ಹೊನ್ನಾಳಿ: ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ತಾಲೂಕಿನ ಕೂಲಂಬಿ ಗ್ರಾಮದ ಶ್ರೀ ಗುರು ಗದ್ದಿಗೇಶ್ವರಸ್ವಾಮಿ ಕಾರ್ತಿಕೋತ್ಸವ, ರಥೋತ್ಸವ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಮಾತನಾಡಿದರು. ಕೂಲಂಬಿಯ ಶ್ರೀ ಗುರು ಗದ್ದಿಗೇಶ್ವರ ಸ್ವಾಮಿಯ ಸುಕ್ಷೇತ್ರದಲ್ಲಿ ನಡೆಯುತ್ತಿರುವ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸತಿ-ಪತಿಗಳಾಗುವುದು ಪೂರ್ವಜನ್ಮದ ಪುಣ್ಯದ ಫಲವಾಗಿದೆ. ಆದ್ದರಿಂದ, ಇಲ್ಲಿ ಸಂಗಾತಿಗಳಾಗಿರುವವರು ಆದರ್ಶ ಜೀವನ ನಡೆಸಬೇಕು ಎಂದು ಹೇಳಿದರು.
ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರ ಬಿಜೆಪಿ ಮುಖಂಡ ಎಂ.ಪಿ. ರಮೇಶ್ ಮಾತನಾಡಿ, ಚಿಕ್ಕ ಸಂಸಾರ ದೇಶಕ್ಕೆ ಹಿತಕರ. ಬೆಳೆಯುತ್ತಿರುವ ಜನಸಂಖ್ಯೆ ನಮ್ಮ ದೇಶದ ಎಲ್ಲಾ ಅಭಿವೃದ್ಧಿಯನ್ನು ನುಂಗಿ ಹಾಕುತ್ತಿದೆ. ಆದ್ದರಿಂದ, ನಾವೆಲ್ಲರೂ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗಬೇಕಿದೆ. ಹಾಗಾಗಿ, ಸಾಮೂಹಿಕ ವಿವಾಹದಲ್ಲಿ ಸತಿ-ಪತಿಗಳಾದವರು ಚಿಕ್ಕ ಸಂಸಾರಕ್ಕೆ ಮೊದಲ ಆದ್ಯತೆ ನೀಡಬೇಕು. ಹೆಣ್ಣಾಗಲಿ, ಗಂಡಾಗಲಿ, ನಮಗೆ ಒಂದೇ ಮಗು ಸಾಕು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸಂದೇಶವನ್ನು ಎಂ.ಪಿ. ರಮೇಶ್ ವಾಚಿಸಿದರು. ಶ್ರೀ ಗುರು ಗದ್ದಿಗೇಶ್ವರ, ಬಸವಣ್ಣ, ರಾಮೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಟಿ.ಎಸ್.
ಸೋಮಶೇಖರ್ ಮಾತನಾಡಿದರು. ಸಂಸದ ಜಿ.ಎಂ. ಸಿದ್ಧೇಶ್ವರ್ ಪತ್ನಿ ಗಾಯತ್ರಿ ಸಿದ್ಧೇಶ್ವರ್ ವಧು-ವರರಿಗೆ ಬಟ್ಟೆ ಉಚಿತವಾಗಿ ವಿತರಿಸಿದರು.
ಜಿಪಂ ಸದಸ್ಯೆ ದೀಪಾ ಜಗದೀಶ್, ಶಿಮುಲ್ ನಿರ್ದೇಶಕ ಬಿ.ಜಿ. ಬಸವರಾಜಪ್ಪ, ತಾಪಂ ಸದಸ್ಯೆ ಅಂಬುಜಾಕ್ಷಿ ಮರುಳಸಿದ್ಧಪ್ಪ, ಕೂಲಂಬಿ ಗ್ರಾಪಂ ಅಧ್ಯಕ್ಷೆ ಗಾಯತ್ರಿ ಪ್ರಶಾಂತ್, ಸದಸ್ಯರಾದ ಜಿ.ಎಸ್. ಸಿದ್ಧೇಶ್, ಕೆ.ಆರ್. ಅಜ್ಜಯ್ಯ, ಟಿ.ಜಿ. ರಮೇಶ್, ಟಿ.ಬಿ.ಮಂಜುನಾಥ್, ತಹಸೀಲ್ದಾರ್ ತುಷಾರ್ ಬಿ.ಹೊಸೂರ್ ಇತರರು ಉಪಸ್ಥಿತರಿದ್ದರು. ಸಾಮೂಹಿಕ ವಿವಾಹ ಸಮಾರಂಭದಲ್ಲಿ 74 ಜೋಡಿ ದಾಂಪತ್ಯಕ್ಕೆ ಅಡಿ ಇಟ್ಟರು.