Advertisement

ಕೃಷಿಮೇಳದ ಯಶಸ್ಸಿಗೆ ಶ್ರಮಿಸೋಣ

05:02 PM Mar 02, 2020 | Naveen |

ಹೊನ್ನಾಳಿ: ಹಿರೇಕಲ್ಮಠದಲ್ಲಿ ಲಿಂ|ಒಡೆಯರ್‌ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಮತ್ತು ಲಿಂ| ಒಡೆಯರ್‌ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ ಅಂಗವಾಗಿ ಮಾ.5ರಿಂದ 7ರವರೆಗೆ ನಡೆಯುವ ರಾಜ್ಯ ಮಟ್ಟದ ಕೃಷಿಮೇಳ ಅತ್ಯಂತ ಯಶಸ್ವಿಯಾಗಿ ನಡೆಯಲು ಎಲ್ಲರು ಕಂಕಣಬದ್ಧರಾಗಿ ದುಡಿಯಬೇಕಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದರು.

Advertisement

ಕೃಷಿ ಮೇಳದ ಪ್ರಯುಕ್ತ ಭಾನುವಾರ ಹಿರೇಕಲ್ಮಠದಲ್ಲಿ ಈಗಾಗಲೇ ನಡೆದ ಹಾಗೂ ಮುಂದಿನ ಎರಡು ದಿನಗಳಲ್ಲಾಗಬೇಕಾದ ಕಾಮಗಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯಮಟ್ಟದ ಕೃಷಿ ಮೇಳ ರಾಜ್ಯದಲ್ಲಿಯೇ ಗುರ್ತಿಸುವಂತಾಗಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಾಗಬೇಕಿದೆ. ಇದಕ್ಕೆ 1ಕೋಟಿಗಿಂತ ಹೆಚ್ಚು ಖರ್ಚು ಬರಲಿದ್ದು ಈಗಾಗಲೇ ಸರ್ಕಾರ ರೂ.50ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಹೆಚ್ಚಿನ ಅನುದಾನಕ್ಕೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಕೃಷಿಮೇಳ ಜಾತ್ಯತೀತ ಹಾಗೂ ಪಕ್ಷಾತೀತವಾಗಿರುವುದರಿಂದ ತಾಲೂಕಿನ ಎಲ್ಲಾ ಪಕ್ಷದ ಮುಖಂಡರುಗಳನ್ನು ಸೇರಿಸಿಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮುಖ್ಯಮಂತ್ರಿ, ವಿಪಕ್ಷ ನಾಯಕ, ಸಚಿವರನ್ನು ತಾಲೂಕಿನ ಎಲ್ಲಾ ಪ್ರಮುಖ ಮುಖಂಡರನ್ನು ಕರೆದುಕೊಂಡು ಹೋಗಿ ಆಹ್ವಾನ ಮಾಡಲಾಗಿದೆ ಎಂದು ಹೇಳಿದರು.

ಪ್ರತಿ ವರ್ಷ ಹೊನ್ನಾಳಿಯಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ಹಮ್ಮಿಕೊಂಡು ಸರ್ಕಾರದಿಂದ ಇಂತಿಷ್ಟು ಹಣ ನಿಗದಿ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು ಎಂದು ಹೇಳಿದರು.

Advertisement

ಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದ ಡಾ|
ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕೃಷಿ ಮೇಳಕ್ಕೆ ನನಗೆ ಆಹ್ವಾನ ನೀಡಿಲ್ಲ ಎಂದು ಎನ್ನದೇ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಜಿಲ್ಲಾ ಧಿಕಾರಿ ಮಹಾಂತೇಶ್‌ ಬೀಳಗಿ ಮಾತನಾಡಿ, ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಇತರ ಎಲ್ಲಾ ಇಲಾಖೆಗಳು ಶಕ್ತಿಮೀರಿ ಕೆಲಸ ಮಾಡುತ್ತಿದ್ದು ರೈತರ ಹಿತ ಕಾಪಾಡುವ ಕೃಷಿಮೇಳದಲ್ಲಿ ನಮ್ಮ ಮುಖ್ಯ ಉದ್ದೇಶ ಈಡೇರಬೇಕಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಕುಂದೂರು ಹನುಮಂತಪ್ಪ ತಮ್ಮ ಭಾಗದ ಹಳ್ಳಿಗಳಿಂದ ಕೃಷಿಮೇಳಕ್ಕೆ ಆಗಮಿಸುವ ಎಲ್ಲಾ ರೈತರಿಗೆ ಹಾಗೂ ಜನರಿಗೆ ವಾಹನ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು. ಸಾವಿತ್ರಿಬಾಯಿ ಫುಲೆ ಸಂಘಟನೆ ಅಧ್ಯಕ್ಷೆ ಶಹಜಾನ್‌, ಕೃಷಿ ಮೇಳಕ್ಕೆ ರೂ.25 ಸಾವಿರ ದೇಣಿಗೆ ನೀಡುತ್ತೇನೆ ಎಂದು ಹೇಳಿದರು. ವಿವಿಧ ಪಕ್ಷದ ಮುಖಂಡರು, ರೈತರು ಮಾತನಾಡಿದರು. ಜಿ.ಪಂ ಉಪಾಧ್ಯಕ್ಷ ಸುರೇಂದ್ರನಾಯ್ಕ, ಜಿ.ಪಂ ಸದಸ್ಯೆ ಉಮಾರಮೇಶ್‌, ತಾ.ಪಂ ಪ್ರಭಾರಿ ಅಧ್ಯಕ್ಷ ತಿಪ್ಪೇಶಪ್ಪ, ಜಿ.ಪಂ ಸಿಇಒ ಪದ್ಮಾಬಸವಂತಪ್ಪ ಮತ್ತು ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next