Advertisement
ರಾಜ್ಯದಲ್ಲಿ ಹನಿಟ್ರ್ಯಾಪ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಸುಂದರ ಮಾನಿನಿಯರನ್ನು ಛೂ ಬಿಟ್ಟು ಶ್ರೀಮಂತ ಕುಳಗಳಿಗೆ ಗಾಳ ಹಾಕುವ ಹತ್ತಾರು ಗ್ಯಾಂಗ್‌ಗಳು ಸಕ್ರಿಯವಾಗಿದೆ. ಹನಿಟ್ರ್ಯಾಪ್ ಉರುಳಿಗೆ ಸಿಲುಕಿ ಲಕ್ಷಾಂತರ ರೂ. ಕಳೆದುಕೊಂಡ ಬಹಳಷ್ಟು ಮಂದಿ ಮಾನಕ್ಕೆ ಅಂಜಿ ಠಾಣೆ ಮೆಟ್ಟಿಲೇರುತ್ತಿಲ್ಲ. ಈ ಗ್ಯಾಂಗ್‌ಗಳು ವಾರ್ಷಿಕವಾಗಿ ಕೋಟ್ಯಂತರ ರೂ. ಲೂಟಿ ಹೊಡೆಯುತ್ತಿವೆ ಎನ್ನುವ ಅಂಶವನ್ನು ಹಿರಿಯ ಪೊಲೀಸ್ ಅಧಿಕಾರಿಗಳೇ “ಉದಯವಾಣಿ’ಗೆ ತಿಳಿಸಿದ್ದಾರೆ.
ಉದ್ಯಮಿಗಳು, ರಾಜಕಾರಣಿಗಳು ಸೇರಿ ಶ್ರೀಮಂತರ ಚಲನವಲನ ಗಮನಿಸುವ ಆರೋಪಿಗಳು ತಮ್ಮ ಗ್ಯಾಂಗ್‌ನಲ್ಲಿರುವ ಯುವತಿಯರಿಗೆ ಅವರ ಮಾಹಿತಿ ರವಾನಿಸುತ್ತಾರೆ. ಇತ್ತ ಯುವತಿಯರು ಕೆಲಸ, ವೈಯಕ್ತಿಕ ಸಮಸ್ಯೆ, ವ್ಯವಹಾರ ಕುದುರಿಸುವ ನೆಪದಲ್ಲಿ ಆ ವ್ಯಕ್ತಿಗಳನ್ನು ಸಂಪರ್ಕಿಸಿ ಆತ್ಮೀಯವಾಗಿ ಮಾತನಾಡುತ್ತಾರೆ. ಅನಂತರ ದೈಹಿಕ ಸಂಪರ್ಕ ಬೆಳೆಸಲು ಒಪ್ಪಿಸಿ ತಾವಿದ್ದಲ್ಲಿಗೆ ಕರೆಸಿಕೊಳ್ಳುತ್ತಾರೆ. ಬಳಿಕ ಖಾಸಗಿ ದೃಶ್ಯವನ್ನು ಮೊಬೈಲ್, ಮೈಕ್ರೋ ಕೆಮರಾ, ಸಿಸಿ ಕೆಮರಾಗಳಲ್ಲಿ ಸೆರೆ ಹಿಡಿಯುತ್ತಾರೆ. ವೀಡಿಯೋವನ್ನು ಗ್ಯಾಂಗ್‌ನ ಕಿಂಗ್‌ಪಿನ್‌ಗಳಿಗೆ ಒಪ್ಪಿಸುವ ಯುವತಿಯರು ಕೃತ್ಯಕ್ಕೆ ಕೈತುಂಬ ದುಡ್ಡು ಪಡೆಯುತ್ತಾರೆ. ಇತ್ತ ಕಿಂಗ್‌ಪಿನ್‌ಗಳು ಹನಿಟ್ರ್ಯಾಪ್ ಖೆಡ್ಡಾಗೆ ಬಿದ್ದ ವ್ಯಕ್ತಿಗಳಿಗೆ ವೀಡಿಯೋ ಕಳುಹಿಸಿ ಲಕ್ಷಾಂತರ ರೂ.ಗಳಿಗೆ ಬೇಡಿಕೆ ಇಡುತ್ತಾರೆ. ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣ ಅಥವಾ ಇನ್ನಿತರ ಕಡೆ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಸುತ್ತಾರೆ.
Related Articles
ಇತ್ತೀಚೆಗೆ ಆನ್‌ಲೈನ್‌ನಲ್ಲೇ ವೀಡಿಯೋ ಕರೆ ಮಾಡಿ ಆಕರ್ಷಕ ಮಾತುಗಳನ್ನಾಡುವ ಯುವತಿಯರು ಪುರುಷರನ್ನು ಬಲೆಗೆ ಬೀಳಿಸುತ್ತಾರೆ. ಮಾತಿಗೆ ಮರುಳಾಗಿ ಅವರು ಹೇಳಿದಂತೆ ಕೇಳಿದರೆ ನಗ್ನ ವೀಡಿಯೋ ಸೆರೆಹಿಡಿದು ಹನಿಟ್ರ್ಯಾಪ್‌ಗೆ ಗುರಿಯಾಗಿಸಿ ಲಕ್ಷಾಂತರ ರೂ. ಲಪಟಾಯಿಸುತ್ತಾರೆ.
Advertisement
ಕರಾವಳಿಯಲ್ಲೂ ತಂಡ ಸಕ್ರಿಯ?ಕಳೆದ 5 ವರ್ಷಗಳಲ್ಲಿ ರಾಜ್ಯಾದ್ಯಂತ 43 ಹನಿಟ್ರ್ಯಾಪ್ ಪ್ರಕರಣ ದಾಖಲಾಗಿದ್ದು, ಈ ಪೈಕಿ 28 ವಿಚಾರಣೆ ಹಂತದಲ್ಲಿವೆ. 2 ಪ್ರಕರಣ ಖುಲಾಸೆಯಾಗಿವೆ. 11 ತನಿಖಾ ಹಂತದಲ್ಲಿವೆ. ಇಂತಹ ಪ್ರಕರಣಗಳಲ್ಲಿ ರಾಜ್ಯ ರಾಜಧಾನಿ ಮೊದಲ ಸ್ಥಾನದಲ್ಲಿದ್ದರೆ, ಮಂಗಳೂರು, ಬೆಳಗಾವಿ, ಚಿಕ್ಕಮಗಳೂರು ಅನಂತರದ ಸ್ಥಾನದಲ್ಲಿವೆ. ಇದುವರೆಗೂ ಹನಿಟ್ರ್ಯಾಪ್ ದಂಧೆಕೋರರಿಂದ ಸುಮಾರು 50 ಲಕ್ಷ ರೂ. ನಗದು, ಕೋಟ್ಯಂತರ ರೂ. ಮೌಲ್ಯದ ಆಭರಣ ವಶಪಡಿಸಿಕೊಳ್ಳಲಾಗಿದೆ. ರಾಜ್ಯದ ಪ್ರಮುಖ “ಹನಿಟ್ರ್ಯಾಪ್’ ಪ್ರಕರಣ
– ಸಮಸ್ಯೆ ಪರಿಹರಿಸಲು ಪೂಜೆ ಮಾಡಿಸಬೇಕೆಂಬ ನೆಪದಲ್ಲಿ ಪುರೋಹಿತರೊಬ್ಬರನ್ನು ಮನೆಗೆ ಕರೆಸಿ ಹನಿಟ್ರ್ಯಾಪ್ ಮಾಡಿ 49 ಲಕ್ಷ ರೂ. ಪೀಕಿಸಿದ್ದ ದಂಪತಿ ಕಳೆದ ಜನವರಿಯಲ್ಲಿ ಮಂಗಳೂರು ಪೊಲೀಸರಿಂದ ಬಂಧಿತರಾಗಿದ್ದರು.
– ಕಲಬುರಗಿಯ ವೈದ್ಯರೊಬ್ಬರ ಮಗನಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ ಬೆಂಗಳೂರಿಗೆ ಕರೆಸಿ ಹನಿಟ್ರ್ಯಾಪ್
ಮಾಡಿ 1.16 ಕೋಟಿ ರೂ. ಲಪಟಾಯಿಸಿದ್ದ ಗ್ಯಾಂಗ್ ಕಳೆದ ಮೇನಲ್ಲಿ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿತ್ತು.
– ಫೇಸ್‌ಬುಕ್‌ನಲ್ಲಿ ಯುವಕರನ್ನು ಪರಿಚಯಿಸಿ ತಾವಿದ್ದಲ್ಲಿಗೆ ಕರೆಸಿ ಹನಿಟ್ರ್ಯಾಪ್‌ಗೆ ಒಳಪಡಿಸಿ ದರೋಡೆ ಮಾಡಿ ಲಕ್ಷಾಂತರ ರೂ. ಸಂಪಾದಿಸಿದ್ದ ನಾಲ್ವರನ್ನು ಮಂಗಳೂರು ಪೊಲೀಸರು 2021ರ ಜನವರಿಯಲ್ಲಿ ಬಂಧಿಸಿದ್ದರು.
– ವೆಬ್‌ಸೈಟ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಹನಿಟ್ರ್ಯಾಪ್
ಮಾಡುತ್ತಿದ್ದ ದಂಪತಿ 2021 ಫೆಬ್ರವರಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.
– ಮ್ಯಾಟ್ರಿಮೋನಿಯಲ್‌ನಲ್ಲಿ ಅವಿವಾಹಿತ, ವಿಚ್ಛೇದಿತ ಪುರುಷರನ್ನು ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಮಾಡಿ ಲಕ್ಷ-ಲಕ್ಷ ವಸೂಲಿ ಮಾಡಿದ್ದ ಶಿಕ್ಷಕಿ 2021 ಜನವರಿಯಲ್ಲಿ ಇಂದಿರಾನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಳು.
– ಪುರುಷರನ್ನು ಪುಸಲಾಯಿಸಿ ಮಹಿಳೆಯರೊಂದಿಗೆ ಕಳುಹಿಸಿ ನಗ್ನ ವೀಡಿಯೋ ಸೆರೆ ಹಿಡಿದು ಟ್ರ್ಯಾಪ್ ಮಾಡುತ್ತಿದ್ದ 13 ಮಂದಿಯ ಗ್ಯಾಂಗ್ 2021 ಆಗಸ್ಟ್ ನಲ್ಲಿ ಚಿಕ್ಕಮಗಳೂರು ಪೊಲೀಸರ ಕಾರ್ಯಾಚರಣೆಯಲ್ಲಿ ಬಂಧಿಸಲ್ಪಟ್ಟಿತ್ತು. ಹನಿಟ್ರ್ಯಾಪ್ ದಂಧೆ ನಡೆಸುವವರ ಬಗ್ಗೆ ಪೊಲೀಸರು ನಿಗಾ ಇಟ್ಟಿದ್ದಾರೆ. ಸಿಕ್ಕಿಬಿದ್ದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಕರೆ ಮಾಡಿ ಬ್ಲ್ಯಾಕ್‌ಮೇಲ್ ಮಾಡುವವರ ವಿರುದ್ಧ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು.
– ಡಾ| ಅನೂಪ್ ಎ. ಶೆಟ್ಟಿ, ಡಿಸಿಪಿ, ಈಶಾನ್ಯ ವಿಭಾಗ ರಾಜ್ಯದಲ್ಲಿ 5 ವರ್ಷಗಳಲ್ಲಿ ದಾಖಲಾದ ಪ್ರಕರಣಗಳು
ಬೆಂಗಳೂರು 13
ದ.ಕ. ಜಿಲ್ಲೆ 7
ಬೆಳಗಾವಿ 6
ಚಿಕ್ಕಮಗಳೂರು 5
ವಿಜಯಪುರ 4
ಹಾಸನದಲ್ಲಿ 3
ಮೈಸೂರು, ಕೊಡಗು,
ಶಿವಮೊಗ್ಗ ಮತ್ತು
ಉಡುಪಿ 1 (ತಲಾ) – ಅವಿನಾಶ್ ಮೂಡಂಬಿಕಾನ