Advertisement

ಸಹಜ ಸ್ಥಿತಿಗೆ ಮರಳಿದ ಹೊನ್ನಾವರ ಪಟ್ಟಣ

07:30 AM Dec 11, 2017 | Team Udayavani |

ಕಾರವಾರ: ಎರಡು ಕೋಮಿನ ಮಧ್ಯೆ ನಡೆದ ಸಂಘರ್ಷದಿಂದ ಕಳೆದ ನಾಲ್ಕು ದಿನಗಳಿಂದ ಸ್ತಬ್ಧವಾಗಿದ್ದ ಹೊನ್ನಾವರ ಸೋಮವಾರದಿಂದ ಸಹಜ ಸ್ಥಿತಿಗೆ ಮರಳಲಿದೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ತಿಳಿಸಿದ್ದಾರೆ. 

Advertisement

ಭಾನುವಾರ ಜಿಲ್ಲಾ ಪೊಲೀಸ್‌ ಅಧೀಕ್ಷಕರು, ತಹಶೀಲ್ದಾರ್‌ ಸಮ್ಮುಖದಲ್ಲಿ ಹೊನ್ನಾವರದ ವಿವಿಧ ಸಂಘ, ಸಂಸ್ಥೆಗಳ ಸುಮಾರು 50ಕ್ಕೂ ಹೆಚ್ಚು ಮುಖಂಡರೊಂದಿಗೆ ಸಂವಾದ ನಡೆಸಿದ ಅವರು, ಸೋಮವಾರದಿಂದ ಪಟ್ಟಣ ಸಹಜ ಸ್ಥಿತಿಗೆ ಮರಳಲಿದೆ. ಎಲ್ಲ ಅಂಗಡಿ- ಮುಂಗಟ್ಟುಗಳು ಹಾಗೂ ಶಾಲಾ- ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಮುಂಜಾಗ್ರತಾ ಕ್ರಮವಾಗಿ ಪಟ್ಟಣದಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲು ಎಸ್‌ಪಿ ಸೂಚಿಸಿದ್ದಾರೆ ಎಂದರು.

ವಿವಾದಿತ ಜಾಗದ ಬಗ್ಗೆ ಸರ್ವೇ ಮಾಡಿಸಲಾಗುವುದು. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮಣಿಪಾಲ ಆಸ್ಪತ್ರೆ ಹಾಗೂ ಇನ್ನಿತರ ಮೂಲಗಳಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಲ್ಲದೆ ಘಟನೆ ಬಗ್ಗೆ ತನಿಖೆ ತೀವ್ರ ಗತಿಯಲ್ಲಿ ಸಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ವಿನಾಕಾರಣ ಪ್ರಚೋದನಾಕಾರಿ ಮಾಹಿತಿ ರವಾನಿಸುವವರ ವಿರುದ್ಧ ಈಗಾಗಲೇ ನಿಗಾ ವಹಿಸಲಾಗಿದ್ದು ಈಗಾಗಲೇ ಅಂತಹ ಮಾಹಿತಿ ರವಾನೆ ಮಾಡಿದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ ಹಾಗೂ ಮಾಹಿತಿಗಳ ಸ್ಕ್ರೀನ್‌ಶಾಟ್‌ಗಳನ್ನು ಸಂಗ್ರಹಿಸಲಾಗಿದೆ. 

ತಪ್ಪಿತಸ್ಥರ ವಿರುದ್ಧ ಐಪಿಸಿ ಹಾಗೂ ಐಟಿ ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು. ಫೇಸ್‌ಬುಕ್‌, ಟ್ವಿಟ್ಟರ್‌ ಹಾಗೂ ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ ಪ್ರಚೋದನಾಕಾರಿ ಮಾಹಿತಿ ಪೋಸ್ಟ್‌ ಮಾಡುವವರು ಕಂಡು ಬಂದಲ್ಲಿ ಅಂತಹ ಮಾಹಿತಿಯನ್ನು ಸ್ಕ್ರೀನ್‌ಶಾಟ್‌ ತೆಗೆದು ಪೊಲೀಸ್‌ ಇಲಾಖೆಯ ಕಂಟ್ರೋಲ್‌ ರೂಮ್‌ ಮೊ: 94808052010 ಹಾಗೂ ಜಿಲ್ಲಾಧಿಕಾರಿ ಕಚೇರಿ ವಾಟ್ಸ್‌ಆ್ಯಪ್‌ ಕಂಪ್ಲೆಂಟ್‌ ಮೊ: 9483511015ಗೆ ಕಳುಹಿಸುವಂತೆ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next