ಹೊನ್ನಾಳಿ: ತಾಲೂಕಿನ ಅರಕೆರೆ ಗ್ರಾಮದ ಕರ್ನಾಟಕ ಬ್ಯಾಂಕ್ ದರೋಡೆ ವಿಫಲ ಯತ್ನ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಹೊನ್ನಾಳಿ ಪಟ್ಟಣದಿಂದ ಕೇವಲ 6 ಕಿ.ಮೀ. ದೂರವಿರುವ ಅರಕೆರೆ ಗ್ರಾಮದ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಕರ್ನಾಟಕ ಬ್ಯಾಂಕ್‌ನ ಎರಡು ಗೋಡೆಗಳನ್ನು ಯಂತ್ರದಿಂದ ಕೊರೆದು ಭದ್ರತಾ ಕೊಠಡಿಗೆ ಕಳ್ಳರು ನುಗ್ಗಿದರೂ ಗೊದ್ರೇಜ್ ಬೀರುವಿನ ಡಬಲ್ ಲಾಕರ್ ತೆರೆಯಲಾಗದೆ ವಾಪಸ್ಸಾಗಿದ್ದಾರೆ.
ಕಳ್ಳರು ಪ್ರವೇಶಿಸಿದ್ದು ಹೇಗೆ: ಕರ್ನಾಟಕ ಬ್ಯಾಂಕ್‌ಗೆ ಹೊಂದಿಕೊಂಡಿರುವ ಕಟ್ಟಡ ಮಾಲೀಕರ ಮನೆ ಖಾಲಿ ಇದ್ದು, ಈ ಮನೆಗೆ ಬಾಗಿಲುಗಳು ಇಲ್ಲದ ಕಾರಣ ಮೊದಲು ಈ ಮನೆಯ ಗೋಡೆ ಕೊರೆದು ಬ್ಯಾಂಕ್ ನೊಳಗೆ ಪ್ರವೇಶಿಸಿರುವ ಕಳ್ಳರು ಅಲ್ಲಿ ಹಣ, ಚಿನ್ನಾಭರಣ ಇರುವ ಭದ್ರತಾ ಕೊಠಡಿಯ ಗೋಡೆಯನ್ನು
ಕೊರೆದಿದ್ದಾರೆ. ಆದರೆ ಭದ್ರತಾ ಕೊಠಡಿಯಲ್ಲಿನ ಡಬಲ್ ಲಾಕ್‌ನ ಗೊದ್ರೇಜ್ ಬೀರುವನ್ನು ತರೆಯಲು ಅಸಮರ್ಥರಾಗಿ ವಾಪಸ್ಸಾಗಿದ್ದಾರೆ.
ಸಿಸಿ ಕ್ಯಾಮೆರಾ ನಾಶ: ಕಳ್ಳರು ಮೊದಲು ಬ್ಯಾಂಕ್‌ನ ಹೊರಭಾಗದಲ್ಲಿದ್ದ ಸಿಸಿ ಟಿವಿ ಕ್ಯಾಮೆರಾಗಳನ್ನು ಒಡೆದು, ನಂತರ ಒಳ ಹೋದ ಮೇಲೆ ಸಿಸಿ ಟಿವಿ ಡಿವಿಆರ್‌ನ್ನು ನಾಶಪಡಿಸಿದ್ದಾರೆ. ಬೆಳಕಿಗೆ ಬಂದಿದ್ದು ಹೇಗೆ: ಬೆಳಿಗ್ಗೆ ಎಂದಿನಂತೆ ಬ್ಯಾಂಕ್ ಸಿಬ್ಬಂದಿ ಬ್ಯಾಂಕಿಗೆ ಬಂದು ಬಾಗಿಲು ತೆರೆದಾಗ ಬಾಗಿಲು ಎಡ ಭಾಗದ ಗೋಡೆ ಹಾಗೂ ಭದ್ರತಾ ಕೊಠಡಿಗೆ ರಂಧ್ರ ಕೊರೆದಿದ್ದು ಕಂಡು ಬಂದಿದೆ.
ತಕ್ಷಣ ಅವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ವಿಷಯ ತಿಳಿದ ತಕ್ಷಣ ಸಿಪಿಐ ಬ್ರಜೇಶ್ ಮ್ಯಾಥ್ಯೂ, ಪಿಎಸ್‌ಐ ತಿಪ್ಪೇಸ್ವಾಮಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹಾಜರಾಗಿ ಶ್ವಾನ ದಳ, ಬೆರಳಚ್ಚು ತಜ್ಞರನ್ನು ಕರೆಸಿದರು. ಸ್ಥಳಕ್ಕೆ ಬಂದ ಶ್ವಾನ ಒಂದು ಸುತ್ತು ಬ್ಯಾಂಕ್ ಕಟ್ಟಡ ಸುತ್ತಿ ನಂತರ ಗೊಲ್ಲರಹಳ್ಳಿ ಬಳಿ ರಸ್ತೆ ಪಕ್ಕ ಇರುವ ಧಾಬಾವರೆಗೆ ತೆರಳಿ ನಿಂತಿತು. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾ ಧಿಕಾರಿ ರಾಜೀವ್ ಭೇಟಿ ಮಾಹಿತಿ ಪಡೆದರು.
ಲಾಕರ್‌ನಲ್ಲಿ ಕೋಟಿ ಮೌಲ್ಯದ ಚಿನ್ನ: ಡಬಲ್ ಲಾಕರ್ ನಲ್ಲಿ 1.5ಕೋಟಿ ರೂ. ಮೌಲ್ಯದ ಚಿನ್ನ ಮತ್ತು 2ಲಕ್ಷ ರೂ. ನಗದು ಇತ್ತು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕ ಬ್ಯಾಂಕ್ ಶಿವಮೊಗ್ಗ ಶಾಖೆಯ ಎಜಿಎಂ ಉಪಾಧ್ಯಾಯ, ಹೊನ್ನಾಳಿ ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ನಾರಾಯಣ್, ಅರಕೆರೆ ಶಾಖಾ ವ್ಯವಸ್ಥಾಪಕ ನಾಗರಾಜ್ ಇದ್ದರು. ಈ ಮೊದಲೂ ಕಳ್ಳತನ: 2014ರಲ್ಲಿ ಇದೇ ಬ್ಯಾಂಕ್‌ನಲ್ಲಿ ಕಳ್ಳತನ ನಡೆದಿದ್ದು, 10.5 ಕೆಜಿ ಚಿನ್ನ, 3 ಲಕ್ಷ ರೂ. ನಗದು ದೋಚಲಾಗಿತ್ತು. ಅಂದು ನಡೆದ ಕಳ್ಳತನ ಪ್ರಕರಣ ಇನ್ನೂ ಭೇದಿಸಲಾಗಿಲ್ಲ.