Advertisement

ವಚನ ಪಾಲಿಸಿದರೆ ಸಿಎಂಗೆ ಸನ್ಮಾನ; ಮಾತು ತಪ್ಪಿದರೆ ಹೋರಾಟ

12:31 PM Nov 29, 2022 | Team Udayavani |

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿ. 19 ರೊಳಗೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ಕಲ್ಪಿಸುವ ಭರವಸೆ ನೀಡಿದ್ದಾರೆ. ಈ ಬೇಡಿಕೆ ಈಡೇರದಿದ್ದರೆ ಉದ್ಧೇಶಿಸಿದಂತೆ ಡಿ. 22 ರಂದು 25 ಲಕ್ಷ ಜನರನ್ನು ಸೇರಿಸಿ ಬೆಳಗಾವಿಯಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಂಡಿರುವುದಾಗಿ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಸಮಿತಿ ಗೌರವಾಧ್ಯಕ್ಷ ಎಂ.ಎಸ್‌. ರುದ್ರಗೌಡರ, ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ. ಪಾಟೀಲ ಹೇಳಿದರು.

Advertisement

ಸೋಮವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಈಚೆಗೆ ನಮ್ಮ ಸಮುದಾಯದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಸಚಿವರಾದ ಸಿ.ಸಿ. ಪಾಟೀಲ, ಶಂಕರ ಪಾಟೀಲ ಮುನೇನಕೊಪ್ಪ, ಸಮುದಾಯದ ಸುಮಾರು 15 ಶಾಸಕರು ಪಾಲ್ಗೊಂಡಿದ್ದ ಸಭೆಯಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಾರಿ ಖಚಿತ ಭರವಸೆ ನೀಡಿದ್ದಾರೆ. ಹೀಗಾಗಿ ಸಮುದಾಯದ ನಾಯಕರಲ್ಲೂ ಬೊಮ್ಮಾಯಿ ಅವರ ಮಾತಿನ ಮೇಲೆ ಭರವಸೆ ಮೂಡಿದೆ ಎಂದರು.

ಹಿಂದುಳಿದ ವರ್ಗಗಳ ಆಯೋಗ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿದ್ದು, ಬಾಕಿ ಇರುವ ಕೆಲವೇ ಜಿಲ್ಲೆಗಳ ಅಧ್ಯಯನ ಪ್ರವಾಸ ಮುಗಿಸಲಿದೆ. ಶೀಘ್ರವೇ ಹಿಂದುಳಿದ ವರ್ಗಗಳ ಆಯೋಗದ ವರದಿ ತರಿಸಿಕೊಂಡು ಡಿ. 19ರೊಳಗೆ ಪಂಚಮಸಾಲಿ ಸಮಾಜಕ್ಕೆ ಮೀಸಲು ಕಲ್ಪಿಸುವ ಕುರಿತು ಸರ್ಕಾರ ಭರವಸೆ ನೀಡಿದೆ ಎಂದರು.

ಸರ್ಕಾರ ಭರವಸೆ ನೀಡಿದ್ದರೂ ಮೀಸಲಾತಿ ಹೋರಾಟದ ಕುರಿತು ಸಮಾಜದ ಸಂಘಟನೆ ಮುಂದುವರಿಯಲಿದೆ. ಡಿ. 12ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಸಮಾವೇಶದ ಸ್ಥಳವನ್ನು ಡಿ. 22 ಕ್ಕೆ ಮುಂದೂಡಿ ಬೆಳಗಾವಿಗೆ ಸ್ಥಳಾಂತರ ಮಾಡಲಾಗಿದೆ. ಸರ್ಕಾರ ನಿಗದಿತ ದಿನದಂದು ಮೀಸಲು ಕಲ್ಪಿಸಿದರೆ ಅಧಿವೇಶನಕ್ಕಾಗಿ ಬೆಳಗಾವಿಗೆ ಬರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಲಾಗುತ್ತದೆ. ಭರವಸೆ ಈಡೇರದಿದ್ದರೆ ಬೆಳಗಾವಿಯಲ್ಲಿ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಕುರಿತ ಹೋರಾಟಕ್ಕೆ ಮೂರು ದಶಕಗಳ ಇತಿಹಾಸವಿದೆ. ಸಚಿವರಾಗಿದ್ದ ಎಸ್‌.ಆರ್‌. ಕಾಶಪ್ಪನವರ ಕಾಲದಿಂದಲೂ ಹೋರಾಟ ನಡೆದಿದೆ. ಕಳೆದ ಎರಡು ವರ್ಷಗಳಿಂದ ನಿರಂತರ ಹೋರಾಟ ನಡೆಸಿದ್ದೇವೆ. ಕೂಡಲಸಂಗಮದಿಂದ ಬೆಂಗಳೂರಿಗೆ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ, ಬೃಹತ್‌ ಸಮಾವೇಶ, ರಕ್ತದಾನ, ಧರಣಿ, ಉಪವಾಸ ಸತ್ಯಾಗ್ರಹದಂಥ ಹೋರಾಟಗಳನ್ನು ಮಾಡುತ್ತಲೇ ಬರುತ್ತಿದ್ದೇವೆ. ಇದು ನಮ್ಮ ಅಂತಿಮ ಹೋರಾಟ ಎಂದರು.

Advertisement

ಹೋರಾಟ ತೀವ್ರಗೊಳಿಸಲು ರಾಜ್ಯಾದ್ಯಂತ ತಾಲೂಕು ಮಟ್ಟದಲ್ಲಿ ಹೋರಾಟ ಸಮಿತಿ ರಚಿಸಲಾಗುತ್ತಿದ್ದು ಪ್ರಮಖ ಪದಾಧಿಕಾರಿಗಳ ನೇಮಕ ನಡೆದಿದೆ. ವಿಜಯಪುರ ಜಿಲ್ಲೆಯ ಏಳು ತಾಲೂಕುಗಳಿಗೆ ಮೀಸಲು ಹೋರಾಟ ಸಮಿತಿಗೆ ಗೌರವಾಧ್ಯಕ್ಷರನ್ನು ನೇಮಿಸಲಾಗಿದೆ. ಇತರೆ ತಾಲೂಕುಗಳಿಗೆ ಶೀಘ್ರವೇ ನೇಮಕ ನಡೆಯಲಿದೆ ಎಂದರು.

ಇಂಡಿ ತಾಲೂಕು ಎಸ್‌.ಎ. ಪಾಟೀಲ ಡೊಮನಾಳ, ಬಬಲೇಶ್ವರ ತಾಲೂಕ ಬಿ.ಎಸ್‌. ಬಿರಾದಾರ, ವಿಜಯಪುರ ತಾಲೂಕಿಗೆ ಪ್ರೇಮಾನಂದ ಬಿರಾದಾರ, ಸಿಂದಗಿ ತಾಲೂಕು ಚಂದ್ರಶೇಖರ ನಾಗರಬೆಟ್ಟ, ಮುದ್ದೇಬಿಹಾಳ ತಾಲೂಕಿಗೆ ಅಮರಪ್ಪ ಗಂಗನಗೌಡ್ರು, ಬಸವನಬಾಗೇವಾಡಿಗೆ ಶ್ರೀಕಾಂತ ಕೊಟ್ರಶೆಟ್ಟಿ, ತಿಕೋಟಾಕ್ಕೆ ಅಶೋಕ ಬಿರಾದಾರ (ಬಾಬಾನಗರ) ಅವರನ್ನು ಗೌರವಾಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ವಿವರಿಸಿದರು.

ಎಸ್‌.ಎ. ಪಾಟೀಲ, ಬಿ.ಎಸ್‌. ಬಿರಾದಾರ, ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಮಲ್ಲಿಕಾರ್ಜುನ ಹಂಗರಗಿ, ಚಂದ್ರಶೇಖರ ನಾಗರಬೆಟ್ಟ, ಅಶೋಕ ಎಂ.ಬಿರಾದಾರ, ಅಯ್ಯನಗೌಡ ಬಿರಾದಾರ, ರಾಜು ಕುಲಕರ್ಣಿ, ನೀಲಕಂಠಗೌಡ ಪಾಟೀಲ, ಪ್ರಭಾಕರ ಬಗಲಿ, ರಾಜುಗೌಡ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next