Advertisement

ನಾಡಿದ್ದು ಯಕ್ಷ ಪರ್ವ ರಂಗ ಮಹೋತ್ಸವ

06:31 PM Oct 11, 2019 | Naveen |

ಹೊನ್ನಾವರ: ಯಕ್ಷಗಾನ ಕಲಾಲೋಕದಲ್ಲಿ ಸ್ತ್ರೀ ಮತ್ತು ಪುರುಷ ಪಾತ್ರಗಳೆರಡರಲ್ಲೂ ಸಮಾನ ಯಶಸ್ಸು ಕಂಡಿರುವ ಅಪರೂಪದ ಕಲಾವಿದ ನೀಲ್ಕೋಡ ಶಂಕರ ಹೆಗಡೆ. ನೂರು ಕಿಮೀ. ವ್ಯಾಪ್ತಿಯಲ್ಲಿ ರಾತ್ರಿ ಮೂರು ಪಾತ್ರಗಳನ್ನು ನಿಭಾಯಿಸುವ ಚುರುಕಿನ ಕಲಾವಿದ. ಇಷ್ಟೇ ಆದರೆ ಬರೆಯುವ ಅಗತ್ಯವಿರಲಿಲ್ಲ.

Advertisement

ಒಬ್ಬ ತಾಯಿ ಕರುಳಿನ ಸಹೃದಯನಾಗಿ, ಅಶಕ್ತ ಕಲಾವಿದರಿಗೆ ನೆರವಾಗುವ, ಹಿರಿಯ ಕಲಾವಿದರನ್ನು ಗೌರವಿಸುವ, ವರ್ಷಕ್ಕೊಮ್ಮೆ ದಿನವಿಡೀ ಉಚಿತ ಯಕ್ಷಗಾನ ಕಾರ್ಯಕ್ರಮ ಏರ್ಪಡಿಸಿ ಹಬ್ಬ ಮಾಡುವ ಶಂಕರ ಹೆಗಡೆಯಂತಹ ಕಲಾವಿದರು ಯಕ್ಷಗಾನದಲ್ಲಿ ವಿರಳ.

ಅಭಿನೇತ್ರಿ ಆರ್ಟ್‌ ಟ್ರಸ್ಟ್‌ ರಚಿಸಿಕೊಂಡ ಶಂಕರ ಹೆಗಡೆ ಕಳೆದ ವರ್ಷ 4ಲಕ್ಷ ರೂ. ಗೂ ಹೆಚ್ಚಿನ ಮೊತ್ತ ದಾನಿಗಳಿಂದ ಸಂಗ್ರಹಿಸಿ, ಆರ್ಥಿಕ ಸಮಸ್ಯೆಯುಳ್ಳ ಕಲಾವಿದರಿಗೆ ಧನಸಹಾಯ ಮಾಡಿದ್ದಲ್ಲದೇ ಕಲಾವಿದರನ್ನು ಗೌರವಿಸಿದರು. ಹಿಂದಿನಬಾರಿಯ ಉಳಿತಾಯದ ಹಣವನ್ನು ಠೇವಣಿ ಇಟ್ಟಿದ್ದಾರೆ.

ತಮ್ಮ ನಿತ್ಯದ ವೇಷ ಮುಗಿದ ಮೇಲೆ ಪ್ರತಿ ಆಟಕ್ಕೆ ಒಂದಿಷ್ಟು ಹಣ ತೆಗೆದಿಡುವ ಶಂಕರ ಹೆಗಡೆ ಆ ಮೊತ್ತವನ್ನೂ ಸೇರಿಸಿ ವಾರ್ಷಿಕ ಸಂಭ್ರಮ ನೆರವೇರಿಸುತ್ತಾರೆ. ದಾನಕೊಟ್ಟವರಿಗೆ ಮರೆತು ಹೋಗುವಷ್ಟು ಒಳ್ಳೆಯ ಆಟ ತೋರಿಸುತ್ತಾರೆ.

ಅ.13 ರಂದು ಹೊನ್ನಾವರ ಪ್ರಭಾತನಗರ ಮೂಡಗಣಪತಿ ಸಭಾಭವನದಲ್ಲಿ ಯಕ್ಷಪರ್ವ ರಂಗಮಹೋತ್ಸವ ಏರ್ಪಡಿಸಿದ್ದಾರೆ. ಕೋಟ ಸುರೇಶ ಬಂಗೇರರಿಗೆ ಕಣ್ಣಿ ಪ್ರಶಸ್ತಿ, ಮೂರೂರು ಕೃಷ್ಣ ಭಟ್ಟರಿಗೆ ಅಭಿನೇತ್ರಿ ಪ್ರಶಸ್ತಿ ನೀಡಲಿದ್ದಾರೆ. ಅಪಘಾತದಿಂದ ಗಾಯಗೊಂಡು ವಿಶ್ರಾಂತಿ ಪಡೆಯುತ್ತಿರುವ ಶ್ರೀಪಾದ ಹೆಗಡೆ ಕಣ್ಣಿ, ತ್ರಯಂಬಕ ಹೆಗಡೆ ಇಡುವಾಣಿ ಮತ್ತು ಶಾಂತಾರಾಮ ಭಂಡಾರಿ ಕುಟುಂಬಕ್ಕೆ ಧನಸಹಾಯ ಮಾಡಲಿದ್ದಾರೆ. ಬೆಳಗ್ಗೆ 10ಕ್ಕೆ ಕೆರೆಕೋಣ ಯಕ್ಷಕಿರೀಟಿ ಮಕ್ಕಳ ಕುಶ-ಲವ ನಂತರ ಕಲಾವೃಂದ ಹೊಸಪಟ್ಟಣ ಅವರ ಕಂಸವಧೆ ಯಕ್ಷಗಾನವಿದೆ. ಮಧ್ಯಾಹ್ನ 2ರಿಂದ ತಾಳಮದ್ದಲೆ ನಡೆಯಲಿದ್ದು ವಿದ್ವಾಂಸರಾದ ಉಮಾಕಾಂತ ಭಟ್‌ ಕೆರೆಕೈ, ಗಣಪತಿ ಭಟ್‌ ಸಂಕದಗುಂಡಿ ಪಾಲ್ಗೊಳ್ಳಲಿದ್ದಾರೆ.

Advertisement

ಸಂಜೆ 4ಕ್ಕೆ ಸುಬ್ರಹ್ಮಣ್ಯ ಧಾರೇಶ್ವರ, ಗಣಪತಿ ಭಟ್‌, ಸರ್ವೇಶ್ವರ ಮೂರೂರು, ಶಂಕರ ಭಾಗ್ವತ, ಗಣೇಶ ಗಾಂವ್ಕರ ಇವರಿಂದ ಹಿಮ್ಮೇಳ ವೈಭವವಿದೆ. ಸಂಜೆ 7ಕ್ಕೆ ಅಭಿಮನ್ಯು ಮತ್ತು ಗದಾಯುದ್ಧ ಆಟವಿದೆ. ಗಣೇಶ ನಾಯ್ಕ, ಅಶೋಕ ಭಟ್‌, ಕಡಬಾಳ ಉದಯ ಹೆಗಡೆ, ಕಾರ್ತಿಕ ಕಣ್ಣಿ ಮೊದಲಾದವರು ಪಾಲ್ಗೊಳ್ಳುವರು.

ಮುಂಜಾನೆ 10ಕ್ಕೆ ಡಾ| ಶ್ರೀಪಾದ ಶೆಟ್ಟಿ ಅಧ್ಯಕ್ಷತೆಯಲ್ಲಿ ಕೃಷ್ಣ ಯಾಜಿ ಬಳಕೂರು ಕಾರ್ಯಕ್ರಮ ಉದ್ಘಾಟಿಸುವರು. ಸಂಜೆ 6ಕ್ಕೆ ನಡೆಯುವ ಮುಕ್ತಾಯ ಸಮಾರಂಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ದಿನಕರ ಶೆಟ್ಟಿ, ಜಿ.ಜಿ. ಶಂಕರ, ಸಾಲಿಗ್ರಾಮ ಮೇಳದ ಕಿಶನ್‌ ಕುಮಾರ ಹೆಗಡೆ ಮೊದಲಾದ ಗಣ್ಯರು ಪಾಲ್ಗೊಳ್ಳುವರು.

ಶಂಕರ ಹೆಗಡೆಯ ಕಲಾಪ್ರೇಮವನ್ನು ಮೆಚ್ಚಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ದಾನಿಗಳು ಸಹಾಯ ಮಾಡುತ್ತಾರೆ. ಹೀಗೆ ಹಣ ಸೇರಿಸಿ ಧನ್ಯತೆ ಪಡೆಯುವ ಅಪರೂಪದ ಕಲಾವಿದ ನೀಲ್ಕೋಡ ಶಂಕರ ಹೆಗಡೆ ಕಾರ್ಯಕ್ರಮಕ್ಕೆ ಕಲಾಪ್ರೇಮಿಗಳಿಂದ ಸರ್ವರೀತಿಯ ಸಹಕಾರ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next