ಕಲಬುರಗಿ: ದೇಶದಲ್ಲಿ ಯಾರು ಬೆವರು ಸುರಿಸಿ ದುಡಿಯುತ್ತಾರೋ ಅವರ ಸೇವೆ ಶ್ರೇಷ್ಠವಾದದ್ದು. ದುರಂತವೆಂದರೆ ನಮ್ಮ ದೇಶದಲ್ಲಿ ಈ ವರ್ಗವನ್ನು ಕಡೆಗಣಿಸಲಾಗುತ್ತಿರುವುದು ಶೋಚನೀಯ. ಶ್ರಮವರ್ಗಕ್ಕೆ ಪ್ರಾತಿನಿಧ್ಯ ನೀಡಿ ಅವರನ್ನು ಗೌರವಿಸಬೇಕಾದ್ದು ಸಮಾಜದ ಕರ್ತವ್ಯ ಎಂದು ಮಾಜಿ ಸಚಿವ ಎಸ್.ಕೆ. ಕಾಂತಾ ತಿಳಿಸಿದರು.
ನಗರದ ಜಗತ್‌ನಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಪೌರಕಾರ್ಮಿಕರಾಗಿ ಉತ್ತಮ ಸೇವೆ ಸಲ್ಲಿಸಿದ್ದ ದಿ.ಮರೆವ್ವ ಹೈದರಪ್ಪಾ ವಂಟಿ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರಮಿಕ ವರ್ಗ ಬಡವಾಗಿಯೇ ಉಳಿದಿದೆ. ಇದಕ್ಕೆ ಕಾರಣ ಅವರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳು ಸಿಗದಿರುವುದು. ಇದಕ್ಕೆ ಪೂರಕ ಕಾಯ್ದೆ-ಕಾನೂನಿಲ್ಲದಿರುವುದು ಸೇರಿದಂತೆ ಅನೇಕ ಅಂಶಗಳು ಕಾರಣವಾಗಿದೆ. ಆದ್ದರಿಂದ ನ್ಯಾಯಯುತ ಹೋರಾಟದ ಮೂಲಕ ಸಿಗಬೇಕಾದ ಹಕ್ಕು ಪಡೆಯಬೇಕು. ಇದಕ್ಕೆ ಒಗ್ಗಟ್ಟು ಅಗತ್ಯವಾಗಿದ್ದು, ಈ ವರ್ಗದ ಬಗ್ಗೆ ಸಮಾಜ ಹೊಂದಿರುವ ದೃಷ್ಟಿ ಉನ್ನತವಾಗಿರಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಪ್ರೊ| ವಸಂತ ಕುಷ್ಟಗಿ ಮಾತನಾಡಿ, ದುಡಿಯದೇ ಪ್ರತಿಫಲ ಬಯಸುವ ಪ್ರವೃತ್ತಿ ಸರಿಯಲ್ಲ. ಪ್ರತಿಯೊಬ್ಬರು ದುಡಿಯುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಶ್ರಮಿಕರನ್ನು ಪೂಜನೀಯ ಭಾವದಿಂದ ಕಾಣಬೇಕೆಂದರು.
ಪಂಡಿತ ತಾರಾನಾಥ ಆಯುರ್ವೇದ ಪ್ರತಿಷ್ಠಾನದ ಡಾ| ಸದಾನಂದ ಪಾಟೀಲರು ಮಾತನಾಡಿ, ರೋಗ ಬರುವ ಮೊದಲು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ದುಶ್ಚಟಗಳಿಗೆ ಬಲಿಯಾಗದೆ, ಸ್ವತ್ಛ ಪರಿಸರ ಕಾಪಾಡಿದರೆ ಪ್ರಥಮ ವೈದ್ಯರು
ನೀವಾಗುವಿರಿ ಎಂದರು.
ಸಮಾಜ ಸೇವಕ ಸುನೀಲಕುಮಾರ ವಂಟಿ ಅಧ್ಯಕ್ಷತೆ ವಹಿಸಿದ್ದರು. ಎಚ್.ಬಿ. ಪಾಟೀಲ, ರಾಜಶೇಖರ ಮರಡಿ, ಪ್ರಿಯಾಂಕಾ ಪಾಟೀಲ, ಶರಣು ಟೆಂಗಳಿ, ಜಯಶ್ರೀ ವಂಟಿ, ಗುಡುಸಾಬ್, ನೈರ್ಮಲ್ಯ ನಿರೀಕ್ಷಕ ರಾಜು ಕಟ್ಟಿಮನಿ ಹಾಗೂ ಪೌರ ಕಾರ್ಮಿಕರು ಭಾಗವಹಿಸಿದ್ದರು. ರಾಜಕುಮಾರ ಕೋರಿ ಸ್ವಾಗತಿಸಿ, ನಿರೂಪಿಸಿದರು, ಸಂಗಮೇಶ ಇಮ್ಡಾಪೂರ ವಂದಿಸಿದರು.