ದಾವಣಗೆರೆ: ಹೊನ್ನಾಳಿಯಲ್ಲಿ ಬುಧವಾರ ನಡೆದ ಪೊಲೀಸ್ ಠಾಣೆಗೆ ಮುತ್ತಿಗೆ, ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್ ತಿಳಿಸಿದ್ದಾರೆ. ಪೊಲೀಸರು ಸಂತ ಸೇವಾಲಾಲ್ ಮಾಲಾಧಾರಿಗಳ ಮೇಲೆ ಹಲ್ಲೆ ನಡೆಸಿಲ್ಲ.
ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದವನು ಟ್ರ್ಯಾಕ್ಟರ್ ಚಾಲಕ ಮತ್ತು ಇತರೆ ಕೆಲವರೆ ಹೊರತು ಮಾಲಾಧಾರಿಗಳಲ್ಲ. ಪೊಲೀಸರು ಬೂಟುಗಾಲಿನಿಂದ ಹೊಡೆದಿಲ್ಲ. ಅದು ಬರೀ ವದಂತಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ಸೂರಗೊಂಡನಕೊಪ್ಪ ಗ್ರಾಮದಲ್ಲಿ ಭೋಗ್ ಕಾರ್ಯಕ್ರಮ ಮುಗಿಸಿಕೊಂಡು ತಮ್ಮ ಊರಿಗೆ ವಾಪಾಸ್ಸಾಗುತ್ತಿದ್ದ ಕೆಲವರು ಹೊನ್ನಾಳಿಯ ಖಾಸಗಿ ಬಸ್ ನಿಲ್ದಾಣದ ಬಳಿ ರಸ್ತೆ ಮಧ್ಯದಲ್ಲಿ ತಾವಿದ್ದ ಟ್ರ್ಯಾಕ್ಟರ್ ನಿಲ್ಲಿಸಿದ್ದರು.
ಸಂಚಾರಕ್ಕೆ ಅಡ್ಡಿಯಾಗುತ್ತಿದ್ದರಿಂದ ಅಲ್ಲಿಂದ ಟ್ರ್ಯಾಕ್ಟರ್ ತೆರವುಗೊಳಿಸುವಂತೆ ನಮ್ಮ ಸಿಬ್ಬಂದಿ ಹೇಳಿದರು. ಅಷ್ಟಕ್ಕೆ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆದು, ಸಿಬ್ಬಂದಿಯನ್ನು ಥಳಿಸಿದ್ದಾರೆ. ಆಗ ಟ್ರ್ಯಾಕ್ಟರ್‌ನ್ನು ಠಾಣೆಗೆ ತಂದು, ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದರು. ಈ ಮಧ್ಯೆ ಮಾಲಾಧಾರಿಗಳಿಗೆ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ವದಂತಿ ಹರಡಿ, 7-8 ಸಾವಿರ ಮಂದಿ ಠಾಣೆ ಮುಂದೆ ಜಮಾಯಿಸಿ, ಕಲ್ಲು ತೂರಾಟದಲ್ಲಿ ತೊಡಗಿದ್ದರು.
ಪರಿಸ್ಥಿತಿ ನಿಯಂತ್ರಣಕ್ಕೆ 3 ಸುತ್ತಿನ ಅಶ್ರುವಾಯು ಸಿಡಿಸಲಾಯಿತು. ಅಲ್ಲಿಗೂ ಗಲಾಟೆ ಕಡಿಮೆಯಾಗದಿದ್ದರಿಂದ ಫೈರಿಂಗ್ ಅನಿವಾರ್ಯವಾಗಲಿದೆ ಎಂಬುದಾಗಿ ಎಚ್ಚರಿಸಿದ್ದರಿಂದ ಜನರು ಚದುರಿದರು ಎಂದು ತಿಳಿಸಿದರು. ಘಟನೆಗೆ ಸಂಬಂಧಿಸಿದಂತೆ ದೊಂಬಿ, ಕರ್ತವ್ಯಕ್ಕೆ ಅಡ್ಡಿ, ಗುಂಪು ಕಟ್ಟಿಕೊಂಡು ಕಾನೂನು ಬಾಹಿರ ಕ್ರಮಕ್ಕೆ ಮುಂದಾಗಿದ್ದರ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಈವರೆಗೆ ನಾಲ್ವರನ್ನು ಬಂಧಿಸಲಾಗಿದೆ.
ಇಡೀ ಘಟನೆಯ ವೀಡಿಯೋ ಚಿತೀಕರಣ ಮಾಡಲಾಗಿದೆ. ಅದರ ಆಧಾರದಲ್ಲಿ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಅಮಾಯಕರನ್ನು ಬಂಧನಕ್ಕೆ ಒಳಪಡಿಸಿದ್ದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಜೋರಾಗಿ ಟೇಪ್ ರೆಕಾರ್ಡ್ ಹಾಕಿಕೊಂಡು, ರಸ್ತೆ ಮಧ್ಯೆ ಟ್ರ್ಯಾಕ್ಟರ್ ನಿಲ್ಲಿಸಿ, ಹೋಟೆಲ್ ಗೆ ಹೋಗಿದ್ದರಿಂದ ಜನರಿಗೆ ಅಡಚಣೆಯಾಗುತ್ತಿತ್ತು. ಹಾಗಾಗಿ ಟ್ರ್ಯಾಕ್ಟರನ್ನು ಮುಂದಕ್ಕೆ ಬಿಡುವಂತೆ ಅಲ್ಲಿದ್ದ ಪೇದೆ ಹೇಳಿದ್ದರು ಅಷ್ಟೇ.
ಆ ಪೇದೆ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಘಟನೆಗೆ ಸಂಬಧಿಸಿದಂತೆ ಹೊನ್ನಾಳಿ ತಹಶೀಲ್ದಾರ್ ಅವರು ಸ್ಥಳ ತನಿಖೆ ನಡೆಸಿ, ವರದಿ ಸಹ ಸಲ್ಲಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಯಶೋಧಾ ಎಸ್. ವಂಟಿಗೋಡಿ, ನಗರ ಪೊಲೀಸ್ ಉಪಾಧೀಕ್ಷಕ ಕೆ. ಅಶೋಕ್ ಕುಮಾರ್, ವೃತ್ತ ನಿರೀಕ್ಷಕ ಸಂಗನಾಥ್, ಪಿಎಸ್‌ಐಗಳಾದ ಡಿ.ಎಂ. ಭವ್ಯ, ವೈ.ಎಸ್. ಶಿಲ್ಪ ಸುದ್ದಿಗೋಷ್ಠಿಯಲ್ಲಿದ್ದರು.