ಹೊನ್ನಾವರ: ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ಜಿಲ್ಲಾಮಟ್ಟದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವನ್ನು ಜ. 20ರಂದು ಇಲ್ಲಿನ ಸೇಂಟ್ ಥಾಮಸ್ ಪ್ರೌಢಶಾಲೆಯ ಜಯಚಾಮರಾಜೇಂದ್ರ ಸಭಾಗೃಹದಲ್ಲಿ ಏರ್ಪಡಿಸಲಾಗಿದೆ.
ದೇಶದ ಆಸ್ತಿ ಹಾಗೂ ಭವಿಷ್ಯವಾಗಿರುವ ಮಕ್ಕಳಲ್ಲಿ ಸದ್ಗುಣ ಮತ್ತು ಸದ್ಭಾವನೆಗಳಿಂದ ಮೌಲ್ಯವರ್ಧಿತರಾಗಬೇಕು ಎಂಬ ಉದ್ದೇಶದಿಂದ ಹಿರಿಯ ಕವಿ ಸುಮುಖಾನಂದ ಜಲವಳ್ಳಿ ಅವರ ಸಂಚಾಲಕತ್ವದಲ್ಲಿ ಡಾ| ಎನ್.ಆರ್. ನಾಯಕ ಅಧ್ಯಕ್ಷತೆಯಲ್ಲಿ ಸಾಹಿತ್ಯ ವೇದಿಕೆಯನ್ನು 2014ರಲ್ಲಿ ರಚಿಸಲಾಗಿತ್ತು. ತಾಲೂಕು ಮಟ್ಟದಲ್ಲಿ ವಿವಿಧ ಚಟುವಟಿಕೆ ನಡೆಸುತ್ತಾ ಬಂದ ವೇದಿಕೆ ಈ ಬಾರಿ ಜಿಲ್ಲಾಮಟ್ಟದ ಸಮ್ಮೇಳನ ಏರ್ಪಡಿಸಿದ್ದು 6-10ನೇ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ವಿದ್ಯಾರ್ಥಿಗಳಿಂದಲೇ ನಡೆಸಲ್ಪಡುವ ಈ ಸಮ್ಮೇಳನದಲ್ಲಿ ವಿದ್ಯಾರ್ಥಿ ಕವಿಗೋಷ್ಠಿ, ಕಥಾಗೋಷ್ಠಿ, ವಿಚಾರಗೋಷ್ಠಿ, ಹಸ್ತಪತ್ರಿಕೆ ಸ್ಪರ್ಧೆ, ಮಕ್ಕಳ ಸಾಹಿತ್ಯ ಪುರಸ್ಕಾರ ಮೊದಲಾದ ಕಾರ್ಯಕ್ರಮಗಳಿವೆ.
ಅಂದು ಬೆಳಗ್ಗೆ 9:30ಕ್ಕೆ ಆರಂಭವಾಗುವ ಸಮ್ಮೇಳನದಲ್ಲಿ ಕುಮಟಾ ಗಿಬ್‌ಬಾಲಕಿಯರ ಪ್ರೌಢಾಶಾಲೆಯ ಪವಿತ್ರಾ ಹೆಗಡೆ ಸರ್ವಾಧ್ಯಕ್ಷತೆ ವಹಿಸುವರು. ಶಿರಸಿ ಮಾರಿಕಾಂಬಾ ಪ್ರೌಢಶಾಲೆಯ ವರ್ಷಿಣಿ ಎಸ್. ಹೆಗಡೆ ಸಮ್ಮೇಳನ ಉದ್ಘಾಟಿಸುವರು. ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಮತ್ತು ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅತಿಥಿಗಳಾಗಿ ಪಾಲ್ಗೊಳ್ಳುವರು. ನಂತರ ನಡೆಯುವ ಮಕ್ಕಳ ಸಾಹಿತ್ಯ ವಿಚಾರ ಗೋಷ್ಠಿಯಲ್ಲಿ ಡಾ| ಎನ್.ಆರ್. ನಾಯಕ ಅಧ್ಯಕ್ಷತೆ ವಹಿಸುವರು. ಮಕ್ಕಳ ಕಾವ್ಯ, ಕಥೆ, ನಾಟಕ, ಕಾದಂಬರಿಗಳ ಸಾಹಿತಿಗಳಾದ ದತ್ತಗುರು ಕಂಠಿ, ಸುಧಾ ಭಂಡಾರಿ, ಪಿ.ಆರ್. ನಾಯ್ಕ, ಜನಾರ್ದನ ಹರ್ನೀರು ಮಾತನಾಡುವರು. ನಂತರ ವಿದ್ಯಾರ್ಥಿ ಕಥಾಗೋಷ್ಠಿಯ ಅಧ್ಯಕ್ಷತೆಯನ್ನು ವನರಾಗ ಶರ್ಮ ಯಲ್ಲಾಪುರ ವಹಿಸುವರು.
ಜಿಲ್ಲೆಯ ವಿವಿಧ ಭಾಗಗಳ ವಿದ್ಯಾರ್ಥಿಗಳು ಕಥಾವಾಚನ ಮಾಡುವರು. ಮಧ್ಯಾಹ್ನ ನಡೆಯುವ ವಿಚಾರ ಗೋಷ್ಠಿಯಲ್ಲಿ ಕೃಷ್ಣಮೂರ್ತಿ ಹೆಬ್ಟಾರ ಅಧ್ಯಕ್ಷತೆ ವಹಿಸುವರು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಳ್ಳುವರು. ಹಿರಿಯ ಕವಿ ವಿಷ್ಣು ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯುವ ವಿದ್ಯಾರ್ಥಿ ಕಾವ್ಯಗೋಷ್ಠಿಯಲ್ಲಿ 16 ಪುಟಾಣಿ ಕವಿಗಳು ಪಾಲ್ಗೊಳ್ಳುವರು. ಡಾ| ಬಿ.ಎ. ಸನದಿ ಅವರಿಗೆ ಮಕ್ಕಳ ಸಾಹಿತ್ಯ ಪುರಸ್ಕಾರ ನೀಡಲಾಗುವುದು. ವಿದ್ಯಾರ್ಥಿ ಎಂ.ಎಸ್. ಶೋಭಿತ್ ಸಮಾರೋಪ ಭಾಷಣ ಮಾಡಲಿದ್ದಾನೆ. ಮಾಸ್ತಿ ಗೌಡ, ಎಸ್.ವಿ. ಬೈಲೂರ ಪಾಲ್ಗೊಳ್ಳುವರು.
ಸಮ್ಮೇಳನದ ಅಧ್ಯಕ್ಷ ಡಾ| ಎನ್.ಆರ್. ನಾಯ್ಕ, ಸಂಚಾಕಲ ಸುಮುಖಾನಂದ ಜಲವಳ್ಳಿ, ಮತ್ತು ವಿವಿಧ ತಾಲೂಕುಗಳ ಪ್ರತಿನಿಧಿಗಳು ಸಮ್ಮೇಳನಕ್ಕೆ ಸರ್ವಸಹಕಾರ ಕೋರಿದ್ದಾರೆ.
ಸಮ್ಮೇಳನದ ಅಂಗವಾಗಿ ಏರ್ಪಡಿಸಲಾದ ಮಕ್ಕಳ ಹಸ್ತಪತ್ರಿಕೆ ಸ್ಪರ್ಧೆಯಲ್ಲಿ ಶಿರಸಿಯ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯ ಮಕರಂದ ಮತ್ತು ಶಿರಸಿಯ ಗಾಂನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿಗುರು ದ್ವಿತೀಯ ಸ್ಥಾನಗಳಿಸಿದ್ದು, ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಪ್ರಕಟಿಸಲಾಗಿದೆ.