ಹುಬ್ಬಳ್ಳಿ: ಕೋವಿಡ್ ಸೋಂಕು ಹರಡುವುದನ್ನು ತಪ್ಪಿಸಲು ಜಿಲ್ಲಾಡಳಿತ ವಿನಾಯಿತಿಯುಕ್ತ ಲಾಕ್ ಡೌನ್ ಘೋಷಿಸಿದೆ. ಆದರೆ ಇದರಿಂದ ಫುಟ್‌ಪಾತ್, ದೇವಸ್ಥಾನಗಳು, ಹೊಟೇಲ್‌ಗಳ ಮುಂಭಾಗ, ಸಾರ್ವಜನಿಕ ಉದ್ಯಾನ, ಸೇತುವೆ ಕೆಳಗೆ ಅಲ್ಲಿ ಇಲ್ಲಿ ಆಶ್ರಯ ಪಡೆದಿರುವ ನಿರ್ಗತಿಕರು-ಭಿಕ್ಷುಕರು ಒಪ್ಪತ್ತಿನ ಊಟ, ನೀರಿಗಾಗಿ ಪರದಾಡುವಂತಾಗಿದೆ. ತುತ್ತು ಅನ್ನಕ್ಕಾಗಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊಟ್ಟೆ ತುಂಬಿಸಿಕೊಳ್ಳಲು ಅಕ್ಕಪಕ್ಕದ ಹೊಟೇಲ್ ನವರು ನೀಡುವ ಚೂರು ಪಾರು ಆಹಾರವೇ ಇವರಿಗೆ ನಿತ್ಯದಾಸರೆ. ಆದರೀಗ ಕೆಲ ಬೆರಳೆಣಿಕೆಯ ಹೊಟೇಲ್‌ಗಳು ಮಾತ್ರ ತೆರೆದಿದ್ದು, ಅವು ಕೂಡ ಪಾರ್ಸಲ್ ನೀಡುತ್ತಿವೆ. ಬೆಳಗ್ಗೆ ಒಂದಿಷ್ಟು ಜನರ ಓಡಾಟ ಇರುವುದರಿಂದ ಹಾಗೋ ಹೀಗೋ ಅಲೆದಾಡಿ ಬೆಳಗಿನ ಉಪಹಾರ ಪಡೆದು ಇಡೀ ದಿನ ಕಳೆಯುವಂತಾಗಿದೆ.
ವಾಣಿಜ್ಯ ಪ್ರದೇಶಗಳಲ್ಲೇ ಬದುಕು ಕಳೆಯುತ್ತಿರುವ ಇವರು ಜನವಸತಿ ಪ್ರದೇಶಗಳತ್ತ ಹೋಗುತ್ತಿಲ್ಲ. ಒಂದು ವೇಳೆ ಹೋದರೂ ಸೋಂಕಿನ ಭಯ ಹಾಗೂ ಇವರು ಹಲವು ಕಾಯಿಲೆಗಳಿಗೆ ತುತ್ತಾಗಿರುವುದರಿಂದ ಜನ ಕೂಡ ಹಿಂದೇಟು ಹಾಕುವಂತಾಗಿದೆ. ಹೀಗಾಗಿ ಅವರಿವರು ನೀಡುವ ಬಿಸ್ಕತ್, ಒಂದಿಷ್ಟು ತಿಂಡಿಯನ್ನು ಕಾಯ್ದಿಟ್ಟುಕೊಂಡು ದಿನವಿಡೀ ಸೇವಿಸುವಂತಾಗಿದೆ. ನಡೆದಾಡಲು ಶಕ್ತರಾಗಿದ್ದವರು ಅಲ್ಲಿಲ್ಲ ಓಡಾಡಿಕೊಂಡು ಒಪ್ಪತ್ತಿನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಆದರೆ ವಿವಿಧ ಕಾಯಿಲೆಗಳಿಂದ ಬಳಲುತ್ತಾ ಒಂದೇ ಕಡೆ ಕುಳಿತಿರುವವರ ಪಾಡಂತೂ ಹೇಳ ತೀರದು. ಬೆಳಗಿನ ಜಾವ ಓಡಾಡುವ ಜನರು ಅಥವಾ ಅಕ್ಕಪಕ್ಕದ ಹೊಟೇಲ್‌ನವರು ಏನಾದರೂ ನೀಡಿದರೆ ಮಾತ್ರ ಹಸಿವು ನೀಗುತ್ತದೆ. ಇಲ್ಲವಾದರೆ ದಾನಿಗಳ ಅನ್ನಕ್ಕಾಗಿ ಕಾಯುವಂತಾಗಿದೆ. ಅಲ್ಲಲ್ಲಿ ಬೇಡಿ ಹೊಟ್ಟೆ ತುಂಬಿಸಿಕೊಳ್ಳುವವರಿಗೂ ಪೊಲೀಸರ ಭಯ ಮೂಡಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಬೇಕಾಬಿಟ್ಟಿ ಓಡಾಡಿದವರಿಗೆ ಲಾಠಿ ರುಚಿ ತೋರಿಸಿದ್ದನ್ನು ಕಂಡ ಇವರು ಜನ ಸಂಚಾರ ಸ್ಥಗಿತಗೊಳ್ಳುತ್ತಿದ್ದಂತೆ ಯಾವುದಾದರೂ ಒಂದು ಮೂಲೆ ಸೇರಿಕೊಳ್ಳುತ್ತಿದ್ದಾರೆ.
ಜಿಲ್ಲಾಡಳಿತ ಕಾಳಜಿ ತೋರಬೇಕಿದೆ: ಮಾರ್ಚ್ ತಿಂಗಳಲ್ಲಿ ಆರಂಭವಾದ ಲಾಕ್‌ಡೌನ್ ಸಂದರ್ಭದಲ್ಲಿ ನಿರ್ಗತಿಕರು ಹಾಗೂ ಭಿಕ್ಷುಕರನ್ನು ಗುರುತಿಸಿ ಅವರಿಗೆ ವಸತಿ ಹಾಗೂ ಊಟದ ಸೌಲಭ್ಯ ನೀಡಲಾಗಿತ್ತು. ಅವಳಿ ನಗರದಲ್ಲಿ ಸುಮಾರು 50ಕ್ಕೂ ಹೆಚ್ಚು ನಿರ್ಗತಿಕರಿಗೆ ತೀವ್ರ ಲಾಕ್‌ಡೌನ್ ಅವಧಿ ಮುಗಿಯುವವರೆಗೂ ವ್ಯವಸ್ಥೆ ಮಾಡಲಾಗಿತ್ತು. ಕ್ರಮೇಣ ಜನರ ಓಡಾಟ, ಅಂಗಡಿ ಮುಗ್ಗಟ್ಟುಗಳು ಕಾರ್ಯಾರಂಭ ಮಾಡುತ್ತಿದ್ದಂತೆ ಪುನಃ ಯಥಾ ಸ್ಥಿತಿಯಂತೆ ತಮ ಸ್ಥಳಗಳಿಗೆ ಆಗಮಿಸಿದ್ದರು. ಆದರೆ ಇದೀಗ ಘೋಷಿಸಿರುವ ಲಾಕ್‌ಡೌನ್ ಹಾಗೂ ರವಿವಾರದ ಲಾಕ್‌ಡೌನ್ ಇವರಿಗೆ ಸಂಕಷ್ಟ ತಂದಿದೆ. ಹೀಗಾಗಿ ಹಸಿವು ತಣಿಸಿಕೊಳ್ಳುವುದು ಹೇಗೆ ಎನ್ನುವಂತಾಗಿದ್ದು, ಜಿಲ್ಲಾಡಳಿತ ಇವರ ನೆರವಿಗೆ ಧಾವಿಸಬೇಕಿದೆ.
ದಾನಿಗಳಿಗಿಲ್ಲ ಕೊರತೆ: ಲಾಕ್‌ಡೌನ್‌ನಿಂದ ಯಾರೂ ಹಸಿವಿನಿಂದ ಬಳಲಬಾರದೆನ್ನುವ ಕಾರಣಕ್ಕೆ ಕೆಲ ಸಂಘ-ಸಂಸ್ಥೆಗಳು ನಿರ್ಗತಿಕರಿಗೆ ಆಹಾರದ ವ್ಯವಸ್ಥೆ ಮಾಡಿದ್ದರು. ಅವರಿರುವ ಸ್ಥಳಗಳಿಗೆ ತೆರಳಿ ಅವರಿಗೆ ಅನ್ನ-ನೀರು ತೆಗೆ ಒಂದಿಷ್ಟು ಬಟ್ಟೆ ಕೂಡ ನೀಡಿದ್ದರು. ಹೀಗಾಗಿ ಜಿಲ್ಲಾಡಳಿತದ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡಿದ್ದವರು ದಾನಿಗಳ ನೆರವಿನಿಂದ ಹೊಟ್ಟೆ ತುಂಬಿಸಿಕೊಂಡಿದ್ದರು. ಈಗಲೂ ಜಿಲ್ಲಾಡಳಿತ ಮನವಿ ಮಾಡಿದರೆ ಸಂಘ-ಸಂಸ್ಥೆಗಳು ಮುಂದೆ ಬರಲಿವೆ. ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ ಯಾವುದಾದರೂ ಒಂದು ಸಂಸ್ಥೆಗೆ ಮನವಿ ಮಾಡಿದರೆ ನಿರ್ಗತಿಕರು ಮೂರು ಹೊತ್ತು ಅನ್ನ ಕಾಣಲಿದ್ದಾರೆ.
ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದೆ. ನಾಲ್ಕೈದು ತಿಂಗಳ ಹಿಂದೆ ಕಾಲ ಮೇಲೆ ಗಾಡಿ ಹಾಯ್ದಿದ್ದರಿಂದ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳಲಿಲ್ಲ. ಕಾಲಿನ ಗಾಯ ದೊಡ್ಡದಾಗಿದ್ದರಿಂದ ಹೊಟೇಲ್‌ನಲ್ಲಿ ಹೊರ ಹಾಕಿದರು. ಅಲ್ಲಲ್ಲಿ ಓಡಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ. ಆದರೆ ಇದೀಗ ಬಹಳಕಷ್ಟವಾಗಿದೆ. ನನ್ನಂತೆ ಸಾಕಷ್ಟು ಜನರು ಹಸಿವು ತಾಳಲಾರದೆ ಅಲ್ಲಲ್ಲಿ ಓಡಾಡುತ್ತಿದ್ದಾರೆ. –
ಶೇಖರ, ನಿರ್ಗತಿಕ ವ್ಯಕ್ತಿ.
-ಹೇಮರಡ್ಡಿ ಸೈದಾಪುರ