ಹೊನ್ನಾಳಿ: ಮದುವೆಯಾಗಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಸೈನಿಕನೋರ್ವ ಯುವತಿ ತಂದೆ ಮೇಲೆ ಗುಂಡು ಹಾರಿಸಿದ ಘಟನೆ ತಾಲೂಕಿನ ಬಿದರಗಡ್ಡೆ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೇವರಾಜ್ ರಜೆಯ ಮೇಲೆ ಊರಿಗೆ ಆಗಮಿಸಿದ್ದಾಗ ಈ ದುಷ್ಕೃತ್ಯ ಎಸಗಿದ್ದು, ಗುಂಡೇಟು ತಿಂದ ಯುವತಿಯ ತಂದೆ ಪ್ರಕಾಶ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉತ್ತರಾಖಂಡ್‌ನ ಹರಿದ್ವಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈತ ತನ್ನದೇ ಗ್ರಾಮದ ಪ್ರಕಾಶ್ ಎಂಬುವವರ ಮಗಳನ್ನು ಮದುವೆಯಾಗುವಂತೆ ದುಂಬಾಲು ಬಿದ್ದಿದ್ದ ಎನ್ನಲಾಗಿದೆ. ಆದರೆ ಯುವತಿ ನಿರಾಕರಿಸಿದ್ದಳು. ಇದರಿಂದ ಆಕ್ರೋಶಗೊಂಡು ಶುಕ್ರವಾರ ಯುವತಿ ಮನೆಯ ಬಳಿ ತೆರಳಿದ ಗುಂಡು ಹಾರಿಸಿ ರಾದ್ಧಾಂತ ಮಾಡಿದ್ದಾನೆ.
ಏಕಮುಖ ಪ್ರೀತಿ: ಬಿದರಗಡ್ಡೆ ಗ್ರಾಮದ ದೇವರಾಜ್‌ನದ್ದು ಏಕಮುಖ ಪ್ರೀತಿಯಾಗಿತ್ತು. ಆಗಾಗ ಯುವತಿಗೆ ದೂರವಾಣಿ ಕರೆ ಮಾಡುತ್ತಿದ್ದ ಈತ ನನ್ನನ್ನು ಪ್ರೀತಿಸು ಎಂದು ಪೀಡಿಸುತ್ತಿದ್ದ. ಮೊಬೈಲ್ನಲ್ಲಿ ಮೆಸೇಜ್ ಮಾಡುತ್ತಿದ್ದ. ಆದರೂ ಯುವತಿ ಒಪ್ಪದಿದ್ದಾಗ ಪ್ರೀತಿಸದಿದ್ದರೆ ಕೊಲ್ಲುವುದಾಗಿಯೂ ಬೆದರಿಕೆ ಹಾಕುತ್ತಿದ್ದ. ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಗಮನಿಸಿದ ಯುವತಿ ಪೋಷಕರು ಪಂಚಾಯಿತಿ ಸೇರಿಸಿ ದೇವರಾಜನಿಗೆ ಬುದ್ಧಿ ಹೇಳಿದ್ದರು. ಗ್ರಾಮದ ಹಿರಿಯರ ಮುಂದೆ ಇನ್ನು ಮುಂದೆ ತಾನು ಸರಿಯಾಗಿ ನಡೆದುಕೊಳ್ಳುವುದಾಗಿ ಹೇಳಿದ್ದ ಎನ್ನಲಾಗಿದೆ.
ಏಕಾಏಕಿ ಗುಂಡು ಹಾರಿಸಿದ: ಆದರೆ ಶುಕ್ರವಾರ ಮತ್ತೆ ಮದುವೆಯಾಗುವಂತೆ ಯುವತಿಯನ್ನು ಪೀಡಿಸಿದ್ದಾನೆ. ಆದರೆ ಯುವತಿ ನಿರಾಕರಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ದೇವರಾಜ್ ಮಧ್ಯರಾತ್ರಿ 12ಗಂಟೆ ಸುಮಾರಿಗೆ ಪ್ರಕಾಶ್ ಅವರ ಮನೆ ಮುಂದೆ ಬಂದು ಒಂದು ಸುತ್ತು ಗುಂಡು ಹಾರಿಸಿದ್ದಾನೆ. ಗುಂಡಿನ ಶಬ್ದ ಕೇಳಿ ಹೊರಬಂದ ಪ್ರಕಾಶ್ ಅವರ ಮೇಲೆ ಏಕಾಏಕಿ 2 ಸುತ್ತು ಗುಂಡು ಹಾರಿಸಿದ್ದಾನೆ. ಇದರಿಂದ ತೀವೃವಾಗಿ ಗಾಯಗೊಂಡ ಪ್ರಕಾಶ್ ಕುಸಿದುಬಿದ್ದಿದ್ದಾರೆ. ಸುತ್ತಮುತ್ತಲಿನ ಜನ ತಕ್ಷಣ ಪ್ರಕಾಶ ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಪೊಲೀಸ್ ಠಾಣೆಗೆ ನುಗ್ಗಿದ: ಇತ್ತ ಪ್ರಕಾಶ್ ಅವರ ಪತ್ನಿ ನಾಗರತ್ನಮ್ಮ ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾರೆ. ಇದನ್ನು ನೋಡಿದ ದೇವರಾಜ್ ಪಿಸ್ತೂಲ್ನೊಂದಿಗೆ ಠಾಣೆಗೇ ನುಗ್ಗಿ ನಾಗರತ್ನಮ್ಮ ಅವರನ್ನೂ ಕೊಲ್ಲುವುದಾಗಿ ಹೆದರಿಸಿದ್ದಾನೆ. ತಕ್ಷಣ ಅಲ್ಲಿದ್ದ ಪೊಲೀಸರು ಆತನನ್ನು ಬಂಧಿಸಿ ಮೂರು ಕಂಟ್ರಿ ಪಿಸ್ತೂಲ್ ಹಾಗೂ 3 ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ನಾಗರತ್ನಮ್ಮ ಈ ಕುರಿತು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.