ಹಳೆಯಂಗಡಿ: ವೃತ್ತಿಯಲ್ಲಿನ ಕರ್ತವ್ಯ ನಿಷ್ಠೆಯನ್ನು ಸಮಾಜದ ದೃಷ್ಟಿಕೋನದಲ್ಲಿ ಕಾಣಬೇಕು. ಪೊಲೀಸ್ ಅಧಿಕಾರಿಗಳು ತಮ್ಮ ಸೇವೆಯಲ್ಲಿನ ಪ್ರಾಮಾಣಿಕತೆಯನ್ನು ಸೇವಾ ಸಂಸ್ಥೆಗಳು ಗುರುತಿಸಿದಲ್ಲಿ ಭ್ರಷ್ಟಾಚಾರ ರಹಿತವಾಗಿ ಸಮಾಜಮುಖಿಯಾಗಿ ಬೆಳೆಯಲು ಅವಕಾಶ ಇದೆ ಎಂದು ಮಂಗಳೂರು ತಾಲೂಕು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಅಧ್ಯಕ್ಷ ಸುಭಾಷ್ ಕಾಪಿಕಾಡ್ ಹೇಳಿದರು.
ಮೂಲ್ಕಿ ಪೊಲೀಸ್ ಠಾಣೆಯ ಪೊಲೀಸ್ ಅ ಧಿಕಾರಿಗಳು ಇತ್ತೀಚೆಗೆ ನಡೆದ ಕೊಲೆ ಕೃತ್ಯದ ಆರೋಪಿಗಳನ್ನು ಬಂಧಿಸುವಲ್ಲಿ ವಿಶೇಷ ಶ್ರಮ ವಹಿಸಿದ್ದರಿಂದ ಅವರನ್ನು ಜ.13ರಂದು ಠಾಣೆಯಲ್ಲಿ ಗೌರವಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೂಲ್ಕಿ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ ಮಾತನಾಡಿ, ಕಾನೂನು ರಕ್ಷಣೆಯ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುವ ಪೊಲೀಸ್ ಇಲಾಖೆಯ ಬಗ್ಗೆ ಜನರಲ್ಲಿ ಉತ್ತಮ ಭಾವನೆ ವ್ಯಕ್ತವಾಗಬೇಕಾದರೆ ನಮ್ಮ ಕರ್ತವ್ಯಕ್ಕೂ ಗೌರವ ಸಿಕ್ಕಾಗ ಹೆಚ್ಚು ಜವಾಬ್ದಾರಿಯುತವಾಗಿ ವೃತ್ತಿಯಲ್ಲಿರಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಸಬ್ ಇನ್ಸ್‌ಪೆಕ್ಟರ್ ಶೀತಲ್ ಅಲಗೂರು, ಎಎಸ್‌ಐ ಚಂದ್ರಶೇಖರ್ ಬಿ., ಹೆಡ್ ಕಾನ್ಸ್‌ಟೇಬಲ್ ಮಹೇಶ್ ಎಚ್.ಕೆ., ಸಿಬಂದಿಗಳಾದ ಮಹಮ್ಮದ್ ಹುಸೈನ್ ಮತ್ತು ಸುರೇಶ್ ಶ್ರೀಯಾನ್ ಅವರನ್ನು ವಿಶೇಷವಾಗಿ ಸಮ್ಮಾನಿಸಲಾಯಿತು.
ಸಂಸ್ಥೆಯ ಹರೀಶ್ ಕೋಟ್ಯಾನ್, ಸುರೇಶ್ ದೇವಾಡಿಗ, ಭಾರತಿ ಶೆಟ್ಟಿ, ಮೂಲ್ಕಿ ಪೊಲೀಸ್ ಠಾಣೆಯ ಸಿಬಂದಿ ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತೆ ನಂದಾ ಪಾಯಸ್ ಸ್ವಾಗತಿಸಿ, ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಭಾಷಾ ವಂದಿಸಿದರು.