ಹೊನ್ನಾವರ: ವಾರದ ರಜೆಯೊಟ್ಟಿಗೆ ಇತರ ರಜೆಗಳು ಸೇರಿ 2-3 ದಿನ ಬಿಡುವಾದರೆ ಬೆಂಗಳೂರಿನಿಂದ ಉತ್ತರ ಕನ್ನಡಕ್ಕೆ ಧಾವಿಸಿ ಬರುವ ಪ್ರವಾಸಿಗರ ಸಂಖ್ಯೆ ಇತರ ದಿನಗಳಿಗಿಂತ ನಾಲ್ಕುಪಟ್ಟು ಹೆಚ್ಚಾಗುತ್ತದೆ. ರಜೆ ಆರಂಭವಾದೊಡನೆ ನಿತ್ಯ ಪ್ರವಾಸಿಗರ ದಟ್ಟಣೆ ಇರುತ್ತದೆ. ಪ್ರವಾಸಿಗರಿಗೆ ಬೇಕಷ್ಟು ಲಾಡ್ಜ್ಗಳು ಸಿಗುತ್ತಿಲ್ಲ. ಅವರು ನಿರೀಕ್ಷಿಸಿದ ಊಟೋಪಚಾರ ಎಲ್ಲೆಡೆ ಸಿಗುತ್ತಿಲ್ಲ. ಕೊನೆಪಕ್ಷ ಎಲ್ಲರೊಂದಿಗೆ ಸೌಜನ್ಯ ಪೂರಿತ ವ್ಯವಹಾರವೂ ಇಲ್ಲ. ಪ್ರವಾಸಿ ಸೇವೆಯಲ್ಲಿ ತೊಡಗಿಕೊಂಡಿರುವ ಏಜೆಂಟ್ ಎಂದು ಹೇಳಿಕೊಳ್ಳುವವರಿಗೆ ವ್ಯವಹರಿಸುವಲ್ಲಿ ಆತ್ಮೀಯತೆ, ಕಾಳಜಿ ಇಲ್ಲದಿದ್ದರೆ ಕೇವಲ ದುಡ್ಡಿನ ಮುಖ ನೋಡಿದರೆ ಪ್ರವಾಸೋದ್ಯಮ ಬೆಳವಣಿಗೆಯಾಗುವುದಿಲ್ಲ ಎಂದು ಎಚ್ಚರಿಸಬೇಕಾಗಿದೆ.
ಪುರಾತತ್ವ ಇಲಾಖೆ ಗುರುತಿಸಿದ ರಾಜ್ಯದ ಐತಿಹಾಸಿಕ ಸ್ಥಳಗಳಲ್ಲಿ ಮತ್ತು ಪ್ರಮುಖ ಪ್ರವಾಸಿ ಕ್ಷೇತ್ರಗಳಲ್ಲಿ ಪ್ರವಾಸೋದ್ಯಮ ಇಲಾಖೆ ಗೈಡ್ ಗಳನ್ನು ನೇಮಿಸುತ್ತಾರೆ ಅಥವಾ ಯುವಕರಿಗೆ ತರಬೇತಿ ನೀಡಿ ಅವರಿಗೆ ಗೈಡ್‌ಗಳಾಗಿ ಗುರುತಿನ ಚೀಟಿ ನೀಡಲಾಗುತ್ತದೆ. ಅವರಿಗೆ ಸ್ಥಳದ ಸಮಗ್ರ ಪರಿಚಯ, ಇತಿಹಾಸ ಕಂಠಪಾಠವಾಗಿರುತ್ತದೆ.
ಪ್ರತಿಫಲವಾಗಿ ಪಡೆಯುವ ಹಣವನ್ನು ನಿಗದಿಪಡಿಲಾಗಿರುತ್ತದೆ. ಈಗ ಗೈಡ್ ಎಂದು ಹೇಳಿಕೊಳ್ಳುವವರಿಗೆ ಸ್ಥಳ ಪರಿಚಯವೇ ಇಲ್ಲ. ಜೊತೆಯಲ್ಲಿ ಇದ್ದಕ್ಕಿದ್ದಂತೆ ಪ್ರವಾಸಿಗರ ದಟ್ಟಣೆಯಾದಾಗ ಅವರು ಹೇಳಿದ್ದೇ ದರ. ಕಂಡಕಂಡಲ್ಲಿ ವಿವಿಧ ಇಲಾಖೆ ಗೇಟ್‌ಗಳು, ಪಾರ್ಕಿಂಗ್ ಫೀ ಕಾಟ ಬೇರೆ. ಗೈಡ್‌ಗಳು ಇಲ್ಲದ ಕಾರಣ ಏಜೆಂಟ್ ಎಂದು ಹೇಳಿಕೊಳ್ಳುವವರು ಗೈಡ್ ಮಾಡಲು ಹೋಗಿ ಮಿಸ್ ಗೈಡ್ ಮಾಡುತ್ತಾರೆ. ಕೆಲವರು ಸರಿಯಾಗಿ ವರ್ತಿಸದೇ ಗದ್ದಲಕ್ಕೆ ಕಾರಣರಾಗುತ್ತಾರೆ. ಇದನ್ನು ಜಿಲ್ಲಾಡಳಿತ ನಿಯಂತ್ರಿಸಬೇಕು. ಇಲ್ಲಿಯ ಏಜೆಂಟರಿಗೂ ತರಬೇತಿ ನೀಡಿ, ಗುರುತಿನ ಪತ್ರ ನೀಡುವ ಕೆಲಸ ಆಗಬೇಕಾಗಿದೆ. ಪ್ರವೇಶ ಫೀ ವಸೂಲಿ ಮಾಡುವ ಅರಣ್ಯ ಇಲಾಖೆಯ ಗುತ್ತಿಗೆದಾರರು ಯದ್ವಾತದ್ವಾ ಹಣ ಕೇಳುವ ಆರೋಪವಿದೆ.
ಗೋಕರ್ಣ, ಮುರ್ಡೇಶ್ವರ, ಹೊನ್ನಾವರ ಮೊದಲಾದೆಡೆ ಬಂದಿಳಿಯುವ ಪ್ರವಾಸಿಗರಲ್ಲಿ ಮದುವೆ ಮುಂಚಿನ ಛಾಯಾಗ್ರಹಣಕ್ಕೆ ಬರುವ ತಂಡ, ಪ್ರವಾಸಕ್ಕೆ, ದೇವರ ದರ್ಶನಕ್ಕೆ, ಜಲವಿಹಾರಕ್ಕೆ ಬರುವ ತಂಡಗಳಿರುತ್ತದೆ. ಇವರು ನಗರ ಪ್ರವೇಶಿಸುವ ಗಡಿಯಲ್ಲೇ ಬೈಕ್ ನಲ್ಲಿ ಕುಳಿತ ಹತ್ತಾರು ಜನರ ತಂಡ ಎದುರಾಗುತ್ತದೆ. ಎಲ್ಲಿ ಹೋಗಬೇಕು, ನಾವು ವ್ಯವಸ್ಥೆ ಮಾಡುತ್ತೇವೆ ಎನ್ನುತ್ತ ಮುಂದೆ ಬರುತ್ತಾರೆ, ವಾಹನ ಅಡ್ಡಗಟ್ಟುತ್ತಾರೆ. ಆ ಲಾಡ್ಜ್ ಸರಿಯಿದೆ, ಈ ಲಾಡ್ಜ್ ಸರಿಯಿಲ್ಲ ಎಂದು ಹೆಚ್ಚು ಕಮೀಶನ್ ಸಿಗುವ ಲಾಡ್ಜ್ ಗೆ ಕರೆದೊಯ್ಯುತ್ತಾರೆ.
ಬೋಟಿಂಗ್, ಡೈವಿಂಗ್ ಮೊದಲಾದ ಈ ಸಾಹಸ ಕ್ರೀಡೆಯ ಸ್ಥಳ ಒಂದೆರಡು ಕಿಮೀ ಹತ್ತಿರ ಇದ್ದರೂ ಅಲ್ಲಿ ತಲುಪಿಸಿದ್ದಕ್ಕೆ 500-1000 ರೂಪಾಯಿ ಪಡೆಯುತ್ತಾರೆ. ಹೊನ್ನಾವರದಲ್ಲಿ ಕಾಂಡ್ಲಾವನ ಮತ್ತು ಇಕೋಬೀಚ್ ಒಂದು ಕಿಮೀ ಅಂತರದಲ್ಲಿದೆ. ಒಂದುಬದಿಯಿಂದ ಇನ್ನೊಂದು ಬದಿಗೆ ಮುಟ್ಟಿಸಲು 500-1000 ರೂಪಾಯಿ ಪಡೆಯುವುದು ಯಾವ ನ್ಯಾಯ.
ನಿಗದಿತ ದರವೊಂದು, ಹೇಳುವುದು ಇನ್ನೊಂದು. ಕೆಲವು ಪ್ರವಾಸಿಗರು ಪ್ರತಿಭಟಿಸುತ್ತಾರೆ, ಕೆಲವರು ಪ್ರಶ್ನಿಸುತ್ತಾರೆ. ಬೇರೆ ಊರಾದ್ದರಿಂದ ಪೋಲೀಸರಿಗೆ ದೂರುಕೊಡುವ ಧೈರ್ಯ ಇರುವುದಿಲ್ಲ. ಪೊಲೀಸರು ದಿನಕ್ಕೊಮ್ಮೆಯೂ ಇತ್ತ ತಲೆಹಾಕುವುದಿಲ್ಲ. ಶರಾವತಿ ನದಿಯಲ್ಲೋ, ಸಮುದ್ರದಲ್ಲೋ ಸುತ್ತಿಬಂದರೆ ಗಂಟೆಗೆ 1000, ಕೆಲವೊಮ್ಮೆ 2-3 ಸಾವಿರ ರೂಪಾಯಿ ಕೀಳುತ್ತಾರೆ. ಉತ್ತಮ ರುಚಿಯ ಲಘು ಉಪಾಹಾರ ಹತ್ತಿರ ಎಲ್ಲೂ ಲಭ್ಯವಿರುವುದಿಲ್ಲ. ಆದ್ದರಿಂದ ಅದ್ಭುತ ಪ್ರವಾಸಿ ಸ್ಥಾನಗಳಿದ್ದರೂ ಗುಣಮಟ್ಟದ ಸೇವೆ ಪ್ರವಾಸಿಗರಿಗೆ ಸಿಗುತ್ತಿಲ್ಲ. ಹೆಣ್ಣುಮಕ್ಕಳು ಹೆಚ್ಚಾಗಿ ಮಾಹಿತಿ ತಂತ್ರಜ್ಞಾನದಲ್ಲಿ ಇದ್ದವರು ಗುಂಪುಗುಂಪಾಗಿ ಬರುತ್ತಾರೆ. ಅವರನ್ನು ತಪ್ಪು ಭಾವಿಸಿ ಕೀಟಲೆ ಮಾಡುವವರೂ ಇದ್ದಾರೆ. ಇದನ್ನು ತಡೆಯಬೇಕಾಗಿದೆ.
ಪ್ರವಾಸಿ ಸ್ಥಳಗಳಲ್ಲಿ ಬೇಕಿದೆ ಶಿಸ್ತು
ಒಂದಿಷ್ಟು ಸುಧಾರಣೆಗಳೊಂದಿಗೆ ಪ್ರವಾಸಿ ಸ್ಥಳಗಳನ್ನು ಶಿಸ್ತಿಗೆ ಒಳಪಡಿಸಿದರೆ ಶಾಶ್ವತ ಆದಾಯ ಬರಲಿದೆ. ಊರಿಗೂ ಅಭಿಮಾನದ ಸಂಗತಿಯಾಗಲಿದೆ. ಗೋವಾ, ಕೇರಳಗಳಲ್ಲಿ ಪ್ರವಾಸಿಗರೊಂದಿಗೆ ವ್ಯವಹರಿಸುವುದನ್ನು ನೋಡಿ ಜಿಲ್ಲೆ ಕಲಿಯಬೇಕಾಗಿದೆ.