ದೇವದುರ್ಗ: ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಚಟುವಟಿಕೆ ಆರಂಭಕ್ಕೆ ಹಿನ್ನಡೆ ಆಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಕೆಲ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕ-ಶಿಕ್ಷಕಿಯರು ಮಕ್ಕಳ ಮನೆ-ಮನೆಗೆ ತೆರಳಿ ಹೋಂ ವರ್ಕ್ ಕೊಡುವ ಮೂಲಕ ಮಕ್ಕಳು ಅಭ್ಯಾಸದಲ್ಲಿ ತೊಡಗುವಂತೆ ಮಾಡುತ್ತಿದ್ದಾರೆ.
ಕೋವಿಡ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಲಾಕ್‌ಡೌನ್ ಜಾರಿ ಆದಾಗಿನಿಂದ ಶಾಲೆಗಳನ್ನು ಬಂದ್ ಮಾಡಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ಯಾವಾಗ ಆರಂಭವಾಗಲಿದೆ ಎಂದು ಸರ್ಕಾರ ಕೂಡ ಸ್ಪಷ್ಟವಾಗಿ ತಿಳಿಸಿಲ್ಲ. ಆದರೆ ಈಗಾಗಲೇ ಶಿಕ್ಷಕ-ಶಿಕ್ಷಕಿಯರಿಗೆ ಸರ್ಕಾರ ಶಾಲೆಗೆ ಆಗಮಿಸುವಂತೆ ಆದೇಶಿಸಿದೆ. ರಜೆ ಹೀಗೇ ಮುಂದುವರಿದರೆ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತದೆ ಎಂಬ ದೃಷ್ಟಿಯಿಂದ ಕೆಲ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಶಿಕ್ಷಕ-ಶಿಕ್ಷಕಿಯರು ವಿದ್ಯಾರ್ಥಿಗಳ ಮನೆಗೆ ತೆರಳಿ ವಿಷಯವಾರು ಹೋಂವರ್ಕ್ ನೀಡುತ್ತಿದ್ದಾರೆನ್ನಲಾಗಿದೆ. ಈ ಮೂಲಕ ಮಕ್ಕಳು ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗುವಂತೆ ಮಾಡುತ್ತಿದ್ದಾರೆ. ಇದರಿಂದಾಗಿ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದ ಪಾಲಕರಲ್ಲಿನ ಆತಂಕವನ್ನೂ ಕೂಡ ನಿವಾರಿಸಿದೆ.
ಶೇ.97ರಷ್ಟು ಪಠ್ಯಪುಸ್ತಕ ಪೂರೈಕೆ: ಇನ್ನು ತಾಲೂಕಿಗೆ 1ರಿಂದ 10ನೇ ತರಗತಿವರೆಗಿನ ಪಠ್ಯಪುಸ್ತಕ ಪುಸ್ತಕ ಶೇ.97ರಷ್ಟು ಪೂರೈಕೆ ಆಗಿವೆ. ಇನ್ನು ತಾಲೂಕಿನಲ್ಲಿ 70 ಖಾಸಗಿ ಶಾಲೆಗಳಿದ್ದು, ಅವುಗಳಿಗೆ ಸಹ ಪಠ್ಯಪುಸ್ತಕ ಪೂರೈಕೆ ಆಗಿವೆ. 8ನೇ ತರಗತಿ ಹಿಂದಿ ಪಠ್ಯಪುಸ್ತಕ ಮಾತ್ರ ಪೂರೈಕೆ ಆಗಿಲ್ಲ. ಉಳಿದಂತೆ ಪಠ್ಯಪುಸ್ತಕದ ಜೊತೆಗೆ ಹೋಂ ವರ್ಕ್ ಅಭ್ಯಾಸ ಪುಸ್ತಕ, ಡೈರಿ ಕೂಡ ಸೇರಿವೆ. ಎರಡ್ಮೂರು ದಿನದಲ್ಲಿ 25 ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಗೆ ಸರಬರಾಜು ಮಾಡಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ನಂತರ ಆಯಾ ಶಾಲೆಗಳಲ್ಲಿ ಪಾಲಕರನ್ನು ಕರೆಸಿ ಮಕ್ಕಳಿಗೆ ಪುಸ್ತಕ ಪೂರೈಸಲಾಗುವುದು. ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಸಮವಸ್ತ್ರ ಇನ್ನೂ ಬರಬೇಕಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಆನ್‌ಲೈನ್ ತರಬೇತಿ: ಇನ್ನು ಶಿಕ್ಷಣ ಇಲಾಖೆ ಸರ್ಕಾರಿ ಶಾಲೆ ಶಿಕ್ಷಕರಿಗೆ ಆನ್‌ಲೈನ್ ಮೂಲಕ ತರಬೇತಿ ನೀಡುತ್ತಿದೆ. ನಲಿಕಲಿ, ಇಂಗ್ಲಿಷ್, ಹಿಂದಿ, ಕನ್ನಡ, ಗಣಿತ ಸೇರಿ ವಿಷಯವಾರು ತಜ್ಞ ಶಿಕ್ಷಕರಿಂದ ಶಿಕ್ಷಕರಿಗೆ ಆನ್‌ಲೈನ್ ಮೂಲಕ ತರಬೇತಿ ನೀಡಲಾಗುತ್ತಿದೆ.
10ನೇ ತರಗತಿವರೆಗೆ ಪಠ್ಯಪುಸಕ್ತಗಳು ಸರಬುರಾಜು ಆಗಿವೆ. ಕೆಲ ಗ್ರಾಮೀಣ ಭಾಗದಲ್ಲಿ ಶಿಕ್ಷಕರು ಮಕ್ಕಳಿಗೆ ಹೋಂವರ್ಕ್ ಆರಂಭಿಸಿದ್ದಾರೆ. ವಾರದಲ್ಲಿ ಮೊದಲನೇ ಸಮವಸ್ತ್ರ ಪೂರೈಕೆ ಆಗಲಿವೆ. –
ಆರ್.ಇಂದಿರಾ, ಕ್ಷೇತ್ರ ಶಿಕ್ಷಣಾಕಾರಿ
–ನಾಗರಾಜ ತೇಲ್ಕರ್