ಹೊನ್ನಾಳಿ: ಮಕ್ಕಳು ದೇವರ ಸಮಾನ. ಮಕ್ಕಳ ಮನಸ್ಸು ಹಾಲಿನಷ್ಟೇ ಶುದ್ಧವಾದುದು. ಶಿಕ್ಷಕರು ಮಕ್ಕಳ ಮನಸ್ಸನ್ನರಿತು ಬೋಧನೆ ಮಾಡಬೇಕು ಎಂದು ಹಿರೇಕಲ್ಮಠದ ಡಾ| ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಹಿರೇಮಠ ಗ್ರಾಮದ ಚನ್ನೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿ ವಿತರಿಸಿ ಅವರು ಮಾತನಾಡಿದರು.
ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಅಕ್ಕರೆ ಹಾಗೂ ಎಲ್ಲಿಲ್ಲದ ಪ್ರೀತಿ, ವಾತ್ಸಲ್ಯ. ನನ್ನ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸಬೇಕು ಎಂದು ಹೇಳಿದನ್ವಯ ದೇಶಾದ್ಯಂತ ನ.14ರಂದು ಮಕ್ಕಳ ದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಜನ್ಮದಿನ ಆಚರಣೆ ದಿಕ್ಕು ತಪ್ಪುತ್ತಿದ್ದು, ಇದರಿಂದ ನಮ್ಮ ಸಂಸ್ಕೃತಿ ಕ್ಷೀಣಿಸುತ್ತಿದೆ. ನಮ್ಮ ಭವ್ಯ ಪರಂಪರೆ ಹಾಗೂ ಸಂಸ್ಕೃತಿ ಬಿಂಬಿಸುವ ರೀತಿಯಲ್ಲಿ ಜನ್ಮದಿನ ಆಚರಣೆ ಆಗಬೇಕಿದೆ ಎಂದು ಹೇಳಿದರು.
ಇಂದಿನ ಮಕ್ಕಳೇ ಭಾವಿ ಪ್ರಜೆಗಳು. ಮಕ್ಕಳನ್ನು ಸುಸಂಸ್ಕೃತರನ್ನಾಗಿಸಲು ಪೋಷಕರು, ಶಿಕ್ಷಕರು ಸತತ ಪ್ರಯತ್ನ ಮಾಡಿದಾಗ ಮಾತ್ರ ಇಂದಿನ ಮಕ್ಕಳು ಮುಂದಿನ ಉತ್ತಮ ನಾಗರಿಕರಾಗಿ ಹೊರಹೊಮ್ಮುತ್ತಾರೆ ಎಂದು ಹೇಳಿದರು.
ಪಿಎಸ್‌ಐ ತಿಪ್ಪೇಸ್ವಾಮಿ ಮಾತನಾಡಿ, ಮಕ್ಕಳನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ತಿದ್ದಿ ತೀಡಿ ಮುಂದಿನ ಶೈಕ್ಷಣಿಕ ಹಂತಕ್ಕೆ ಕಳಿಸಿದರೆ ಶೈಕ್ಷಣಿಕಾಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಪ.ಪಂ ಸದಸ್ಯರಾದ ಸುರೇಶ್ ಹೊಸಕೇರಿ, ಕೆ.ವಿ.ಶ್ರೀಧರ್, ಪ.ಪಂ ಮಾಜಿ ಉಪಾಧ್ಯಕ್ಷ ಮಂಜುನಾಥ ಸರಳಿನಮನೆ, ಶಾಲಾ ಸಿಬ್ಬಂದಿ ಹಾಗೂ ಇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.