ಬೆಳ್ತಂಗಡಿ/ಸುಬ್ರಹ್ಮಣ್ಯ: ಕಾರ್ಗಿಲ್ ವಿಜಯೋತ್ಸವದ 20ನೇ ವಾರ್ಷಿಕ ದಿನಾಚರಣೆ ಅಂಗವಾಗಿ “ಶ್ರದ್ಧಾ ಸುಮನ್ ಶ್ರದ್ಧಾಂಜಲಿ ಕಲಶ’ ರವಿವಾರ ಧರ್ಮಸ್ಥಳ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಆಗಮಿಸಿತು.
ಧರ್ಮಸ್ಥಳದಲ್ಲಿ ದೇವಸ್ಥಾನದ ಎದುರು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ನೇತ್ರಾವತಿ ನದಿಯ ನೀರನ್ನು ಕಲಶಕ್ಕೆ ಹಾಕಿ ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದರು. ಪಕ್ಕದಲ್ಲಿದ್ದ ಮಕ್ಕಳನ್ನೂ ಕರೆದು ಕಲಶಕ್ಕೆ ನಮನ ಸಲ್ಲಿಸಲು ಹೇಳಿ ಸೇನೆ ಹಾಗೂ ದೇಶದ ಕುರಿತು ಅಭಿಮಾನ ಮತ್ತು ಗೌರವ ಭಾವನೆ ಬೆಳೆಸುವಂತೆ ತಿಳಿಸಿದರು.
ಕಮಾಂಡಿಂಗ್ ಆಫೀಸರ್ ಡಾ| ಎಸ್.ಸಿ. ಭಂಡಾರಿ, ಸಿ. ದಿನೇಶ್, ಬಿ.ಪಿ. ಶಿವಕುಮಾರ್, ನಾರಾಯಣ, ಕೆ.ಎನ್. ಶೇಷಾದ್ರಿ, ಆರ್. ಸತೀಶ್, ಎಂ.ಬಾಬು, ಕೃತಿ, ಅಶ್ವಿನ್ ಬಾಬು, ಧರ್ಮಾಧಿಕಾರಿಗಳ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಉಪಸ್ಥಿತರಿದ್ದರು.
ಸುಬ್ರಹ್ಮಣ್ಯದಲ್ಲಿ ದೇವಸ್ಥಾನದ ಕಾರ್ಯನಿರ್ವಾ ಹಣಾಧಿಕಾರಿ ರವೀಂದ್ರ ಎಂ.ಎಚ್. ಯಾತ್ರೆಯನ್ನು ಸ್ವಾಗತಿಸಿ ಶ್ರದ್ಧಾ ಯಾತ್ರ ಕಲಶಕ್ಕೆ ಗೌರವ ಸಲ್ಲಿಸಿದರು. ದೇವಸ್ಥಾನದ ಕಚೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಪ್ರಸಾದ್ ಉಪಸ್ಥಿತರಿದ್ದರು.
ಜ. 25ರಂದು ಬೆಂಗಳೂರಿನಿಂದ ಹೊರಟ ಕಲಶ ರವಿವಾರ ಧರ್ಮಸ್ಥಳಕ್ಕೆ ಬಂದು ಬಳಿಕ ಸುಬ್ರಹ್ಮಣ್ಯಕ್ಕೆ ಆಗಮಿಸಿದೆ. 20 ರಾಜ್ಯಗಳ 200 ನಗರಗಳಲ್ಲಿ ಕಲಶ ಯಾನ ನಡೆದು, ಜುಲೈ 27ರಂದು ಹೊಸದಿಲ್ಲಿಯ ಕಾರ್ಗಿಲ್ ಸ್ಮಾರಕ ಸದನ ತಲುಪಿ ಅಲ್ಲಿ ಅದನ್ನು ಇಡಲಾಗುತ್ತದೆ ಎಂದು ಕಮಾಂಡಿಂಗ್ ಆಫೀಸರ್ ಡಾ| ಎಸ್.ಸಿ. ಭಂಡಾರಿ ತಿಳಿಸಿದ್ದಾರೆ.