೇಶ್‌ ಮಾತನಾಡಲು ಮುಂದಾದಾಗ ಮಹಿಳಾ ಸದಸ್ಯರು ತಮ್ಮ ವಾರ್ಡ್‌ ನಲ್ಲಿರುವ ಕಸದ ಸಮಸ್ಯೆ ಬಗ್ಗೆ ಹೇಳಲು ಮುಂದಾದರು. ಈ ಸಂದರ್ಭದಲ್ಲಿ ಅಧಿಕಾರಿ ಮೊದಲು ನನ್ನ ಮಾತು ಕೇಳಿ ನಂತರ ನೀವು ಹೇಳಿ ಎಂದರು. ಇದಕ್ಕೆ ಸಿಡಿಮಿಡಿಗೊಂಡ ಸದಸ್ಯರು ನೀವು ಮಹಿಳಾ ಸದಸ್ಯರಿಗೆ ಅವಮಾನ ಮಾಡುತ್ತಿದ್ಧೀರಿ. ಚುನಾಯಿತ ಪ್ರತಿನಿಧಿಗಳೆಂದರೆ ಗೌರವವಿಲ್ಲವೆ ಎಂದು ಆಕ್ರೋಶ ವ್ಯಕ್ತಪಡಿಸಿ, ಮೇಯರ್‌ ಕುಳಿತಿದ್ದ ವೇದಿಕೆ ಮುಂದೆ ಬಂದು ಪ್ರತಿಭಟಿಸಿದರು. 

ಚಾಟಿ ಬೀಸಿದ ಮೇಯರ್‌: ಈ ವೇಳೆ ಮೇಯರ್‌ ಲಲಿತಾ ರವೀಶ್‌ ಮಾತನಾಡಿ, ಸದಸ್ಯರಿಗೆ ಗೌರವ ಇಲ್ಲವೇ, ಅಧಿಕಾರಿಗಳು ಸದಸ್ಯರ ಬಗ್ಗೆ ಅದರಲ್ಲೂ ಮಹಿಳಾ ಸದಸ್ಯರ ಬಗ್ಗೆ ಅಗೌರವ ತೋರದೇ ಗೌರವದಿಂದ ಮಾತನಾಡಿ, ನಾನೂ ಮಹಿಳೆ ಇದ್ದೇನೆ ಎಂದು ಅಧಿಕಾರಿ ಮೇಲೆ ಚಾಟಿ
ಬೀಸಿದರು. 

ಕಸದ ದೂರು: ಈ ವೇಳೆ ಸಮಜಾಯಿಸಿ ನೀಡಿದ ಅಧಿಕಾರಿಗಳು ಇನ್ನು ಮುಂದೆ ಅಗೌರವ ತೋರುವುದಿಲ್ಲ. ನೀವು ಹೇಳಿರುವ ಕೆಲಸಗಳಿಗೆ ಒತ್ತು ನೀಡುವ ಭರವಸೆ ನೀಡಿದ ಮೇಲೆ ಸಭೆ ಶಾಂತವಾಯಿತು. ಈ ವೇಳೆ ಮಾತನಾಡಿದ ಸದಸ್ಯರು ತುಮಕೂರು ಸ್ಮಾರ್ಟ್‌ ಸಿಟಿ ನಗರ ಇಲ್ಲಿ ಕಸದ ರಾಶಿ ರಾಶಿ ಇದೆ. ಸರಿಯಾದ ರೀತಿಯಲ್ಲಿ ಕಸದ ಆಟೋಗಳು ಬರುತ್ತಿಲ್ಲ. ಹಸಿಕಸ, ಒಣಕಸ ಬೇರ್ಪಡಿಸುತ್ತಿಲ್ಲ. ಎಂದು ದೂರಿದರು. 

Advertisement

ಸದಸ್ಯರಾದ ಎಚ್‌.ಮಲ್ಲಿಕಾರ್ಜುನ್‌, ಜೆ. ಕುಮಾರ್‌ ಮತ್ತಿತರು ಸದಸ್ಯರು ನಗರದಲ್ಲಿ ಅಧಿಕಾರಿಗಳು ವಾರ್ಡ್‌ವಾರು ಬರುತ್ತಿಲ್ಲ. ಈ ಹಿಂದೆ ಇದ್ದ ಪೌರ ಕಾರ್ಮಿಕರನ್ನು ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ. ಇದರಿಂದ ಸರಿಯಾದ ರೀತಿಯಲ್ಲಿ ಕೆಲಸಗಳು ನಡೆಯುತ್ತಿಲ್ಲ. ವರ್ಗಾವಣೆ ಮಾಡಿರುವ ಪೌರ
ಕಾರ್ಮಿಕರನ್ನು ಅದೇ ವಾರ್ಡ್‌ಗಳಿಗೆ ಹಾಕಬೇಕೆಂದು ತಿಳಿಸಿದರು.

ಬೇಜವಾಬ್ದಾರಿ ಬೇಡ: ಈ ವೇಳೆ ಅಧಿಕಾರಿಗಳು ತಮ್ಮದೇ ಆದ ರೀತಿಯಲ್ಲಿ ಉತ್ತರ ಕೊಡಲು ಮುಂದಾದಾಗ ಈ ರೀತಿಯ ಬೇಜವಾಬ್ದಾರಿಯಿಂದ ಮಾತನಾಡಬೇಡಿ, ಮೊದಲು ಕೆಲಸ ಮಾಡಿ ಎಂದರು.

ಸದಸ್ಯರು ಪೌರ ಕಾರ್ಮಿಕರು ಕೆಲಸ ಮಾಡುವ ಕಡೆಯಲ್ಲಿಯೇ ಬಯೋಮೆಟ್ರಿಕ್‌ ಅಳವಡಿಸ ಬೇಕೆಂದು ಕೋರಿದಾಗ ಉತ್ತರಿಸಿದ ಆಯುಕ್ತ ಭೂಬಾಲನ್‌ ವಾರ್ಡ್‌ವಾರು ಬಯೋಮೆಟ್ರಿಕ್‌ ಅಳವಡಿಸುವುದಾಗಿ ತಿಳಿಸಿದರು.

ನೀರಿನ ಸಮಸ್ಯೆ ತಾಂಡವ: ಸದಸ್ಯರಾದ ಸಿ.ಎನ್‌. ರಮೇಶ್‌, ಲಕ್ಷ್ಮೀನರಸಿಂಹರಾಜು, ನಯಾಜ್‌ ಅಹಮದ್‌, ಎಂ.ಕೆ.ಮನು ಮಾತನಾಡಿ, ಬೇಸಿಗೆ ಆರಂಭದಲ್ಲಿಯೇ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಬೋರ್‌ವೆಲ್‌ಗ‌ಳು ಬತ್ತುತ್ತಿವೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
 
ವೇತನ ನೀಡಿ: ಸದಸ್ಯರಾದ ಮಂಜುನಾಥ್‌, ಧರಣೇಂದ್ರ ಕುಮಾರ್‌ ರಾಜು ಮಾತನಾಡಿ, ಪಾಲಿಕೆ ಯಲ್ಲಿ ಕೆಲಸ ಮಾಡುತ್ತಿರುವ ವಾಲ್‌ಮೆನ್‌ ಗಳಿಗೆ ಸರಿಯಾದ ರೀತಿಯಲ್ಲಿ ವೇತನ ನೀಡುತ್ತಿಲ್ಲ. ಗುತ್ತಿಗೆದಾರರು ಇಎಸ್‌ಐ, ಪಿಎಫ್ ನೀಡುತ್ತಿಲ್ಲ ಎಂದು ದೂರಿ, ಪ್ರತಿ ವರ್ಷ ಇವರಿಗೆ ಟೆಂಡರ್‌ ನೀಡಲಾಗುತ್ತಿದೆ. ಈ ಬಗ್ಗೆ ಆಯುಕ್ತರು ಗಮನ ಹರಿಸಬೇಕು ಎಂದು ಎಂ.ಕೆ.ಮನು ಒತ್ತಾಯಿಸಿದರು.

ಭರವಸೆ: ಮಹಾ ನಗರ ಪಾಲಿಕೆಯಲ್ಲಿ ನಡೆದ ನೂತನ ಸದಸ್ಯರ ಪ್ರಥಮ ಸಭೆ ಕಸ ನಿರ್ವಹಣೆ, ಕುಡಿಯುವ ನೀರು, ಬೀದಿ ದೀಪ ನಿರ್ವಹಣೆ ಬಗ್ಗೆ ಚರ್ಚೆ ನಡೆದು ಪಾಲಿಕೆ ಮೇಯರ್‌ ಸದಸ್ಯರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಭರವಸೆ ನೀಡಿದರು. ಸಭೆಯಲ್ಲಿ ಉಪ ಮೇಯರ್‌ ರೂಪಶ್ರೀ, ಆಯುಕ್ತರಾದ ಭೂಬಾಲನ್‌, ಸಭಾ ಕಾರ್ಯದರ್ಶಿ ಕಾಂತರಾಜು ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

ಸಭೆಯಲ್ಲಿ ಎಚ್‌.ಎಂ.ದೀಪಶ್ರೀ, ವಿಷ್ಣುವರ್ಧನ್‌, ವಿ.ಎಸ್‌.ಗಿರಿಜಾ, ಫ‌ರಿದಾ ಬೇಗಂ ಮೊದಲಾದ ಸದಸ್ಯರು ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next