ಬೆಂಗಳೂರು: ತಮ್ಮ ರಾಜಕೀಯ ಲಾಬಿ ನಡೆಸಿ ಅರ್ಹರಲ್ಲದರೂ ಕೂಡ ಪ್ರಶಸ್ತಿ ಪಡೆಯುತ್ತಿರುವುದರಿಂದ ಪ್ರಶಸ್ತಿಗಳು ಇಂದು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದು, ಶೌರ್ಯ ಪ್ರದರ್ಶಿಸಿದ ಮಹಿಳೆಯರಿಗೆ ಮಾತ್ರ ಸರ್ಕಾರ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ನೀಡಿ ಸನ್ಮಾನಿಸಬೇಕು ಎಂದು ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಯಾರಾರಿಗೋ ಕಿತ್ತೂರು ರಾಣಿ ಚನ್ನಮ್ಮನ ಹೆಸರಿನಲ್ಲಿ ಪ್ರಶಸ್ತಿ ನೀಡುವ ಪ್ರವೃತ್ತಿಯನ್ನು ಸರ್ಕಾರ ಮೊದಲು ನಿಲ್ಲಿಸಬೇಕು.ಆ ಪ್ರಶಸ್ತಿಗೆ ಅರ್ಹರಾದ ಮಹಿಳೆಯರನ್ನು ಗುರುತಿಸಿ ಗೌರವಿಸಬೇಕು. ಆಗ ಮಾತ್ರ ಆ ಪ್ರಶಸ್ತಿಯ ಮೌಲ್ಯ ಮತ್ತಷ್ಟು ಹೆಚ್ಚುತ್ತದೆ ಎಂದು ನುಡಿದರು.
ಕಿತ್ತೂರು ರಾಣಿ ಚನ್ನಮ್ಮ, ಕೆಳದಿ ಚನ್ನಮ್ಮ, ರಾಣಿ ಅಬ್ಬಕ್ಕದೇವಿ, ಒನಕೆ ಓಬವ್ವ ಸೇರಿದಂತೆ ಅನೇಕ ಮಹಿಳೆಯರು ಬ್ರಿಟಿಷರ ವಿರುದ್ಧ ದಂಗೆ ಎದ್ದು, ತಮ್ಮ ಶೌರ್ಯ ಪ್ರದರ್ಶಿಸಿದ್ದಾರೆ. ಹೀಗಾಗಿ ಈ ಎಲ್ಲಾ ಸಾಧಕಿಯರನ್ನು ಒಂದೇ ದಿನ ನೆನಸಿಕೊಳ್ಳುವ ಪ್ರಯತ್ನ ನಡೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಯೋಜನೆಯನ್ನು ರೂಪಿಸಲಿ ಎಂದು ಹೇಳಿದರು.
ತಾವು ಸಚಿವರಾಗಿದ್ದ ವೇಳೆ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಲಾಯಿತು. ಇದಾದ ನಂತರ ಕಿತ್ತೂರಿನಲ್ಲಿದ್ದ ಚನ್ನಮ್ಮನ ಪ್ರತಿಮೆಯನ್ನು ಬೆಂಗಳೂರಿಗೆ ತಂದು ಸ್ಥಾಪನೆ ಮಾಡಿದೆ. ನಂತರ ಸಿದ್ಧರಾರಮಯ್ಯ ಸರ್ಕಾರ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯೋತ್ಸವ ಆರಂಭಿಸಿತು. ಹೀಗಾಗಿ, ರಾಜ್ಯದೆಲ್ಲಡೆ ಕಿತ್ತೂರು ರಾಣಿ ಚನ್ನಮ್ಮನ ಜಯಂತಿ ನಡೆಯುತ್ತಿರುವುದು ಖುಷಿತಂದಿದೆ ಎಂದು ತಿಳಿಸಿದರು.
ಚನ್ನಮ್ಮನ ಹೆಸರಿಡಿ:ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಜಯಬಸವ ಮೃತ್ಯುಂಜಯ ಮಹಾಸ್ವಾಮೀಜಿ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ರಾಣಿಕಿತ್ತೂರು ಚನ್ನಮ್ಮನ ಹೆಸರನ್ನು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಮತ್ತು ಸಂಗೊಳ್ಳಿ ರಾಯಣ್ಣ ನ ಹೆಸರನ್ನು ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಇಡಬೇಕು. ಹಾಗೇ ಬೆಳಗಾವಿಯ ಸುವರ್ಣಸೌಧದ ಮುಂದೆ ಈ ಇಬ್ಬರೂ ಹೋರಾಟಗಾರರ ಪ್ರತಿಮೆಯನ್ನು ಸ್ಥಾಪಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕಿತ್ತೂರು ರಾಣಿ ಚನ್ನಮ್ಮ ಬಳಸುತ್ತಿದ್ದ ಯುದ್ದ ಪರಿಕರಗಳು ಬ್ರಿಟಿಷ್ ಮ್ಯೂಸಿಯಂನಲ್ಲಿದ್ದು, ರಾಜ್ಯ ಸರ್ಕಾರ ಅವುಗಳನ್ನು ತವರಿಗೆ ಮರಳಿ ತರುವ ಪ್ರಯತ್ನ ನಡೆಸಬೇಕು. ಹಾಗೇ ಕೇಂದ್ರ ಸರ್ಕಾರ ಸಂಸತ್ ಭವನದ ಮುಂದಿರುವ ಬಸವಣ್ಣ ಮತ್ತು ಚನ್ನಮ್ಮ ಪ್ರತಿಮೆಗೆ ಜಯಂತ್ಯುತ್ಸವದಂದು ಹಾರಹಾಕಿ ಗೌರವಿಸುವುದನ್ನು ಮರೆಯಬಾರದು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಉಪನ್ಯಾಸಕಿ ಶಾರದ ಮುಳ್ಳೂರು,ಸಿಂದ್ರಾಮ ಸಿಂಧೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮೀಟೂ ಅಭಿಯಾನ ಶಕ್ತಿ ನೀಡಲಿ: ಮೀ ಟೂ ಅಭಿಯಾನದಲ್ಲಿ ಮಹಿಳೆಯರು ತಮಗೆ ಆಗುತ್ತಿರುವ ಅನ್ಯಾಯವನ್ನು ಹೇಳಿಕೊಳ್ಳುತ್ತಿದ್ದಾರೆ. ಈ ಅಭಿಯಾನ ಮಹಿಳೆಯರಿಗೆ ಮತ್ತಷ್ಟು ಶಕ್ತಿಯನ್ನು ನೀಡಲಿ, ಇದಕ್ಕೆ ನನ್ನ ಬೆಂಬಲವಿದೆ. ಅಭಿಯಾನ ಆರಂಭವಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಹೇಳಿದರು.