Advertisement

ಹಾಂಕಾಂಗ್‌ ಬ್ಯಾಡ್ಮಿಂಟನ್‌: ವಿಂಗ್‌ಗೆ ಪ್ರಶಸ್ತಿ, ಸಿಂಧುಗೆ ಸೋಲು

12:05 PM Nov 27, 2017 | Team Udayavani |

ಹೊಸದಿಲ್ಲಿ: ವಿಶ್ವದ ಎರಡನೇ ರ್‍ಯಾಂಕಿನ ಬ್ಯಾಡ್ಮಿಂಟನ್‌ ತಾರೆ ಭಾರತದ ಪಿ.ವಿ.ಸಿಂಧು ಹಾಂಕಾಂಗ್‌ ಓಪನ್‌ ಸೂಪರ್‌ ಸೀರೀಸ್‌ನಲ್ಲಿ ರನ್ನರ್‌ಅಪ್‌ ಸ್ಥಾನಕ್ಕೆ ತೃಪ್ತರಾಗಿದ್ದಾರೆ. ರವಿವಾರ ನಡೆದ ಮಹಿಳೆಯರ ಸಿಂಗಲ್ಸ್‌ ಫೈನಲ್‌ನಲ್ಲಿ ಸಿಂಧು 18-21, 18-21 ರಿಂದ ಚೈನೀಸ್‌ ತೈಪೆಯ ಥಾಯ್‌ ಜು ವಿಂಗ್‌ ವಿರುದ್ಧ ಸೋಲುಂಡರು. 

Advertisement

44 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ವಿಶ್ವದ ನಂಬರ್‌ ವನ್‌ ರ್‍ಯಾಂಕಿನ ವಿಂಗ್‌ ತೀವ್ರ ಹೋರಾಟ ನಡೆಸಿ ಗೆಲುವು ಪಡೆದರು. ವಿಶ್ವದ ಅಗ್ರ ಇಬ್ಬರು ಆಟಗಾರ್ತಿಯರು ಪ್ರಶಸ್ತಿಗಾಗಿ ವೀರೋಚಿತ ಹೋರಾಟ ನಡೆಸಿದ್ದು ಅಂತಿಮವಾಗಿ ಸಿಂಧು ಶರಣಾದರು. ಕಳೆದ ವರ್ಷವೂ ಇದೇ ಕೂಟದ ಫೈನಲ್‌ನಲ್ಲಿ ಇವರಿಬ್ಬರು ಹೋರಾಡಿದ್ದು ವಿಂಗ್‌ ಪ್ರಶಸ್ತಿ ಜಯಿಸಿದ್ದರು. ಈ ಬಾರಿ ಸೇಡು ತೀರಿಸಿಕೊಳ್ಳಲು ಸಿಂಧು ಶತಪ್ರಯತ್ನ ನಡೆಸಿದರೂ ಯಶಸ್ಸು ಸಾಧಿಸಲು ವಿಫ‌ಲರಾದರು.

ಎರಡೂ ಸೆಟ್‌ನ ಆರಂಭದಲ್ಲಿ ವಿಂಗ್‌ ಮುನ್ನಡೆ ಪಡೆದಿದ್ದರು. ಆದರೆ ಮಧ್ಯಾಂತರದಲ್ಲಿ ಸಿಂಧು ಚುರುಕಿನ ಪ್ರದರ್ಶನ ನೀಡುವ ಮೂಲಕ ಪಂದ್ಯವನ್ನು ಸಮಬಲದತ್ತ ತೆಗೆದುಕೊಂಡು ಹೋಗಿದ್ದರು. ಆದರೆ ಕೊನೆ ಕ್ಷಣದಲ್ಲಿ ವಿಶ್ವದ ನಂಬರ್‌ ವನ್‌ ಆಟಗಾರ್ತಿ ಮೇಲುಗೈ ಸಾಧಿಸಿದರು. ಹೀಗಾಗಿ ರಿಯೋ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಸಿಂಧು ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. 

ಪ್ರಸಕ್ತ ವರ್ಷದಲ್ಲಿ ಸಿಂಧುಗೆ ಇದು ಎರಡನೇ ರನ್ನರ್‌ಅಪ್‌ ಪ್ರಶಸ್ತಿಯಾಗಿದೆ. ಇದಕ್ಕೂ ಮುನ್ನ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕೂಡ ಫೈನಲ್‌ನಲ್ಲಿ ಜಪಾನ್‌ನ ನಮೋಜಿ ವಕಾಹರ ವಿರುದ್ಧ ಸೋತಿದ್ದರು. ಉಳಿದಂತೆ ಇಂಡಿಯಾ ಓಪನ್‌ ಮತ್ತು ಕೊರಿಯಾ ಓಪನ್‌ನಲ್ಲಿ ಅವರು ಪ್ರಶಸ್ತಿ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next