Advertisement

ಶ್ರೀ ಚನ್ನಪ್ಪಸ್ವಾಮಿಗಳ ರಥೋತ್ಸವ

10:07 AM Aug 28, 2019 | Naveen |

ಹೊನ್ನಾಳಿ: ಸುಕ್ಷೇತ್ರ ಹಿರೇಕಲ್ಮಠದ ಶ್ರೀ ಚನ್ನಪ್ಪಸ್ವಾಮಿಗಳ ಮಹಾ ರಥೋತ್ಸವ ಮಂಗಳವಾರ ಮಧ್ಯಾಹ್ನ 12.15ಕ್ಕೆ ಬಹು ವಿಜೃಂಭಣೆಯಿಂದ ಜರುಗಿತು.

Advertisement

ಸಕಲ ಬಿರುದಾವಳಿಗಳು, ವಾದ್ಯ, ಭಜನೆ, ಡೊಳ್ಳು, ಕೀಲು ಕುದುರೆ, ಪುರವಂತರ ಉರುವಣೆ, ಕಂಸಾಳೆ, ಜಾಂಝ್ ಮೇಳ, ಹಲಗೆ ಇತ್ಯಾದಿ ವಿನೋದಾವಳಿಗಳಿಂದ ಕೂಡಿದ್ದ ರಥೋತ್ಸವ ಯಶಸ್ವಿಯಾಗಿ ನಡೆಯಿತು.

ರಥದಲ್ಲಿ ಒಡೆಯರ್‌ ಡಾ| ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಗಳು ಆಸೀನರಾದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥದ ಚಕ್ರಕ್ಕೆ ತೆಂಗಿನಕಾಯಿಗಳನ್ನು ಒಡೆದು, ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆಯುವುದರ ಮೂಲಕ ರಥೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು.

ರಥೋತ್ಸವ ಶ್ರೀಮಠದಿಂದ ಖಾಸಗಿ ಬಸ್‌ ನಿಲ್ದಾಣದವರೆಗೆ ಸಾಗಿ ಪುನಃ ಶ್ರೀಮಠಕ್ಕೆ ಮರಳಿತು. ಚನ್ನಪ್ಪಸ್ವಾಮಿಗಳಿಗೆ ಜಯವಾಗಲಿ, ಒಡೆಯರ್‌ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳಿಗೆ, ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರಿಗೆ ಜಯವಾಗಲಿ ಎನ್ನುವ ಘೋಷಣೆಗಳು ರಥೋತ್ಸವದಲ್ಲಿ ಕೇಳಿ ಬಂದವು.

ಕೆಂಡದರ್ಚನೆ: ರಥೋತ್ಸವಕ್ಕೂ ಮುನ್ನ ಬೆಳಿಗ್ಗೆ 10.30ಕ್ಕೆ ಶ್ರೀಮಠದ ಮುಂಭಾಗ ವೀರಭದ್ರದೇವರ ಕೆಂಡದರ್ಚನೆ ಸಾವಿರಾರು ಭಕ್ತರು ಕೆಂಡ ಹಾಯುವುದರ ಮೂಲಕ ನಡೆಯಿತು. ಈ ಬಾರಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕೆಂಡ ಹಾಯ್ದಿದ್ದು ವಿಶೇಷ.

Advertisement

ಮಕ್ಕಳು, ಹೆಣ್ಣುಮಕ್ಕಳು, ವಯೋವೃದ್ಧರು ಕೆಂಡ ಹಾಯುವುದರ ಮೂಲಕ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು.

ಸಾಮೂಹಿಕ ಭೋಜನ: ರಥೋತ್ಸವಕ್ಕೆ ಆಗಮಿಸಿದ್ದ ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಶ್ರೀಮಠದ ಆವರಣದಲ್ಲಿ ಸಾಮೂಹಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಗೋಧಿ ಪಾಯಸ, ಅನ್ನ, ಸಾಂಬಾರ್‌, ಪಲ್ಯ ಸ್ವೀಕರಿಸಿದರು.

ಬೆಳಗ್ಗೆ ಶ್ರೀಮಠದ ಕರ್ತೃ ಗದ್ದುಗೆಗಳಿಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ, ದೀಪೋತ್ಸವ, ಪ್ರಸಾದ ವಿನಿಯೋಗ ಕಾರ್ಯಗಳು ಜರುಗಿದವು. ರಥೋತ್ಸವ ಕಾರ್ಯಕ್ರಮಕ್ಕೂ ಮುನ್ನ ಧ್ವಜ, ಹೂವಿನ ಹಾರಗಳು ಸೇರಿದಂತೆ ಇತರ ಪ್ರಮುಖ ವಸ್ತುಗಳನ್ನು ಬಹಿರಂಗ ಹರಾಜು ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next