ಹೊನ್ನಾವರ: ಶ್ರೀಲಂಕಾದ ಯುವಗಾಯಕಿ ಯೋಹಾನಿ ಹಾಡಿರುವ ಹಾಡನ್ನು ಹಿಂದಿ ಹಾಗೂ ಕನ್ನಡಕ್ಕೆ ಅನುವಾದಿಸಿ ಅದಕ್ಕೆ ಸಂಗೀತ ಸಂಯೋಜಿಸಿ ಇಲ್ಲಿನ ಸಹೋದರರು ಹಾಡಿದ್ದು ಇದಕ್ಕೂ ಸಹ ಲಕ್ಷಾಂತರ ಜನರ ಮೆಚ್ಚುಗೆ ದೊರೆತಿದೆ.
ಶ್ರೀಲಂಕಾದ ಯುವಗಾಯಕಿ ಯೋಹಾನಿ ಈ ಹಾಡನ್ನು ಅಲ್ಲಿಯ ಭಾಷೆಯಲ್ಲಿ ಹಾಡಿ ಹವಾ ಎಬ್ಬಿಸಿದ್ದಳು. ಅದರ ಹಿಂದಿ ಮತ್ತು ಕನ್ನಡ ಅನುವಾದವನ್ನು ಹೊನ್ನಾವರ ಕಾಲೇಜಿನಲ್ಲಿ ಎಂಕಾಂ ಓದುತ್ತಿರುವ ಬೆನ್‌ರುಬೆನ್ ಮತ್ತು ಆತನ ತಮ್ಮ ಹೋಲಿರೋಸರಿ ಕಾನ್ವೆಂಟಿನಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ಬೆನ್‌ಸ್ಟಂನ್ ಹಾಡಿದ್ದಾರೆ. ಸಾಹಿತ್ಯವನ್ನು ಹಡಿನಬಾಳದ ಆಲ್ಬನ್ ರಚಿಸಿಕೊಟ್ಟಿದ್ದಾರೆ. ಇವರಿಬ್ಬರು ಹಾಡಿದ ಹಾಡನ್ನು ದಿನಾಂಕ 7ರ ಮುಂಜಾನೆಯಿಂದ ದಿ. 8ರ ಮುಂಜಾನೆಯವರೆಗೆ 24 ತಾಸಿನಲ್ಲಿ ಈ ಹಾಡನ್ನು 2.80 ಲಕ್ಷ ಜನ ಯೂಟ್ಯೂಬ್ ನಲ್ಲಿ ವೀಕ್ಷಿಸಿದ್ದಾರೆ.
ಇವರು ಈ ಹಿಂದೆ ಇದೇ ಗಾಯಕಿಯ ಹಾಡನ್ನು ಹಾಡಿದಾಗ 1.60ಲಕ್ಷ ಜನ ವೀಕ್ಷಿಸಿದ್ದರು. ಈಗಾಗಲೇ ಈ ಸಹೋದರರು 11 ವಿಡಿಯೋ ಹಾಡುಗಳನ್ನು ಕನ್ನಡ, ಕೊಂಕಣಿ, ಇಂಗ್ಲಿಷ್‌ಗಳಲ್ಲಿ ಬಿಡುಗಡೆ ಮಾಡಿದ್ದರೂ ಇಷ್ಟೊಂದು ವೀಕ್ಷಣೆ ಪಡೆದಿರಲಿಲ್ಲ. ಯೋಹಾನಿಯಿಂದ “ನಾರಿ ಮನಹಾರಿ ಸುಕುಮಾರಿ” ಎಂದು ತಮಿಳಿನಲ್ಲಿ ಆರಂಭವಾಗುವ ಗೀತೆ ಬೆನ್ ರುಬೆನ್‌ನಿಂದ ಮುಂದುವರಿದು ಅಪ್ಸರೇ ನೀ ನನ್ನವಳೇ ನೀನಂದ್ರೆ ತುಂಬಾ ತುಂಬಾ…. ಎಂಬ ಕನ್ನಡ ಧ್ವನಿಯೊಂದಿಗೆ ಬೆನ್ …ನಿಂದ ಥೇರಾ ಸಾಥ್ ನಿಭಾವೂಂಗಾ ಹಮ್ ಸಾಥ್ ರಹೇಂಗೆ…. ಎಂದು ಹಿಂದಿಯಲ್ಲಿ ಮುಂದುವರಿದಿದೆ.
ಬೆನ್ ರೋಡ್ಸ್ ಮ್ಯೂಸಿಕ್ಸ್ ಹೆಸರಿನಲ್ಲಿ 2.50 ನಿಮಿಷದ ಈ ಹಾಡನ್ನು ಬಿಡುಗಡೆ ಮಾಡಲಾಗಿದೆ. ಸಾಹಿತ್ಯ ಶೈಲಿ, ಭಾಷೆ ಯಾವುದಾದರೇನು ಸಂಗೀತ ಹೃದಯ ತಲುಪುವುದೇ ಮುಖ್ಯ. ಭಾಷೆ, ದೇಶ ಗಡಿ ಮೀರಿದ ಸಂಗೀತ ಎರಡು ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿರುವುದು ವಿಶೇಷ.
ತನ್ನ ಮಕ್ಕಳ ಸಂಗೀತದ ಆಸಕ್ತಿ ಕಂಡು ವೀಕೇರ್ ಸೌಹಾರ್ದ ಸಹಕಾರಿ ಅಧ್ಯಕ್ಷ ಮುನ್ವೆಲ್ ಸ್ಟೆಫನ್ ರೊಡ್ರಗೀಸ್ ಮನೆಯಲ್ಲಿಯೇ ಮಕ್ಕಳಿಗೆ ಒಂದು ಕೋಣೆಯಲ್ಲಿ ಧ್ವನಿಮುದ್ರಣದ ವ್ಯವಸ್ಥೆ ಮಾಡಿಕೊಟ್ಟು ಪ್ರೋತ್ಸಾಹಿಸಿದ್ದಾರೆ. ಇಬ್ಬರೂ ಕೀಬೋರ್ಡ್, ತಬಲಾ ಕಲಿಯುತ್ತಿದ್ದಾರೆ. ಲಾಕ್‌ಡೌನ್‌ನಲ್ಲಿ ಮನೆಯಲ್ಲಿ ಕುಳಿತಾಗ ಹಾಡಿಕೊಂಡಿದ್ದೆವು. ಅದೇ ಈ ಸಾಹಸಕ್ಕೆ ಪ್ರೇರಣೆಯಾಯಿತು ಎನ್ನುತ್ತಾರೆ ಈ ಸಹೋದರರು.