Advertisement

ರಾಜ್ಯದಲ್ಲಿ ಪ್ರಾಮಾಣಿಕ ರಾಜಕಾರಣ ಅಸಾಧ್ಯ; ಮುಂದಿನ ಚುನಾವಣೆಯೇ ಕೊನೆ ಸ್ಪರ್ಧೆ: ಯತ್ನಾಳ್

02:38 PM Dec 23, 2023 | Team Udayavani |

ವಿಜಯಪುರ: ರಾಜ್ಯ ರಾಜಕಾರಣದಲ್ಲಿ ಆರಾಮವಾಗಿರುವ ನಾನು ಕೇಂದ್ರಕ್ಕೆ ಹೋಗುವ ಆಸಕ್ತಿ, ಅವಶ್ಯಕತೆ ನನಗಿಲ್ಲ. ಇಲ್ಲಿ ವಂಶಪರಂಪರೆ ರಾಜಕೀಯ ಮುಗಿಯಬೇಕಿದೆ. ಹೀಗಾಗಿ ಮುಂದಿನ ವಿಧಾನಸಭೆ ಚುನಾವಣೆ ನನ್ನ ಕೊನೆ ಚುನಾವಣೆ ಆಗಲಿದೆ ಎಂದು ವಿಜಯಪುರದ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Advertisement

ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಾಮಾಣಿಕ ರಾಜಕಾರಣ ಅಸಾಧ್ಯವಾಗಿದೆ. ಅಪ್ಪಾಜಿ ಎನ್ನಬೇಕು, ಹಣ ಬಲ ಬೇಕು, ಮೇಲಿನವರ ಇಷ್ಟಾರ್ಥ ಸಿದ್ಧಿಗಳನ್ನು ಈಡೇರಿಸಬೇಕು. ಇಂತವೆಲ್ಲ ಮಾಡಲಾಗದಿದ್ದರೆ ರಾಜಕಾರಣ ಮಾಡಲಾಗಲ್ಲ. ಇದರೊಂದಿಗೆ 2028 ರ ವಿಧಾನಸಭೆ ಚುನಾವಣೆ ಬಳಿಕ ಪರೋಕ್ಷವಾಗಿ ಸಕ್ರಿಯ ರಾಜಕೀಯ ನಿವೃತ್ತಿ ಎಂದು ಘೋಷಿಸಿದರು.

ಬಾಗಲಕೋಟೆ ಕ್ಷೇತ್ರದಲ್ಲಿ ಹಾಲಿ ಸಂಸದ ಪಿ.ಸಿ.ಗದ್ದೀಗೌಡರ ಸಮರ್ಥರಿದ್ದು, ಬರುವ ಲೋಕಸಭೆ ಚುನಾವಣೆಯಲ್ಲಿ ನಾನು ಅಲ್ಲಿನ ಬಿಜೆಪಿ ಟಿಕೆಟ್ ಆಕಾಂಕ್ಷಿಯಲ್ಲ. ಬೀದರ ಕ್ಷೇತ್ರದಿಂದಲೂ ಸ್ಪರ್ಧಿಸಲು ಕೆಲವರು ಮನವಿ ಮಾಡಿದ್ದು, ಅಲ್ಲಿಯೂ ಸಮರ್ಥರಿದ್ದಾರೆ ಎಂದು ಇಂಥ ಸುದ್ದಿಗಳಿಗೆ ಸಮಜಾಯಿಸಿ ನೀಡಿದರು.

ಇದನ್ನೂ ಓದಿ:Kannada Cinema; ಜ.26ಕ್ಕೆ ತೆರೆಗೆ ಬರಲಿದೆ ‘ಬ್ಯಾಚುಲರ್ ಪಾರ್ಟಿ’

ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಯಲಬುರ್ಗಾದ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ. ಆಳಂದ ಶಾಸಕ ಬಿ.ಆರ್.ಪಾಟೀಲ ಕೂಡ ಸತ್ಯವನ್ನೇ ಹೇಳಿದ್ದಾರೆ. ಇವರೆಲ್ಲ ಮೌಲ್ಯಾಧಾರಿತ ರಾಜಕೀಯದ ಹಿನ್ನೆಲೆ ಇರುವವರು. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಭ್ರಷ್ಟರೇ ಇದ್ದಾರೆ ಎಂದಲ್ಲ, ಅಲ್ಲೂ ಒಳ್ಳೆಯವರಿದ್ದಾರೆ. ಎಲ್ಲ ಪಕ್ಷಗಳಲ್ಲಿ ಒಳ್ಳೆಯವರು, ಕೆಟ್ಟವರು ಎರಡೂ ವರ್ಗದ ಜನರಿದ್ದಾರೆ ಎಂದರು.

Advertisement

ಪ್ರಸ್ತುತ ಸಂದರ್ಭದಲ್ಲಿ ಯಾವುದೇ ಸಚಿವರು ಕಮಿಷನ್ ಇಲ್ಲದೆ ಒಂದೂ ಕೆಲಸ ಮಾಡುವುದಿಲ್ಲ. ಸರ್ಕಾರದ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಸಿದ್ಧರಾಮಯ್ಯರಿಂದ ನಿಯಂತ್ರಣ ಅಸಾಧ್ಯ ಎನ್ನುಷ್ಟರ ಮಟ್ಟಿಗೆ ಅವರ ಕೈ ಮೀರಿದೆ. ಕಾಂಗ್ರೆಸ್ ಪಕ್ಷದ ಜೋಡೆತ್ತುಗಳಲ್ಲಿ ಒಂದು ಎತ್ತು ನಿತ್ತವೂ ಏಳುತ್ತಲೇ ಹುಲ್ಲು ತಿನ್ನದೆ ನೋಟು ತಿನ್ನುತ್ತದೆ ಎಂದು ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿರುದ್ಧ ವ್ಯಂಗ್ಯವಾಡಿದರು.

ಬಿಬಿಎಂಪಿ ನೋಟು ಬೇಕು, ನೀರಾವರಿ ನೋಟು ಬೇಕು, ವರ್ಗಾವಣೆಯ ನೋಟು ಬೇಕು, ನಗರಾಭಿವೃದ್ಧಿ ನೋಟು ತಿನ್ನುವ ಒಂದು ಎತ್ತು ಕಾಂಗ್ರೆಸ್ ಸರ್ಕಾರದಲ್ಲಿದೆ ಎಂದು ವಾಗ್ದಾಳಿ ನಡೆಸಿದರು.

ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಹಿಂಪಡೆಯುವ ಮೂಲಕ ಸಿದ್ಧರಾಮಯ್ಯ ಅವರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಸ್ಲಿಂ ತುಷ್ಟೀಕರಣಕ್ಕೆ ಮುಂದಾಗಿದ್ದಾರೆ. ಇದರೊಂದಿಗೆ ಎರಡನೇ ಟಿಪ್ಪು ಸುಲ್ತಾನ ಆಗಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು

Advertisement

Udayavani is now on Telegram. Click here to join our channel and stay updated with the latest news.

Next