ಹಾಂಕಾಂಗ್: ಕೋವಿಡ್‌ನಿಂದಾಗಿ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿದ ಪರಿಣಾಮವಾಗಿ ಜಾಗತಿಕ ಇಂಗಾಲ ಮಾಲಿನ್ಯ ಕೂಡ ಇಳಿಕೆಯಾಗಿದೆ. ಜನವರಿಯಿಂದ ಎಪ್ರಿಲ್ ಆದಿಭಾಗದವರೆಗಿನ ಅವಧಿಯಲ್ಲಿ ಜಗತ್ತಿನಲ್ಲಿ ದೈನಂದಿನ ಇಂಗಾಲ ಹೊರಸೂಸುವಿಕೆ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಾಗ ಶೇ. 17ರಷ್ಟು ಇಳಿಕೆಯಾಗಿದೆಯೆಂದು ಅಂತಾರಾಷ್ಟ್ರೀಯ ಅಧ್ಯಯನವೊಂದು ತಿಳಿಸಿದೆ.
ಈ ಪ್ರಮಾಣ ವರ್ಷಾಂತ್ಯದ ವೇಳೆ ಶೇ. 4.4ರಿಂದ ಶೇ. 8ರಷ್ಟಿರಬಹುದು. ಇದು 2006ರಿಂದೀಚೆ ಮಾಲಿನ್ಯ ಮಟ್ಟ ಅತ್ಯಂತ ಕಡಿಮೆಯಾಗಿರುವ ನಿದರ್ಶನವಾಗಿದೆ ಎಂದು ಅಧ್ಯಯನ ಹೇಳಿದೆ.
ಅಮೆರಿಕದ ಎಲ್ಲ 50 ರಾಜ್ಯಗಳು ಹಾಗೂ ಚೀನದ ಎಲ್ಲ 30 ಪ್ರಾಂತಗಳನ್ನೊಳಗೊಂಡಂತೆ 69 ರಾಷ್ಟ್ರಗಳಲ್ಲಿ ಅಧ್ಯಯನ ನಡೆಸಲಾಯಿತು. ಈ 69 ರಾಷ್ಟ್ರಗಳು ವಿಶ್ವ ಜನಸಂಖ್ಯೆಯ ಶೇ. 85 ಹಾಗೂ ಜಾಗತಿಕ ಇಂಗಾಲ ಹೊರಸೂಸುವಿಕೆಯ ಶೇ. 97 ಪಾಲು ಹೊಂದಿವೆ. ಅತಿಹೆಚ್ಚು ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಎರಡು ರಾಷ್ಟ್ರಗಳಾದ ಅಮೆರಿಕ ಮತ್ತು ಚೀನದಲ್ಲಿ ಗರಿಷ್ಠ ಪ್ರಮಾಣದಲ್ಲಿ ಇಂಗಾಲ ಮಾಲಿನ್ಯ ಇಳಿಕೆಯಾಗಿದೆ.
ವಾಹನಗಳ ಓಡಾಟ ಸ್ಥಗಿತಗೊಂಡಿರುವುದು, ಕಾರ್ಖಾನೆಗಳು ಮುಚ್ಚಿರುವುದು, ಜನರ ದೈನಂದಿನ ಚಟುವಟಿಕೆಗಳು ಗಣನೀಯವಾಗಿ ಕಡಿಮೆಯಾಗಿರುವುದು ಇಂಗಾಲ ಮಾಲಿನ್ಯ ಕಡಿಮೆಯಾಗಲು ಕಾರಣವಾಗಿರುವ ಮುಖ್ಯ ಅಂಶಗಳು. ಕೋವಿಡ್ ಮನುಕುಲವನ್ನು ನಾನಾ ರೀತಿಯಲ್ಲಿ ಕಾಡಿದ್ದರೂ ಪ್ರಕೃತಿಗೆ ನೇರವಾಗಿಯೇ ಕೆಲವು ಉಪಕಾರಗಳನ್ನು ಮಾಡಿದೆ. ಮಾಲಿನ್ಯ ಇಳಿಕೆ ಅಂಶವೂ ಇದರಲ್ಲಿ ಸೇರಿದೆ.