Advertisement

“ಹನಿ, ಹನಿ ಮನೆ ಕಹಾನಿ

06:00 AM Dec 24, 2018 | |

ಮೊನ್ನೆ ಮೊನ್ನೆ ಮೆಟ್ರೋ ಕಂಬದಲ್ಲಿ ಕಾಣಿಸಿಕೊಳ್ತಲ್ಲ ಬಿರುಕು ಅದಕ್ಕೆ ಹನಿಕೂಂಬ್‌ ಅಂತಾರಂತೆ. ಇದು ಮೇಟ್ರೋ ಕಂಬಕ್ಕೆ ಮಾತ್ರ ಸೀಮಿತವಲ್ಲ. ನಾವು ಕಟ್ಟುವ ಮನೆಗಳನ್ನೂ ಕಾಡುತ್ತದೆ. ಪಾಯ, ಬೀಮ್‌, ಕಾಲಂಗಳನ್ನು ಹಾಕುವಾಗ ಈ ಹನಿಕೂಂಬ್‌ ಕಾಟ ತಪ್ಪಿದ್ದಲ್ಲ. ಅಂದಹಾಗೆ, ಹನಿಕೂಂಬ್‌ ಅಂದರೆ ಏನು? ಇದು ಬರಲು ಕಾರಣವೇನು? ಇಲ್ಲಿದೆ ಮಾಹಿತಿ. 

Advertisement

ಕಳೆದವಾರ ಬೆಂಗಳೂರಿನ ಟ್ರೀನಿಟಿ ಮೆಟ್ರೋ ನಿಲ್ದಾಣದಲ್ಲಿರುವ ಕಂಬವೊಂದು ಬಹಳ ಸದ್ದು ಮಾಡಿತು. ಕಂಬದ ಮೇಲಾºಗದಲ್ಲಿ ಬಿರುಕು ಕಾಣಿಸಿದೆಯಂತೆ. ಅದೇ ಕಾರಣದಿಂದ  ಈ ರಸ್ತೆಯಲ್ಲಿ ಮೆಟ್ರೋ ಓಡಾಡಲು ಸಾಧ್ಯವೇ ಇಲ್ಲ ಅನ್ನೋ ಊಹಾಪೋಹಗಳು ಓಡಾಡಿ ಭಯ ಮಿಶ್ರಿತ ಆತಂಕವನ್ನು ಉಂಟು ಮಾಡುವಷ್ಟರ ಮಟ್ಟಿಗೆ ಈ ಕಂಬ ಸುದ್ದಿಯಾಯಿತು. 

ಈ ಸಮಸ್ಯೆಗೆ ಕಾರಣ ಹುಡುಕುತ್ತಾ ಹೋದಾಗ ತಿಳಿದದ್ದು ಹನಿಕೂಂಬ್‌ದೇ ಈ ಕೆಲಸ ಅಂತ. 

ಹನಿಕೂಂಬ್‌ ಅನ್ನೋದು ತಾಂತ್ರಿಕಪದ. ಅಂದರೆ, ಕಟ್ಟಡ ನಿರ್ಮಾಣದ ವೇಳೆ ಸಿಮೆಂಟ್‌ ಹಾಕಿದ್ದರೂ, ನಂತರ ಪೊಟರೆ, ಪೊಟರೆಯಾಗೋ ಅಥವಾ ಜೇನುಗೂಡಿನಂಥ ಸಣ್ಣ ಸಣ್ಣ ರಂಧ್ರಗಳಂತೆ ಆಗಿಬಿಟ್ಟಿರುತ್ತದೆ. ಕಾಂಕ್ರಿಟ್‌ ಹಾಕಲು ಬಳಸಿದ್ದ ಸಿಮೆಂಟ್‌ ಮರಳೆಲ್ಲವೂ ಕರಗಿ, ಜಲ್ಲಿ ಕಾಲುಗಳು ಮಾತ್ರ ಉಳಿದುಕೊಂಡಿರುತ್ತವೆ.  ಒಟ್ಟಾರೆ ಇದು ನೋಡಲು ಜೇನುಗೂಡಿನಂತೆ ಕಾಣುವುದರಿಂದ ಹನಿಕೂಂಬ್‌ ಅಂತಾರೆ. ಮೊನ್ನೆ ಮೆಟ್ರೋ ಕಂಬದಲ್ಲೂ ಆಗಿದ್ದು ಇದೇ.  ಈ ಸಮಸ್ಯೆ ಮೆಟ್ರೋ ಕಂಬಕ್ಕೆ ಮಾತ್ರ ಸೀಮಿತ ಅಂದುಕೊಳ್ಳಬೇಡಿ. ನಾವು ಕಟ್ಟುವ ಮನೆಗಳಲ್ಲೂ ಹನಿಕೂಂಬ್‌ನ ಕಾಟ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಪಾಯ, ಏಳು, ಎಂಟು ಅಡಿ ಭೀಮ್‌ ಹಾಕುವಾಗ ಹನಿಕೂಂಬ್‌ ಸಮಸ್ಯೆ ಕಾಡುವುದುಂಟು. ಹಾಗಾದರೆ, ಕಾಂಕ್ರಿಟ್‌ ಪ್ರಮಾಣ ಕಡಿಮೆಯಾಗಿ ಜೇನುಗೂಡಿನಂತೆ ರಂಧ್ರರಂಧ್ರವಾಗಿ ಕಟ್ಟಡವನ್ನು ದುರ್ಬಲಗೊಳ್ಳುವುದನ್ನು ತಪ್ಪಿಸುವುದು ಹೇಗೆ?

ಗಾಳಿ ಗುಳ್ಳೆಗಳ ಬಗ್ಗೆ ಹುಷಾರಾಗಿರಿ
ಕಾಂಕ್ರಿಟ್‌ನಲ್ಲಿ ಹನಿಕೂಂಬ್‌ ಆಗಲು ಮುಖ್ಯ ಕಾರಣ ಸಿಮೆಂಟ್‌ ಅನ್ನು ಸರಿಯಾಗಿ ಪ್ಯಾಕ್‌ ಮಾಡದೇ ಇರುವುದು. ಹೇಳಿಕೇಳಿ ಕಾಂಕ್ರಿಟ್‌ಗೆ ಒಂದು ಮೌಲ್ಡ್‌ – ಅಚ್ಚು ಬೇಕಾಗುತ್ತದೆ. ಸಾಮಾನ್ಯವಾಗಿ ಮರದಿಂದ ಮಾಡಿದ ಅಚ್ಚುಗಳಲ್ಲಿ ಸಣ್ಣ ಸಣ್ಣ ಸಂದಿಗಳಿರುವಂತೆಯೇ, ಉಕ್ಕಿನ ಹಾಳೆಗಳಲ್ಲಿ ಮಾಡಿದ ಅಚ್ಚುಗಳಲ್ಲೂ ಅವು ಬೆಸೆಯುವಲ್ಲಿ ಒಂದಷ್ಟು ಸಣ್ಣ, ಸಣ್ಣ ಗ್ಯಾಪ್‌ಗ್ಳು ಇರುತ್ತವೆ. ನಾವು ಕಾಂಕ್ರಿಟ್‌ ಹಾಕಿದ ನಂತರ ವೈಬ್ರೇಟರ್‌ ಅಂದರೆ, ಅದರು ಯಂತ್ರಗಳನ್ನು ಬಳಸಿ ದಮ್ಮಸ್ಸು ಮಾಡಿದಾಗ, ಒಂದಷ್ಟು ಕಾಂಕ್ರಿಟ್‌ ಹಾಲು ಈ ಸಂದಿಗಳ ಮೂಲಕ ಹೊರಗೆ ಹರಿದು ಬರುತ್ತದೆ. ಹೀಗೆ ಹೊರಗೆ ಬಂದ ಸ್ಥಳದ ಆಸುಪಾಸಿನಲ್ಲಿ ಹನಿಕೂಂಬ್‌ ಆಗುವ ಸಾಧ್ಯತೆ ಹೆಚ್ಚಿರುತ್ತದೆ. 

Advertisement

ಗಾಳಿಯಿಂದ ಹನಿಕೂಂಬ್‌
ಕೆಲವೊಮ್ಮೆ ಕಾಂಕ್ರಿಟ್‌ ಹಾಕುವಾಗ ಒಂದೆರಡು ಕಡೆ ಗಾಳಿಯ ಬಂಧನಕ್ಕೆ ಒಳಗಾಗುತ್ತದೆ. ಹೀಗೆ ಎಲ್ಲಕಡೆಯಿಂದಲೂ ಒತ್ತರಿಸಲ್ಪಟ್ಟ ಗಾಳಿ, ಹೊರಗೆ ಹೋಗಲು ಆಗದಿದ್ದಾಗ – ಗಾಳಿ ಇರುವ ಸ್ಥಳದಲ್ಲಿ ಕಾಂಕ್ರಿಟ್‌ ಬಂದು ಕೂರಲೂ ಬಿಡುವುದಿಲ್ಲ. ಹಾಗಾಗಿ, ಕಾಂಕ್ರಿಟ್‌ ಕೂರಲು ಆಗದ ಸ್ಥಳಗಳಲ್ಲಿ ಸಣ್ಣ ಪುಟ್ಟ, ಕೆಲವೊಮ್ಮೆ ಕೆಲವಾರು ಇಂಚಿನಷ್ಟು ದೊಡ್ಡದಾದ ಗೂಡುಗಳು ಏರ್ಪಡಬಹುದು. ಇಂಥ ರಂಧ್ರಗಳಿರುವ ಜಾಗಗಳನ್ನು ಹನಿಕೂಂಬ್‌ ಎನ್ನಲಾಗುತ್ತದೆ. ಹನಿಕೂಂಬ್‌ ಎಲ್ಲಿ ಬೇಕಾದರೂ ಆಗಬಹುದಾದರೂ, ಅದು ಸಾಮಾನ್ಯವಾಗಿ ಮನೆ ನಿರ್ಮಾಣದ ಸಂದರ್ಭದಲ್ಲಿ ಬಳಸುವ ಸಿಮೆಂಟಿನಿಂದ ಗಾಳಿ ಮೇಲೆ ಬರಲು ಆಗುವುದಿಲ್ಲವೋ ಅಲ್ಲೇ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ನಾಲ್ಕು ಇಂಚು ದಪ್ಪದ ಕಾಂಕ್ರಿಟ್‌ನಲ್ಲಿ ಗಾಳಿ ಬಂಧನಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ ಇದ್ದರೂ ನಾಲ್ಕಾರು ಅಡಿ ಆಳದ ಕಾಂಕ್ರಿಟ್‌ ಬೀಮ್‌ ಹಾಗೂ ಕಾಲಂ ಫೌಂಡೇಷನ್‌ಗಳಲ್ಲಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಆದುದರಿಂದ, ನಾವು ಕಾಂಕ್ರೀಟಿನ ಆಳ ಹೆಚ್ಚಾದಷ್ಟೂ ಹೆಚ್ಚು ಹೆಚ್ಚು ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. 

ಸರಿಯಾಗಿ ವೈಬ್ರೇಟ್‌ ಮಾಡಿ
ಇತ್ತೀಚಿನ ದಿನಗಳಲ್ಲಿ ಕಾಂಕ್ರಿಟ್‌ ಹಾಕುವಾಗ ಅದುರು ಯಂತ್ರಗಳನ್ನು  ಬಳಸುವುದು ಸಾಮಾನ್ಯ. ಆದರೆ, ಇವು ಹೇಳಿ ಕೇಳಿ ಅದುರುವುದಕ್ಕೇ ಹೆಸರುವಾಸಿಯಾಗಿರುವ ಕಾರಣ, ಇವುಗಳ ನಟ್‌ ಬೋಲ್ಟ್‌ಗಳು ಅತಿ ಹೆಚ್ಚು ಸಡಿಲವಾಗಿ ಯಂತ್ರದ ಭಾಗಗಳು ಪದೇಪದೇ ರಿಪೇರಿಗೆ ಬರುತ್ತವೆ. ಎಲ್ಲೆಲ್ಲಿ ಒಂದೇ ಮಶೀನ್‌ ಬಳಸಿ ವೈಬ್ರೇಟ್‌ ಮಾಡಲು ತಯಾರಿ ನಡಸಲಾಗಿದೆಯೋ ಅಂಥ ಕಡೆಗಳಲ್ಲಿ ಒಮ್ಮೆಯಾದರೂ ಯಂತ್ರ ಕೈಕೊಟ್ಟು, ಅದು ರಿಪೇರಿ ಆಗುವುದರ ಒಳಗೆ ಒಂದಷ್ಟು ಕಾಂಕ್ರಿಟ್‌ ಸುರಿದು ಬಿಟ್ಟಿರುತ್ತಾರೆ. ಇದನ್ನು ಕೈಯಿಂದಲೇ ದಮ್ಮಸ್ಸು ಮಾಡದೆ ಸುರಿದಿದ್ದರೆ, ಅಂಥ ಕಾಂಕ್ರಿಟ್‌ ಹನಿಕೂಂಬ್‌ ಆಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ, ಒಂದು ಸಣ್ಣ ಪ್ರಮಾಣದ ಕಾಂಕ್ರಿಟ್‌ ಕಾರ್ಯ ಇದ್ದರೂ ಕಡೇ ಪಕ್ಷ ಎರಡು ಅದುರು ಯಂತ್ರಗಳನ್ನಾದರೂ ಇಟ್ಟುಕೊಂಡಿರಬೇಕು. ಒಂದು ಕೈಕೊಟ್ಟಾಗ ಮತ್ತೂಂದನ್ನು ಬಳಸಬಹುದು. ಇನ್ನು ದೊಡ್ಡ ಪ್ರಮಾಣದ ಕಾಂಕ್ರಿಟ್‌ ಕೆಲಸ ವಿದ್ದರೆ, ಎರಡು, ಮೂರು ಇಲ್ಲವೇ ಮತ್ತೂ ಹೆಚ್ಚಿನ ಸಂಖ್ಯೆಯಲ್ಲಿ ಯಂತ್ರಗಳನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕಾಗುತ್ತದೆ.  

ಜೆಲ್ಲಿಕಲ್ಲು ಗಾತ್ರ ಏರುಪೇರಾದರೂ…
ಸಿಮೆಂಟ್‌ ಕಾಂಕ್ರಿಟ್‌ನಲ್ಲಿ ಮರಳಿನೊಂದಿಗೆ ಕಲ್ಲಿನ ಚೂರುಗಳನ್ನು ಬಳಸಲಾಗುತ್ತದೆ. ಈ ಜಲ್ಲಿಕಲ್ಲುಗಳು ಮನೆಯ ಆಯಾ ಸ್ಥಳ ಸಂದರ್ಭಕ್ಕೆ ಅನುಸಾರವಾಗಿ ಸಾಕಷ್ಟು ಸಣ್ಣದಾಗಿ ಇರಬೇಕಾಗುತ್ತದೆ. ಆದರೆ ಜಲ್ಲಿಕಲ್ಲುಗಳು ತೀರಾ ಸಣ್ಣದಾಗಿದ್ದರೆ ಅವು ಮರಳಿನಂತೆಯೇ ಆಗಿಬಿಡುತ್ತವೆ. ಹಾಗಾಗಿ, ಕಾಂಕ್ರಿಟ್‌ ಮಿಶ್ರಣಗಳನ್ನೂ ಕೂಡ “ಡಿಸೈನ್‌’ ಮಾಡಲಾಗುತ್ತದೆ. ಒಂದು ಬೀಮ್‌ ಇಲ್ಲವೇ ಕಾಲಂ ನಲ್ಲಿನ ಸರಳುಗಳು ಎಷ್ಟು ಹತ್ತಿರಹತ್ತಿರ ಇವೆ, ಅವುಗಳ ಸಂಧಿಯಲ್ಲಿ ಜಲ್ಲಿಕಲ್ಲುಗಳು ತೂರಲು ಸಾಧ್ಯವೆ? ಎಂಬುದನ್ನೂ ಗಮನಿಸಿ, ಎಷ್ಟು ಮರಳು, ಯಾವ ಗಾತ್ರದ ಜಲ್ಲಿಕಲ್ಲು, ಸಿಮೆಂಟ್‌ ಹಾಗೂ ಮುಖ್ಯವಾಗಿ ನೀರಿನ ಅಂಶ ಎಷ್ಟಿರಬೇಕು? ಎಂಬುದನ್ನು ವಿನ್ಯಾಸ ಮಾಡಲಾಗುತ್ತದೆ. ರೈನ್‌ಫೋರ್ ಮೆಂಟ್‌ ರಾಡುಗಳು ದೂರ ಇದ್ದಷ್ಟೂ ದೊಡ್ಡಗಾತ್ರದ ಜಲ್ಲಿಕಲ್ಲುಗಳನ್ನು ಬಳಸಬಹುದು. ಆದರೆ ಕಬ್ಬಿಣದ ಸರಳುಗಳು ತೀರಾ ಹತ್ತಿರ ಹತ್ತಿರ ಇದ್ದರೆ ಅನಿವಾರ್ಯವಾಗಿ ಸಣ್ಣಗಾತ್ರದ ಜಲ್ಲಿಕಲ್ಲುಗಳನ್ನು ಬಳಸಬೇಕಾಗುತ್ತದೆ. ಜಲ್ಲಿಕಲ್ಲಿನ ಆಕಾರ ಕೂಡ ಅದರ ಸರಿಯುವಿಕೆ (“ಮೊಬಿಲಿಟಿ’) ಗೆ ಕಾರಣವಾಗುತ್ತದೆ. ಕಾಂಕ್ರಿಟ್‌ ಸುರಿದಾಗ ಅದರಲ್ಲಿನ ಜಲ್ಲಿಕಲ್ಲುಗಳು ಗೋಲಿಗುಂಡುಗಳಂತೆ ಸರಾಗವಾಗಿ ಸರಿದಾಡಿ ಎಲ್ಲೆಡೆ ತುಂಬಿಕೊಂಡರೆ ಹನಿಕೂಂಬ್‌ ಆಗುವುದಿಲ್ಲ. ಆದರೆ, ಇವು ಚೂಪುಚೂಪಾಗಿದ್ದು, ಅಲ್ಲಲ್ಲಿ ಸಿಕ್ಕಿಹಾಕಿಕೊಳ್ಳುವಂತಿದ್ದರೆ, ಜೇನುಗೂಡಿನಂತಾಗುವ ಸಾಧ್ಯತೆ ಹೆಚ್ಚಿರುತ್ತದೆ. 

ಹಾಗೆ ನೋಡಿದರೆ, ಜಲ್ಲಿಕಲ್ಲು ಚೂಪುಚೂಪಾಗಿದ್ದರೆ ಅದರ ಮೇಲ್ಮೆ„ ವಿಸ್ತೀರ್ಣ ಹೆಚ್ಚಿದ್ದು, ಅದೇ ಗಾತ್ರದ ಗುಂಡು ಆಕಾರದ ಜಲ್ಲಿಕಲ್ಲಿಗಿಂತ ಹೆಚ್ಚುವರಿಯಾಗಿ ಸಿಮೆಂಟ್‌ ಮರಳಿನ ಜೊತೆ ಬೆಸೆದುಕೊಳ್ಳಲು ಸಾಧ್ಯ. ಹಾಗಾಗಿ, ನಾವು ಗಟ್ಟಿಮುಟ್ಟಾದ ಕಾಂಕ್ರಿಟ್‌ ಪಡೆಯ ಬೇಕೆಂದರೆ ತೀರಾ ಗುಂಡುಗುಂಡಾಗಿರುವ, ಸುಲಭದಲ್ಲಿ ಜಾರುವಂತಿರುವ ಜಲ್ಲಿಕಲ್ಲುಗಳನ್ನೂ ಉಪಯೋಗಿಸಬಾರದು. ಅದರ ಬದಲು ಸಾಕಷ್ಟು ಅನುಪಾತದಲ್ಲಿ ಮರಳು ಹಾಗೂ ನೀರನ್ನು ಬಳಸಿ, ಕಾಂಕ್ರಿಟ್‌ ಸರಾಗವಾಗಿ ಹರಿದುಹೋಗುವ ಹಾಗೇ ಮಾಡಬೇಕು.

ನೀರಿನ ಬಗ್ಗೆ ಕಾಳಜಿ ಇರಲಿ
ಕಾಂಕ್ರಿಟ್‌ಗೆ ಹೆಚ್ಚು ನೀರು ಬೆರೆಸಿದರೂ ತೊಂದರೆ, ಕಡಿಮೆ ಆದರೂ ಹನಿಕೂಂಬ್‌ನ ಕಾಟ ಹೆಚ್ಚಿರುತ್ತದೆ. ಆದುದರಿಂದ, ಕಾಂಕ್ರಿಟ್‌ ಕೆಲಸಗಳಿಗೆ ನೀರನ್ನೂ ಲೆಕ್ಕಹಾಕಿ ನಿರ್ಧರಿಸಲಾಗುತ್ತದೆ. ಕಾಂಕ್ರಿಟ್‌ಗೆ ಹೆಚ್ಚು ನೀರು ಹಾಕಿದರೆ ಅದರ ಮೂಲ ವಸ್ತುಗಳಾದ ಮರಳು, ಸಿಮೆಂಟ್‌ ಹಾಗೂ ಜಲ್ಲಿಕಲ್ಲು ಸರಿಯಾಗಿ ಹೊಂದಾಣಿಕೆ ಆಗದೆ, ಬೇರ್ಪಡುವ ಸಾಧ್ಯತೆ ಹೆಚ್ಚಿರುತ್ತದೆ. ಕಡಿಮೆ ಆದರೆ ಸರಿಯಾಗಿ ಪ್ಯಾಕ್‌ ಅಗುವುದಿಲ್ಲ. ಹೇಳಿಕೇಳಿ ಕಾಂಕ್ರಿಟ್‌ ಕೆಲಸ ಜೇನು ಸವಿದ ಹಾಗೆ ಸರಾಗವಲ್ಲ. ಬಿಸಿಲಿನಲ್ಲಿ, ಮಳೆ ಗಾಳಿ, ಧೂಳಿನಲ್ಲಿ ಕಾಂಕ್ರಿಟ್‌ ಸುರಿಯುವಾಗ ಇವೆಲ್ಲ ನೆನಪಿಗೆ ಬರುವುದಿಲ್ಲ. ಕಾಂಕ್ರಿಟ್‌ ಹಾಕಲು ಜೇನುಗಳಂತೆಯೇ ಶ್ರಮಿಸುವ ಜನರ ಪರಿಶ್ರಮ ವ್ಯರ್ಥ ಆಗದಹಾಗೆ ಕೆಲವೊಂದು ಮುಂಜಾಗರೂಕತಾ ಕ್ರಮ ಕೈಗೊಂಡರೆ, ಗಟ್ಟಿಮುಟ್ಟಾದ ಮನೆ ನಮ್ಮದಾಗುತ್ತದೆ. 

ಮಾಹಿತಿಗೆ-98441 32826

– ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next