Advertisement

ಹೊನ್ನಾಳಿ ಸಂತೆಯಲ್ಲಿ ಹಲಸಿನ ಹಣ್ಣು ಮಾರಾಟ ಜೋರು

10:33 AM Jul 18, 2019 | Naveen |

ಹೊನ್ನಾಳಿ: ಪಟ್ಟಣದಲ್ಲಿ ಹಲಸಿನ ಹಣ್ಣಿನ ವ್ಯಾಪಾರ ಜೋರಾಗಿ ನಡೆಯುತ್ತಿದ್ದು ಬುಧವಾರ ಪಟ್ಟಣದ ವಾರದ ಸಂತೆಯಾದ ಪ್ರಯುಕ್ತ ಹಲಸಿನ ಹಣ್ಣಿನ ವ್ಯಾಪಾರ ಭರ್ಜರಿಯಾಗಿ ನಡೆದಿತ್ತು.

Advertisement

ಪಟ್ಟಣದ ತುಮ್ಮಿನಕಟ್ಟೆ ರಸ್ತೆಯ ಇಕ್ಕೆಲಗಳಲ್ಲಿ ರಾಶಿ ಹಾಕಿದ ಹಲಸಿನ ಹಣುಗಳು ನೋಡಗರನ್ನು ಸೆಳೆಯುತ್ತಿದ್ದವು.

ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ ತಾಲೂಕುಗಳ ಹಲಸು ಬಂದಿದ್ದು ಗ್ರಾಹಕರು ಹಲಸಿನ ಹಣ್ಣನ್ನು ಕೊಂಡು ಹೋಗುತ್ತಿರುವ ದೃಶ್ಯ ಸಮಾನ್ಯವಾಗಿತ್ತು.

ಗಾತ್ರಕ್ಕನುಗುಣವಾಗಿ ಹಲಸಿನ ಹಣ್ಣುಗಳನ್ನು ರೂ.40ರಿಂದ ರೂ.200ರವರೆಗೆ ಮಾರಾಟ ಮಾಡಲಾಗುತ್ತಿತ್ತು. ಈಗ ಮಾವಿನ ಹಣ್ಣಿನ ಸೀಸನ್‌ ಮುಗಿಯುತ್ತಾ ಬಂದಿದ್ದು, ಮಾರ್ಕೇಟ್‌ನಲ್ಲಿ ನೀಲಂ ಮತ್ತು ಗಿಣಿಮೂತಿ ಮಾವಿನಹಣ್ಣುಗಳು ಕಾಣಸಿಗುತ್ತಿದ್ದರೂ ಮಳೆ ಬಿದ್ದ ಕಾರಣ ಮಾವಿನ ಹಣ್ಣು ಕೊಳ್ಳಲು ಯಾವ ಗ್ರಾಹಕರೂ ಹೋಗುತ್ತಿಲ್ಲ. ಈಗ ಎಲ್ಲರೂ ಹಲಸು ಕೇಳುತ್ತಿದ್ದಾರೆ ಎಂದು ಮಾವಿನ ಹಣ್ಣಿನ ವ್ಯಾಪಾರಿಗಳು ಹೇಳುತ್ತಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮತ್ತು ಕೊಪ್ಪ ತಾಲೂಕಿನ ಹಲಸು ಹಣ್ಣಿನ ತೋಟಗಳಿಂದ ಎರಡು ಲೋಡ್‌ ಹಲಸಿನ ಹಣ್ಣು ತಂದಿದ್ದೇನೆ. ಎರಡು ಲೋಡ್‌ ಹಣ್ಣುಗಳ ತೂಕ ಸರಿಸುಮಾರು 2 ಟನ್‌ ಇದ್ದು ತೋಟದ ಮಾಲೀಕನಿಗೆ ಕೊಡುವ ಹಣಕ್ಕಿಂತ ಲಾರಿಗೆ ಹಣ್ಣು ಏರಿಸುವ-ಇಳಿಸುವ ಮತ್ತು ಸಾಗಾಣಿಕೆ ವೆಚ್ಚ ಹೆಚ್ಚಿದೆ. ಉತ್ತಮ ವ್ಯಾಪಾರವಾದರೆ ಮಾತ್ರ ಲಾಭ. ಇಲ್ಲದಿದ್ದರೆ ನಷ್ಟವೇ ಹೆಚ್ಚು ಎಂದು ವ್ಯಾಪಾರಿ ಮಹಮದ್‌ಸಾಬ್‌ ಹೇಳುತ್ತಾರೆ.

Advertisement

ಹಲಸು ಮೇ ತಿಂಗಳಿನಿಂದ ಆಗಸ್ಟ್‌ ತಿಂಗಳವರೆಗೆ ಮಾತ್ರ ಸಿಗುವ ಸೀಸನ್‌ ಹಣ್ಣು. ಈ ಸಮಯದಲ್ಲಿ ತಪ್ಪದೆ ಹಲಸು ಕೊಳ್ಳುತ್ತೇನೆ ಎಂದು ಗ್ರಾಹಕ ಎಚ್.ಎಂ.ಅರುಣ್‌ಕುಮಾರ್‌ ಹೇಳುತ್ತಾರೆ.

ಹಲಸನ್ನು ಕೊಯ್ದು ಹಲಸಿನ ತೊಳೆಗಳನ್ನು ಹೊರ ತೆಗೆಯುವುದು ಬಹು ಕಷ್ಟದ ಕೆಲಸ ಎಂದು ಕೆಲ ಗ್ರಾಹಕರು ಮಾರಾಟದ ಸ್ಥಳದಲ್ಲಿಯೇ ಕೊಯ್ಸಿಕೊಂಡು ತೊಳೆಗಳನ್ನು ಮಾತ್ರ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಇನ್ನು ಕೆಲವರು ಮಾರಾಟದ ಸ್ಥಳದಲ್ಲಿಯೇ ರೂ.10, 20, 30ರಂತೆ ತೊಳೆಗಳನ್ನು ತಿಂದು ಮನೆಗೆ ತೆರಳುತ್ತಾರೆ. ಬಿಡಿ ತೊಳೆಗಳು ರೂ.10ಕ್ಕೆ 4ರಿಂದ 5ರವರೆಗೆ ಮಾರಾಟವಾಗುತ್ತಿವೆ.

ಯಾವುದೇ ರಾಸಾಯನಿಕ ಬೆರಸದೇ ಹಣ್ಣಾಗುವ ಜಾತಿ ಎಂದರೆ ಹಲಸು ಹಾಗೂ ಉತ್ತಮ ಪೋಷಕಾಂಶವುಳ್ಳ ಹಣ್ಣು ಇದಾಗಿರುವುದರಿಂದ ಕೆಲವೇ ತಿಂಗಳು ದೊರಕುವ ಹಲಸನ್ನು ತಿಂದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬುದು ಜನರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next