Advertisement

Honnavara: ಲಿಂಗನಮಕ್ಕಿಯಿಂದ ನೀರು, ಜೋಗಕ್ಕೆ ಕಳೆ, ಕೊಳ್ಳದಲ್ಲಿ ಕಳವಳ

04:10 PM Jul 31, 2024 | Team Udayavani |

ಹೊನ್ನಾವರ: ಜು. 31ರ ಬುಧವಾರ ಮುಂಜಾನೆ ಲಿಂಗನಮಕ್ಕಿ ಜಲಾಶಯ ಶೇ. 86.51 ಷ್ಟು ತುಂಬಿದೆ. ಜಲಮಟ್ಟ  1812.65 ಅಡಿಗಳಿಗೆ ಏರಿದೆ. ಓಲ ಹರಿವು 82,587 ಕ್ಯೂಸೆಕ್ಸ್ ಆಗಿರುವುದರಿಂದ ನಾಳೆ ಅ. 1ರ ಮುಂಜಾನೆ ನೀರು ಬಿಡುವ ಹಂತ 1816 ಅಡಿ ತಲುಪಲಿದ್ದು ಮುನ್ನೆಚ್ಚರಿಕೆಯ ಕ್ರಮವಾಗಿ 10000 ಕ್ಯೂಸೆಕ್ಸ್ ನೀರಿನಿಂದ ಆರಂಭಿಸಿ ಒಳಹರಿವು ಲೆಕ್ಕ ಹಾಕಿ ನೀರು ಬಿಡಲಾಗುವುದು ಎಂದು ಕೆಪಿಸಿ ಅಧಿಕೃತವಾಗಿ ಪ್ರಕಟಿಸಿದೆ.

Advertisement

ಲಿಂಗನಮಕ್ಕಿ ಆಣೆಕಟ್ಟಿನ ಕೆಲವು ದ್ವಾರ ಸ್ವಲ್ಪ ಮೇಲೆತ್ತಿ ಬಿಡುವ ನೀರು ಜಲಪಾತಕ್ಕೆ ಬಂದು ಧುಮುಕಲಿದ್ದು ಈ ಮಧ್ಯೆ ಅಂತರ 15 ಕಿ.ಮೀ. ಆಗಿದ್ದು ಅಲ್ಲಿ ಮಳೆ ಇದ್ದರೆ ಜೋಗಕ್ಕೆ ಕಳೆ ಬಂದು ರಮಣೀಯವಾಗಲಿದೆ.

ಅಲ್ಲಿಂದ ನೀರು 35 ಕಿ.ಮೀ. ಉದ್ದದ ಶರಾವತಿ ಕೊಳ್ಳದಲ್ಲಿ ತುಂಬಿಕೊಳ್ಳಲಿದ್ದು ಗೇರಸೊಪ್ಪಾ ಆಣೆಕಟ್ಟಿನಲ್ಲಿ ನೀರು 10 ಅಡಿ ಕಡಿಮೆ ಇದ್ದು 2 ಟಿ.ಎಂ.ಸಿ. ನೀರನ್ನು ಸಂಗ್ರಹಿಸಿಕೊಳ್ಳಲಿದೆ. ಗೇರಸೊಪ್ಪೆಯಲ್ಲಿ ವಿದ್ಯುತ್ ಉತ್ಪಾದಿಸಿ ನೀರು ಗೇರುಸೊಪ್ಪೆಯಿಂದ ಹೊನ್ನಾವರದ ವರೆಗಿನ ಕೊಳ್ಳಕ್ಕೆ ಹರಿದು ಬರಲಿದೆ.

ಹಿಂದಿನ ಲೆಕ್ಕಾಚಾರದಲ್ಲಿ 25000 ಕ್ಯೂಸೆಕ್ಸ್ ನೀರು ಹೊರ ಬಿಟ್ಟರೂ ಶರಾವತಿ ಕೊಳ್ಳದಲ್ಲಿ ಪಾತಳಿ ಮಟ್ಟದಲ್ಲಿ ನೀರು ಹರಿಯಲಿದೆ. ಇನ್ನೂ ಹೆಚ್ಚು ನೀರು ಬಿಟ್ಟರೇ ಎಲ್ಲಿಯ ತನಕ ನೀರು ಏರಲಿದೆ ಎಂದು ಕೊಳ್ಳದ ಎಡಬಲ ದಂಡೆಗಳಲ್ಲಿರುವ ಮರ ಹಾಗೂ ಕಟ್ಟಡದ ಮೇಲೆ ಗುರುತು ಮಾಡಲಾಗಿದೆ.

ನೀರು ಬಿಟ್ಟ ಪ್ರಮಾಣವನ್ನು ಧ್ವನಿವರ್ಧಕ ಮತ್ತು ಮಾಧ್ಯಮಗಳ ಮುಖಾಂತರ ಪ್ರಚಾರ ಮಾಡುವುದರಿಂದ ಜನಕ್ಕೆ ಸುರಕ್ಷಿತ ಸ್ಥಳಕ್ಕೆ ಹೋಗಲು ಅನುಕೂಲ. ಲಿಂಗನಮಕ್ಕಿಯಲ್ಲಿ ಬಿಟ್ಟ ನೀರು ಗೇರಸೊಪ್ಪೆಗೆ ಬರಲು 12 ತಾಸು ತಗಲುತ್ತದೆ. ಈ ಸಮಯದಲ್ಲಿ ಜನ ಸುರಕ್ಷಿತ ಸ್ಥಳ ಸೇರಬಹುದು. ಈ ಎಲ್ಲ ವಿವರಗಳನ್ನು ಶರಾವತಿ ಕೊಳ್ಳದ ಜನಕ್ಕೆ ಪ್ರತಿವರ್ಷ ನೀಡಲಾಗುತ್ತಿದೆ.

Advertisement

ಇಷ್ಟು ಪೂರ್ವ ತಯಾರಿ ಇದ್ದರೂ ಅಕಸ್ಮಾತ ಲಿಂಗನಮಕ್ಕಿ ಆಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಮೇಘಸ್ಪೋಟದಂತಹ ಘಟನೆ ಸಂಭವಿಸಿ ಆಣೆಕಟ್ಟಿಗೆ 4-5 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬಂದರೆ ಅಷ್ಟು ನೀರನ್ನು ಸ್ವಲ್ಪ ಸ್ವಲ್ಪವಾಗಿ ಬಿಡಬೇಕಾಗುತ್ತದೆ.

ಆ ಸಮಯದಲ್ಲಿ ಶರಾವತಿ ಕೊಳ್ಳದಲ್ಲಿರುವ, ಶರಾವತಿಗೆ ಸೇರುವ ಕಲ್ಕಟ್ಟೆ, ಮಾಗೋಡು, ಹೈಗುಂದ, ಹಡಿನಬಾಳ ಹೊಳೆಗಳಿಗೆ ನೆರೆ ಬರುವಷ್ಟು ಮಳೆ ಪಶ್ಚಿಮ ಘಟ್ಟದಲ್ಲಿ ಸುರಿದರೆ, ಅಮವಾಸ್ಯೆಯ ಭರ್ತಿ ಸಮಯವಾದರೆ ಅರಬ್ಬಿ ಸಮುದ್ರ ನೀರು ಸ್ವೀಕರಿಸಲು ನಿಧಾನ ಮಾಡಿದರೆ ಗೇರಸೊಪ್ಪೆಯಿಂದ ಹೊನ್ನಾವರದ ವರೆಗಿನ ತಗ್ಗು ಪ್ರದೇಶ ಮುಳುಗಲಿದೆ.

ಲಿಂಗನಮಕ್ಕಿ ಇತಿಹಾಸದಲ್ಲಿ 1982ರಲ್ಲಿ ಮಾತ್ರ ಇಂತಹ ಘಟನೆ ನಡೆದಿತ್ತು. ಈಗ ಎಲ್ಲರೂ ಪಾಠ ಕಲಿತಿದ್ದಾರೆ. ಪರಿಣಾಮಕಾರಿಯಾಗಿ ನೆರೆ ನಿಯಂತ್ರಣ ಆಗುವ ವಿಶ್ವಾಸವಿದೆ ಎಂಬುದು ಶರಾವತಿ ಕೊಳ್ಳದ ಜನರ ಅಭಿಪ್ರಾಯ. ಜಿಲ್ಲಾಡಳಿತ, ತಾಲೂಕಾ ಆಡಳಿತವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ನೆರೆ ಸಂದರ್ಭ ಎದುರಿಸಲು ಸಜ್ಜುಗೊಳಿಸಿದ್ದು ಲಿಂಗನಮಕ್ಕಿ ಗೇರಸೊಪ್ಪಾಕ್ಕೆ ಭೇಟಿ ನೀಡಿ ಬಂದಿದ್ದಾರೆ. ಶರಾವತಿ ಕೊಳ್ಳದಲ್ಲಿ ಸಹಜ ಕಳವಳ, ಕುತೂಹಲ ಆರಂಭವಾಗಿದ್ದರೆ ನಾಡಿನಲ್ಲಿ ಜೋಗದ ಅಬ್ಬರ ಕಾಣುವ ಕುತೂಹಲ ಮೂಡಿದೆ.

ಗೇರಸೊಪ್ಪಾದಿಂದ ಹೊನ್ನಾವರದವರೆಗಿನ ಶರಾವತಿ ಕೊಳ್ಳದಲ್ಲಿ ನೀರು ಬಿಟ್ಟಾಗ ಎಷ್ಟು ಏರಿಕೆ ಆಗಲಿದೆ ಎಂಬುದನ್ನು ಬಣ್ಣಗಳಿಂದ ಎಡಬಲ ದಂಡೆಗಳಲ್ಲಿ ಗುರುತಿಸಲಾಗಿದೆ.

50000 ಕ್ಯೂಸೆಕ್ಸ್ ನೀರು ಬಿಟ್ಟರೆ ನಂ. 1 (ಬಿಳಿ ಬಣ್ಣ), 75000 ಕ್ಯೂಸೆಕ್ಸ್ ಬಿಟ್ಟರೆ ನಂ. 2 (ಹಸಿರು ಬಣ್ಣ), 100000 ಕ್ಯೂಸೆಕ್ಸ್ ಬಿಟ್ಟರೆ ನಂ. 3 (ನೀಲಿ ಬಣ್ಣ), 150000 ಕ್ಯೂಸೆಕ್ಸ್ ಬಿಟ್ಟರೆ ನಂ. 4 (ಹಳದಿ ಬಣ್ಣ), 200000 ಕ್ಯೂಸೆಕ್ಸ್ ಬಿಟ್ಟರೆ ನಂ. 5 (ಕೆಂಪು ಬಣ್ಣ). ಇದನ್ನು ಗಮನಿಸಿ ಕೊಳ್ಳದ ಜನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next