Advertisement

ಜೇನು ತಿನ್ನುವ ಜಾಣ ಕಳ್ಳ 

02:58 PM Sep 15, 2018 | |

ಅವನು ಅಂತಿಂಥ ಕಳ್ಳನಲ್ಲ. ಯಾರ ಕಣ್ಣಿಗೂ ಬೀಳದಂತೆ, ತನ್ನ ಕೆಲಸ ಮುಗಿಸಿಕೊಂಡು, ಪುಳಕ್ಕನೆ ಎಸ್ಕೇಪ್‌ ಆಗುವ ಚೋರ. ಆತ ಇರೋದು ದಕ್ಷಿಣ ಚೀನಾದಲ್ಲಿ. ಅಲ್ಲಿನ ಯುನ್ನಾನ್‌ ಪ್ರಾಂತ್ಯದಲ್ಲಿ ದಿನಪೂರ್ತಿ ದುಡಿದು ದಣಿದ ರೈತ, ಮನೆಗೆ ಹೋಗಿ ಮಲಗುವ ವೇಳೆಯೇ, ಈತ ಬಂದು ರಾತ್ರಿಯಿಡೀ ಕಳ್ಳತನ ಮಾಡ್ತಿದ್ದ. ಅವನು ಕದಿಯುವುದು ರೈತ ಕೂಡಿಟ್ಟ ಹಣವನ್ನೋ, ಅಡಗಿಸಿಟ್ಟ ಚಿನ್ನವನ್ನೋ ಅಲ್ಲ. ಅಲ್ಲಿನ ರೈತರ ಮೂಲಾಧಾರವೇ ಜೇನು ಕೃಷಿ. ಆ ರುಚಿ ರುಚಿಯಾದ ತುಪ್ಪವನ್ನು ಕದಿಯಲೆಂದೇ ಬರುತ್ತಿದ್ದ ಈ ಕಳ್ಳ, ಅಪಾರ ನಷ್ಟ ಮಾಡಿಟ್ಟು ಹೋಗ್ತಿದ್ದ.

Advertisement

ಈ ವಿಚಾರವಾಗಿ ರೈತರು ಪರಸ್ಪರ ಅನುಮಾನಿಸಿಕೊಂಡು, ಜಗಳವಾಡುತ್ತಿದ್ದರಂತೆ. ಕೆಲವರು ಪಕ್ಕದ ಮನೆಯವರ ಜತೆ ಫೈಟಿಂಗೂ ಮಾಡಿದ್ದರು. ಒಂದು ದಿನವಂತೂ ಊರಿನವರೆಲ್ಲ ನಿದ್ದೆಬಿಟ್ಟು, ಕಾದು ಕುಳಿತರು. ಹೇಗಾದರೂ ಮಾಡಿ ಅವನನ್ನು ಇವತ್ತು ಹಿಡಿಯಲೇಬೇಕು ಅಂತ. ಆದರೆ, ಆವತ್ತು ಜೇನು ಕಳವಾಯಿತೇ ವಿನಾ ಈ ಕಳ್ಳ ಸಿಕ್ಕಿಬೀಳಲಿಲ್ಲ. ಕೊನೆಗೆ ಈ ಪ್ರಕರಣ ಪೊಲೀಸ್‌ ಠಾಣೆಯ ಮೆಟ್ಟಿಲೇರಿತು. ಹತ್ತಾರು ಪೊಲೀಸರು ಬಂದು, ರಾತ್ರಿಯಿಡೀ ಜಮೀನು ಕಾದರು. ಆವತ್ತೂ ಜೇನು ಸ್ವಾಹವಾಗಿತ್ತು. ಕಳ್ಳ ಮಾತ್ರ ಕೈಗೆ ಸಿಗಲಿಲ್ಲ. 

ಇದೆಲ್ಲ ನೋಡಿ ನೋಡಿ ಸಾಕಾಗಿ, ಕೊನೆಗೆ ಸರಕಾರವೇ ಜಮೀನಿನ ಸುತ್ತ ಸಿಸಿ ಕೆಮರಾ ಹಾಕಿತು. ಅದರ ಮರುದಿನ ಎಲ್ಲರಿಗೂ ಅಚ್ಚರಿಯ ಆಘಾತ ಆಯ್ತು. ಯಾಕೆ ಗೊತ್ತಾ? ಹಾಗೆ ಜೇನು ಕದಿಯುತ್ತಿದ್ದವನು, ರೈತರು ಅನುಮಾನಿಸಿದಂತೆ ಯಾವುದೇ ಮನುಷ್ಯ ಆಗಿರಲಿಲ್ಲ. ಒಂದು ಕಪ್ಪು ಆಕೃತಿ! ಹಾಗಾದರೆ, ಭೂತನಾ? ಅಲ್ಲ. ಝೂಮ್‌ ಮಾಡಿ ನೋಡಿದಾಗಲೇ ಗೊತ್ತಾಗಿದ್ದು, ಅದೊಂದು ಕರಡಿ ಅಂತ! ಈ ಚೋರನ ಮೇಲೆ ರೈತರೆಲ್ಲ ಈಗ ಸಿಟ್ಟಾಗಿದ್ದಾರೆ. ಊರಿನ ಸುತ್ತ ಬೆಂಕಿ ಹಾಕಿ, ಮನೆಗೆ ಒಬ್ಬೊಬ್ಬರಂತೆ ಈಗ ಕಾವಲು ನಿಲ್ಲುತ್ತಿದ್ದಾರಂತೆ. ವಾರ ವಾಯ್ತು. ಈ ಚೋರ, ಮತ್ತೆ ಜೇನಿನ ಆಸೆಗಾಗಿ, ಜಮೀನಿನತ್ತ ಬರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next