Advertisement

ಭರದಿಂದ ಸಾಗಿದೆ ರೈತರ ಡೆಟಾ ಎಂಟ್ರಿ ಕಾರ್ಯ

04:15 PM Jun 28, 2019 | Team Udayavani |

ಹೊನ್ನಾಳಿ: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ರೈತರ ಮಾಹಿತಿ ಅಪ್‌ಲೋಡ್‌ ಮಾಡುವ ಕಾರ್ಯ ತಾಲೂಕು ಕಚೇರಿಯಲ್ಲಿ ತ್ವರಿತ ಗತಿಯಲ್ಲಿ ಸಾಗಿದೆ.

Advertisement

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಲ್ಲಿ ವರ್ಷಕ್ಕೆ ರೂ.6ಸಾವಿರ ರೈತರ ಖಾತೆಗೆ ಜಮಾ ಮಾಡಲಾಗುತ್ತಿದ್ದು, ರೈತರ ಬ್ಯಾಂಕ್‌ ಖಾತೆ ಸಂಖ್ಯೆ, ಆಧಾರ್‌ ಕಾರ್ಡ್‌ ಸಂಖ್ಯೆ, ಮೊಬೈಲ್ ಸಂಖ್ಯೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕಂದಾಯ ಸಿಬ್ಬಂದಿ ಅಪ್‌ಲೋಡ್‌ ಮಾಡಬೇಕಿದೆ.

ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸೂಚನೆಯಂತೆ ಅತ್ಯಂತ ವೇಗವಾಗಿ ಡೆಟಾ ಎಂಟ್ರಿ ಕಾರ್ಯ ಮಾಡಿ ಮುಗಿಸಬೇಕು ಎನ್ನವುದನ್ನು ಗಮನದಲ್ಲಿಟ್ಟುಕೊಂಡು ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರು ಕಂದಾಯ ಇಲಾಖೆ ನೌಕರರಿಗೆ ರಾತ್ರಿ 8 ಗಂಟೆಯವರೆಗೂ ಕೆಲಸ ಮಾಡುವಂತೆ ಸೂಚಿಸಿ, ತಾವೂ ಕಚೇರಿಯಲ್ಲಿ ಕುಳಿತು ಪ್ರತಿ ಡೆಟಾ ಎಂಟ್ರಿ ಕೆಲಸವನ್ನು ಪರಿಶೀಲಿಸುತ್ತಿದ್ದಾರೆ.

ಕಂದಾಯ ಇಲಾಖೆ ಮಹಿಳಾ ಸಿಬ್ಬಂದಿಗೆ ಇಲ್ಲಿ ಸ್ವಲ್ಪ ರಿಯಾಯಿತಿ ಕೊಟ್ಟು ತಮ್ಮ ಕೆಲಸವನ್ನು ಬೇಗನೆ ಮಾಡಿ ಸಂಜೆ 6ಕ್ಕೆ ಮನೆಗೆ ತೆರಳಬಹುದು ಎಂದು ತಹಶೀಲ್ದಾರ್‌ ಸೂಚಿಸಿದ್ದಾರೆ.

ಬುಧವಾರ ರಾತ್ರಿ 7.30 ಸಮಯವಾದರೂ ತಾಲೂಕು ಕಚೇರಿಯಲ್ಲಿ ಇಲಾಖಾ ನೌಕರರು ಕೆಲಸ ಮಾಡುತ್ತಿದ್ದುದನ್ನು ಕಂಡು ಕಚೇರಿ ಒಳ ನಡೆದರೆ ತಹಶಿಲ್ದಾರ್‌, ಉಪ ತಹಶೀಲ್ದಾರ್‌ ಸೇರಿದಂತೆ ಎಲ್ಲರೂ ರೈತರ ಡೆಟಾ ಎಂಟ್ರಿ ಕಾರ್ಯದಲ್ಲಿ ತೊಡಗಿದ್ದರು.

Advertisement

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ತಾಲೂಕಿನಲ್ಲಿ ಒಟ್ಟು 44,421 ರೈತ ಫಲಾನುಭವಿಗಳಿದ್ದು, ಈಗಾಗಲೇ 24 ಸಾವಿರ ರೈತರ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ನಮ್ಮ ಕೆಲಸ ಶೇ.50ಕ್ಕೂ ಹೆಚ್ಚು ಆಗಿದ್ದು ಶೀಘ್ರದಲ್ಲಿಯೇ ಶೇ.100ರಷ್ಟು ಸಾಧನೆ ಮಾಡುತ್ತೇವೆ ಎಂದು ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರು ತಿಳಿಸಿದರು.

ದೇಶದ ಬೆನ್ನೆಲುಬು ರೈತ ಎಂದು ಹೇಳಿದರೆ ಸಾಲದು. ನಮಗಾಗಿ ರೈತ ಹೊಲದಲ್ಲಿ ದುಡಿಯುತ್ತಾನೆ. ರೈತನಿಗಾಗಿ ಜನಪ್ರತಿನಿಧಿಗಳಾದ ನಾವು ಅಲ್ಪ ಸೇವೆ ಮಾಡಬೇಕು. ರೈತರ ಡೆಟಾ ಎಂಟ್ರಿ ಕಾರ್ಯವನ್ನು ಆದಷ್ಟು ಬೇಗನೆ ಮಾಡಿ ಮುಗಿಸಿ ಎಂದು ಕಟ್ಟುನಿಟ್ಟಿನ ಸಲಹೆ ನೀಡಿದ್ದೇನೆ.
ಎಂ.ಪಿ. ರೇಣುಕಾಚಾರ್ಯ,
ಶಾಸಕರು, ಹೊನ್ನಾಳಿ.

Advertisement

Udayavani is now on Telegram. Click here to join our channel and stay updated with the latest news.

Next