ಸಾಗರ: ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವುದು, ತಮ್ಮ ಲಾಭಕ್ಕಾಗಿ ಎಚ್ಐವಿಯಂತಹದ್ದನ್ನು ಇಂಜೆಕ್ಟ್ ಮಾಡುವವರನ್ನು ನೇಣುಗಂಬಕ್ಕೆ ಹಾಕಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಹನಿಟ್ರ್ಯಾಪ್, ಮನಿಟ್ರ್ಯಾಪ್ ಜಾಸ್ತಿಯಾಗುತ್ತಿದೆ. ಹಿಂದಿನಿಂದಲೂ ಇದು ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ರಾಜ್ಯದಲ್ಲಿ ದ್ವೇಷದ ರಾಜಕಾರಣ ಹೆಚ್ಚುತ್ತಿದೆ. ಜನಪ್ರತಿನಿಧಿಯಾದವರು ಹೆಚ್ಚು ಜಾಗ್ರತೆಯಿಂದ ಇರಬೇಕು. ಭ್ರಷ್ಟಾಚಾರ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳಲ್ಲಿ ಸಿಲುಕಬಾರದು. ಜನ ನಮ್ಮನ್ನು ಗಮನಿಸುತ್ತಿರುತ್ತಾರೆ ಎನ್ನುವ ಪ್ರಜ್ಞೆ ಇರಬೇಕು. ಮುನಿರತ್ನ ವಿರುದ್ಧ ಕೇಳಿ ಬಂದಿರುವ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆದು ಬಂಧನಕ್ಕೆ ಒಳಗಾಗಿದ್ದಾರೆ. ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ.
ಡಿಸಿಎಂ ಡಿ.ಕೆ.ಶಿವಕುಮಾರ್ ಪಾತ್ರವೂ ಇಲ್ಲ. ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಸಹ ಇಂತಹ ಘಟನೆ ನಡೆದಿದೆ.
ಅನಗತ್ಯವಾಗಿ ಉಪ ಮುಖ್ಯಮಂತ್ರಿಗಳ ಮೇಲೆ ಗೂಬೆ ಕೂರಿಸಬೇಡಿ. ಮುನಿರತ್ನ ವಿರುದ್ಧ ಬೇರೆ ಬೇರೆ ಪ್ರಕರಣ ದಾಖಲಾಗುತ್ತಿದೆ. ರಾಜ್ಯ ಸರ್ಕಾರ ಕಾನೂನಿಗೆ ಪೂರಕವಾಗಿ ಕೆಲಸ ಮಾಡುವುದು ಅನಿವಾರ್ಯ ಎಂದರು.