Advertisement

ರೈತರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ

11:31 AM Oct 11, 2021 | Shwetha M |

ಇಂಡಿ: ರೈತರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟು ಧರಣಿಯನ್ನು ಹಿಂಪಡೆಯಿರಿ ಎಂದು ಸಂಸದ ರಮೇಶ ಜಿಗಜಿಣಗಿ ಧರಣಿ ನಿರತ ರೈತರ ಮನವೊಲಿಸಿದರು.

Advertisement

ರವಿವಾರ ತಾಲ್ಲೂಕಿನ ಝಳಕಿ ಗ್ರಾಮದಲ್ಲಿ ಕಳೆದ 27 ದಿನಗಳಿಂದ ಭಾರತೀಯ ಕಿಸಾನ್‌ ಸಂಘದ ನೇತೃತ್ವದಲ್ಲಿ ವಿವಿಧ ರೈತಪರ ಸಂಘಟನೆಗಳಿಂದ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರನ್ನುದ್ದೇಶಿಸಿ ಅವರು ಮಾತನಾಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಎಲ್ಲ ಯೋಜನೆಗಳು ಸಂಪೂರ್ಣವಾಗಬೇಕಾದರೆ ಆಲಮಟ್ಟಿ ಆಣೆಕಟ್ಟು 524 ಮೀ.ವರೆಗೆ ಎತ್ತರವಾಗಬೇಕು. ಆಲಮಟ್ಟಿ ಆಣೆಕಟ್ಟು ಎತ್ತರವಾಗಬೇಕಾದರೆ ಆಣೆಕಟ್ಟು ರಾಷ್ಟ್ರೀಯ ಯೋಜನೆಯಾಗಬೇಕು. ಆ ನಿಟ್ಟಿನಲ್ಲಿ ಈಗಾಗಲೆ ನಾನು ಪ್ರಧಾನಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದೇನೆ. ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ನೀರಾವರಿ ಸಚಿವ ಗೋವಿಂದ ಕಾರಜೋಳ ಅವರೊಂದಿಗೂ ಚರ್ಚಿಸಿದ್ದೇನೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ನಮ್ಮ ಸರಕಾರಗಳೇ ಆಗಿದ್ದರಿಂದ ರೇವಣಸಿದ್ದೇಶ್ವರ ಏತ ನೀರಾವರಿ ಮತ್ತು ಜಿಲ್ಲೆಯ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

1964ರಲ್ಲಿ ಅಡಿಗಲ್ಲು ಹಾಕಿದ್ದರೂ ಇದುವರೆಗೆ 60 ವರ್ಷ ಗತಿಸಿದರೂ ಇಲ್ಲಿವರೆಗೆ ರಾಷ್ಟ್ರೀಯ ಮಯೋಜನೆಯಾಗಿ ಘೊಷಣೆ ಆಗದಿರುವುದು ಜಿಲ್ಲೆಯ ಜನರ ದುರ್ದೈವ. ನಾನು ಕೇಂದ್ರ ನೈರ್ಮಲ್ಯ ಮಂತ್ರಿಯಾಗಿದ್ದಾಗ ದೇಶದ ಗ್ರಾಮಿಣ ಭಾಗದ ಜನರ ಕುಡಿಯುವ ನೀರಿನ ಬವಣೆ ಹೋಗಲಾಡಿಸಲು 5 ಲಕ್ಷ ಕೋಟಿ ಅನುದಾನ ನೀಡುವ ಮೂಲಕ ಅಂತಹ ಮಹತ್ವಕಾಂಕ್ಷಿ ಯೋಜನೆ ಜಾರಿಗೆ ತಂದಿದ್ದೇನೆ ಎಂದರು.

ಇದನ್ನೂ ಓದಿ:ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 18,132 ಕೋವಿಡ್ ಪ್ರಕರಣ ಪತ್ತೆ, ಚೇತರಿಕೆ ಪ್ರಮಾಣ ಶೇ.98

Advertisement

ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗಾಗಿ ನಡೆಸುತ್ತಿರುವ ಧರಣಿ ಹಿಂಪಡೆಯಲು ನನ್ನ ತಲೆ ಮೇಲೆ ಭಾರ ಹಾಕಿದ್ದೀರಿ, ಈ ಕುರಿತು ನಾನು ನಿರಂತರವಾಗಿ ಪ್ರಯತ್ನ ಮಾಡಿ ಈ ಯೋಜನೆ ಪೂರ್ಣಗೊಳಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ರೇವಣಸಿದ್ದೇಶ್ವರ ಏತ ನೀರಾವರಿ ಅನುಷ್ಠಾನವಾದರೆ ಮಾತ್ರ ರೈತರು ಬದುಕಲು ಸಾದ್ಯ. ಇಲ್ಲವಾದರೆ ರೈತರು ಗುಳೆ ಹೋಗುವ ಪ್ರಸಂಗವಿದೆ. ಎಲ್ಲ ರೈತರು ನ್ಯಾಯಯುತವಾಗಿ ನಿಮ್ಮ ಹಕ್ಕು ಕೇಳುತ್ತಿದ್ದೀರಿ, ಅದಕ್ಕೆ ಸಂಪೂರ್ಣವಾಗಿ ನಮ್ಮ ಬೆಂಬಲವಿದೆ. ಪಕ್ಷದ ಹಿರಿಯರು ನೀರಾವರಿ ಯೋಜನೆಯನ್ನು ಹಂತ-ಹಂತವಾಗಿ ಮಾಡುವುದಾಗಿ ಹೇಳಿದ್ದಾರೆ. ಹಿರಿಯ ಸಂಸದರು ರೈತರ ಮೇಲೆ ಅಪಾರ ಕಾಳಜಿ ಹೊಂದಿದ್ದಾರೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳ ಸಂಯುಕ್ತಾಶ್ರಯದಲ್ಲಿ ಇಡಿ ಜಿಲ್ಲೆ ನೀರಾವರಿ ಆಗುವ ಭರವಸೆ ಇದೆ ಎಂದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ, ಜಿಪಂ ಮಾಜಿ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ, ಶಂಕರಗೌಡ ಪಾಟೀಲ, ಅಣ್ಣಪ್ಪ ಖೈನೂರ, ಅಶೋಕ ಕಾಪಸೆ ಮಾತನಾಡಿ, ಜಿಲ್ಲೆಯ ಸಂಸದರು ಮತ್ತು ನೀರಾವರಿ ಸಚಿವರ ಮೇಲೆ ಎಲ್ಲರೂ ಭಾರ ಹಾಕೋಣ. ಸಂಸದರು ಈ ಯೋಜನೆ ಮಾಡಿಸಿಕೊಡುತ್ತಾರೆ ಎಂಬ ವಿಶ್ವಾಸವಿಡೋಣ ಎಂದರು.

ರೈತ ಮುಖಂಡರಾದ ಮಲ್ಲನಗೌಡ ಪಾಟೀಲ, ಗುರನಾಥ ಬಗಲಿ ಮಾತನಾಡಿ, ಸಂಸದರು ಹಾಗೂ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರು ಅಭಯ ನೀಡಿದ್ದರಿಂದ ಧರಣಿ ಹಿಂಪಡೆಯುತ್ತೇವೆ. ಮತ್ತೆ ಯೋಜನೆ ಕಾರ್ಯಾರಂಭ ಆಗದೆ ಇದ್ದರೆ ಹೋರಾಟ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದರು.

ಸಂಸದ ರಮೇಶ ಜಿಗಜಿಣಗಿ ರೈತ ಮುಖಂಡರಿಗೆ ತಂಪು ಪಾನೀಯ ಕುಡಿಸುವ ಮೂಲಕ ಸತತ 27 ದಿನಗಳ ಕಾಲ ನಡೆಸಿದ ಧರಣಿ ಸತ್ಯಾಗ್ರಹ ಕೈ ಬಿಡಿಸಿದರು.

ಸೋಮು ಕುಂಬಾರ, ಗುರುನಾಥ ಬಗಲಿ, ಕಲ್ಲನಗೌಡ ಪಾಟೀಲ, ಹಣಮಂತ್ರಾಯಗೌಡ ಪಾಟೀಲ, ಭೀಮರಾಯಗೌಡ ಬಿರಾದಾರ, ಮಲ್ಲನಗೌಡ ಪಾಟೀಲ, ರಾಘವೇಂದ್ರ ಕಾಪಸೆ, ಶ್ರೀಮಂತ ಕಾಪಸೆ, ಶಿವಶರಣ ಭೈರಗೊಂಡ, ಅಣ್ಣಪ್ಪ ಖೈನೂರ, ಬಾಳು ಮುಳಜಿ, ಹಣಮಂತ್ರಾಯ ಗೌಡ ಪಾಟೀಲ, ಬಾಪುರಾಯ ಲೋಣಿ, ಸುರೇಶ ಗೊಣಸಗಿ, ಮಾರುತಿ ಟಕ್ಕಳಕಿ, ಅಶೋಕ ಇಳಿಗೇರ, ಶ್ರೀಶೈಲ ಕರಜಗಿ, ರಾಜು ವಾಲಿಕಾರ, ಲಕ್ಷ್ಮಣ ಖಡೆಖಡೆ, ರವಿ ಹೂಗಾರ, ರೇವಣಸಿದ್ದ ಜೇವೂರ, ಲಕ್ಷ್ಮಣ ದಳವಾಯಿ, ರಮೇಶ ವಾಲಿಕಾರ, ತುಕಾರಾಮ ಹರಳಯ್ಯ ಬಿ.ಎಂ. ಕೊಕರೆ, ಪ್ರಕಾಶ ಪಾಟೀಲ, ಹಿರಾಬಾಯಿ ಲೋಗಾವಿ, ಶಿವಮ್ಮ ನಾವಾಡಿ, ಸೋನಾಬಾಯಿ ವಾಲೀಕಾರ, ಜನಾಬಾಯಿ ಹರಿಜನ, ಮಾಯವ್ವ ಬನಸೋಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next