ಕೋಟ: ಹುಲಿಜೇನು ದಾಳಿಯಿಂದ ಮೆಸ್ಕಾಂ ಇಬ್ಬರು ಗುತ್ತಿಗೆ ಸಿಬಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಧುವನದಲ್ಲಿ ಸೋಮವಾರ ಸಂಭವಿಸಿದೆ.
ಕೋಟ ಮೆಸ್ಕಾಂ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಂಪತ್ ಕುಮಾರ್ ಹಾಗೂ ಜೂನಿಯರ್ ಲೈನ್‌ಮನ್ ಯಲಪ್ಪ ಗಾಯಗೊಂಡ ಕಾರ್ಮಿಕರು. ಮಧುವನ ಬಳಿ ವಿದ್ಯುತ್ ತಂತಿಗೆ ತಾಗಿಕೊಂಡಿದ್ದ ಮರವನ್ನು ಕಡಿಯಲು ಮೆಸ್ಕಾಂನ ಪಿಕಪ್ ಗಾಡಿಯಲ್ಲಿ ಸಂಪತ್ ಮಾರ್ಗದಾಳುಗಳನ್ನು ಕರೆದುಕೊಂಡು ಹೋಗಿದ್ದು, ಕಾರ್ಮಿಕರು ಕಾರ್ಯ ನಿರ್ವಹಿಸುವಾಗ ಇವರು ಗಾಡಿಯ ಪಕ್ಕದಲ್ಲೇ ನಿಂತಿದ್ದರು.
ಆಗ ಕಡಿದ ಮರದ ಗೆಲ್ಲೊಂದರಲ್ಲಿ ಹುಲಿಜೇನು ಗೂಡುಕಟ್ಟಿದ್ದು ಅದು ಧರೆಗುರುಳುತ್ತಿದ್ದಂತೆ ಸಂಪತ್ ಅವರಿಗೆ ಮತ್ತು ಜೂನಿಯರ್ ಲೈನ್‌ಮನ್ ಯಲ್ಲಪ್ಪ ಅವರಿಗೆ ಕಚ್ಚಿದೆ.
ಗಂಭೀರ ಗಾಯಗೊಂಡ ಸಂಪತ್ ಅವರನ್ನು ಮೆಸ್ಕಾಂ ಸಿಬಂದಿಗಳ ನೆರವಿನಿಂದ ಕುಂದಾಪುರ ಸರಕಾರಿ ಅಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಯಲಪ್ಪ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದಾರೆ.
ಮೆಸ್ಕಾಂನವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ಸ್ಥಿತಿ ಬಗ್ಗೆ ವಿಚಾರಿಸಿದ್ದಾರೆ.