Advertisement

ಡಿಪೋ ಇದ್ರೂ ಬಸ್‌ ಬರಲಿಲ್ಲ!

10:09 AM Jul 12, 2019 | Naveen |

ಎಂ.ಪಿ.ಎಂ. ವಿಜಯಾನಂದಸ್ವಾಮಿ
ಹೊನ್ನಾಳಿ:
ಬಹು ದಿನಗಳ ಹೋರಾಟದ ನಂತರ ಹೊನ್ನಾಳಿ ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಪ್ರಾರಂಭವಾಯಿತು. ಆದರೆ ಯಾವ ಉದ್ದೇಶಕ್ಕಾಗಿ ಡಿಪೋ ಪ್ರಾರಂಭವಾಯಿತೋ ಅದು ಐದು ವರ್ಷಗಳಾದರೂ ಇಂದಿಗೂ ಈಡೇರದಿರುವುದು ಅಚ್ಚರಿದಾಯಕ.

Advertisement

2014ರಲ್ಲಿ ಹೊನ್ನಾಳಿ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಎಂಟು ಬಸ್‌ಗಳೊಂದಿಗೆ ಕಾರ್ಯಾರಂಭ ಮಾಡಿತು. ಬಸ್‌ ಡಿಪೋ ಸ್ಥಾಪಿಸಿದ ಮುಖ್ಯ ಉದ್ದೇಶವೇ ಹೊನ್ನಾಳಿ ಮತ್ತು ನ್ಯಾಮತಿ ಭಾಗಗಳ ಅನೇಕ ಗ್ರಾಮಗಳಿಗೆ ಸಮರ್ಪಕ ಬಸ್‌ಗಳ ವ್ಯವಸ್ಥೆ ಕಲ್ಪಿಸುವುದಾಗಿತ್ತು. ಹರಿಹರ, ಶಿವಮೊಗ್ಗ ಸೇರಿದಂತೆ ಇತರ ಡಿಪೋಗಳಿಂದ ಈ ಭಾಗದಲ್ಲಿ ಸಾಕಷ್ಟು ಸಂಖ್ಯೆಯ ಬಸ್‌ಗಳನ್ನು ಓಡಿಸುವುದು ಸಾಧ್ಯವಿಲ್ಲದ ಕಾರಣ ಹೊನ್ನಾಳಿಯಲ್ಲಿ ಡಿಪೋ ಪ್ರಾರಂಭಿಸಲಾಯಿತು. ಆದರೆ, ಇಂದಿಗೂ ಹೊನ್ನಾಳಿ-ನ್ಯಾಮತಿ ತಾಲೂಕುಗಳ ಬೆರಳೆಣಿಕೆಯಷ್ಟು ಗ್ರಾಮಗಳಿಗಷ್ಟೇ ಕೆಎಸ್‌ಆರ್‌ಟಿಸಿ ಬಸ್‌ಗಳು ಓಡುತ್ತಿವೆ. ಅದೂ ಕೇವಲ ಒಂದೋ ಎರಡೋ ಬಸ್‌ಗಳು ಮಾತ್ರ.

ಸದ್ಯಕ್ಕೆ ಹೊನ್ನಾಳಿ ಡಿಪೋದಲ್ಲಿ ಒಟ್ಟು 38 ಬಸ್‌ಗಳಿದ್ದು, 36 ಮಾರ್ಗಗಳಲ್ಲಿ ಓಡುತ್ತಿವೆ. ಎರಡು ಹೆಚ್ಚುವರಿ ಕಾಯ್ದಿರಿಸಲಾದ ಬಸ್‌ಗಳಿವೆ. ಧರ್ಮಸ್ಥಳ, ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ-ಶಿವಮೊಗ್ಗ, ಶಿವಮೊಗ್ಗ-ಹರಿಹರ, ಮೈಸೂರು, ಹಾಸನ ಹಾಗೂ ಮಡಿಕೇರಿ ಮಾರ್ಗಗಳಲ್ಲಿ 23 ವೇಗದೂತ ಬಸ್‌ಗಳು ಸಂಚರಿಸುತ್ತಿವೆ. ಇನ್ನು, ತಾಲೂಕಿನ ಕೋಟೆಹಾಳ್‌, ಕುಂಕುವ, ಮಾಸೂರು-ಬಿದರಗಡ್ಡೆ, ರಾಮೇಶ್ವರ, ಮಾಸೂರು-ತೀರ್ಥರಾಮೇಶ್ವರ, ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಮಾರ್ಗಗಳಲ್ಲಿ 23 ಸಾಮಾನ್ಯ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ ಎಂದು ಡಿಪೋ ವ್ಯವಸ್ಥಾಪಕರಾದ ಕೆ. ಮಹೇಶ್ವರಪ್ಪ ತಿಳಿಸಿದರು.

ಹೆಚ್ಚಿನ ಬಸ್‌ ಶೀಘ್ರ: ಮುಂದಿನ ದಿನಗಳಲ್ಲಿ ಬಸ್‌ಗಳ ಸಂಖ್ಯೆ 50ಕ್ಕೆ ಹೆಚ್ಚಿಸುವ ಗುರಿ ಇದೆ. ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಈ ಕುರಿತು ಮನವಿ ಸಲ್ಲಿಸಲಾಗಿದೆ. ಅವರು ಸಾರಿಗೆ ಸಚಿವರೊಂದಿಗೆ ಚರ್ಚಿಸಿದ್ದಾರೆ. ಶೀಘ್ರವೇ ಹೆಚ್ಚುವರಿ ಬಸ್‌ಗಳು ಲಭಿಸುವ ನಿರೀಕ್ಷೆ ಇದೆ. ಆಗ, ಹೊನ್ನಾಳಿ-ನ್ಯಾಮತಿ ತಾಲೂಕುಗಳ ಗ್ರಾಮೀಣ ಭಾಗಗಳಿಗೆ ಬಸ್‌ ಓಡಿಸಲಾಗುವುದು ಎಂದು ನುಡಿದರು.

ಅಪಾಯಕಾರಿ ಪಯಣ: ಹೊನ್ನಾಳಿ ಪಟ್ಟಣ ಹಾಗೂ ಬಹುತೇಕ ಗ್ರಾಮಗಳಿಗೆ ಸಾರಿಗೆ ಸಂಪರ್ಕ ಇಲ್ಲದಿರುವುದರಿಂದ ವಿದ್ಯಾರ್ಥಿಗಳು, ವಿವಿಧ ಕೆಲಸ ಕಾರ್ಯಗಳಿಗೆ ತೆರಳುವ ಜನರು ಪರದಾಡುವಂತಾಗಿದೆ. ಸಂಚಾರಕ್ಕೆ ಯೋಗ್ಯವಲ್ಲದ ಖಾಸಗಿ ಬಸ್‌ಗಳು ಹಾಗೂ ಪ್ಯಾಸೆಂಜರ್‌ ಆಟೋಗಳಲ್ಲಿ ತಮ್ಮ ಪ್ರಾಣವನ್ನು ಅಂಗೈಯಲ್ಲಿ ಹಿಡಿದುಕೊಂಡು ದಿನಂಪ್ರತಿ ಸಂಚರಿಸುವ ಅನಿವಾರ್ಯತೆ ಇದೆ. ಅಪಘಾತಗಳು ಸಂಭವಿಸಿರುವ ನಿದರ್ಶನವೂ ಇದೆ.

Advertisement

ಗ್ರಾಮೀಣ ಪ್ರದೇಶಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ವಿವಿಧ ಸಂಘ-ಸಂಸ್ಥೆಗಳು ಅನೇಕ ಬಾರಿ ತಾಲೂಕು ಆಡಳಿತ, ಹೊನ್ನಾಳಿ ಡಿಪೋ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ, ಸಂಬಂಧಿಸಿದವರು ಇತ್ತ ಗಮನಹರಿಸಿ ಗ್ರಾಮೀಣ ಪ್ರದೇಶಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಬಸ್‌ ಓಡಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಗ್ರಾಮೀಣ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂಬುದು ನಮ್ಮ ಉದ್ದೇಶ. ಹೆಚ್ಚುವರಿ ಬಸ್‌ಗಳನ್ನು ಒದಗಿಸುವಂತೆ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರಿಗೆ ಮನವಿ ಮಾಡಲಾಗಿದ್ದು, ಶೀಘ್ರವೇ ಬಸ್‌ಗಳು ಲಭಿಸಲಿವೆ. ಆಗ ಗ್ರಾಮೀಣ ಭಾಗಗಳಿಗೆ ಬಸ್‌ ಸೌಲಭ್ಯ ಕಲ್ಪಿಸಲಾಗುವುದು.
ಎಂ.ಪಿ. ರೇಣುಕಾಚಾರ್ಯ, ಶಾಸಕರು.

ಅವಳಿ ತಾಲೂಕಿನ ಗ್ರಾಮೀಣ ಭಾಗಗಳಿಗೆ ಸಾಕಷ್ಟು ಸಂಖ್ಯೆಯ ಬಸ್‌ಗಳನ್ನು ಓಡಿಸುವುದು ನಮ್ಮ ಆದ್ಯತೆಯ ವಿಷಯಗಳಲ್ಲೊಂದು. ಅಷ್ಟೆ ಅಲ್ಲದೇ ಹೊನ್ನಾಳಿಯಿಂದ ಅಂತಾರಾಜ್ಯ ಹಾಗೂ ಪುಣ್ಯಕ್ಷೇತ್ರಗಳಿಗೂ ಬಸ್‌ ಓಡಿಸುವ ಉದ್ದೇಶವಿದೆ.
•ಕೆ. ಮಹೇಶ್ವರಪ್ಪ,
ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌, ಹೊನ್ನಾಳಿ.

Advertisement

Udayavani is now on Telegram. Click here to join our channel and stay updated with the latest news.

Next