ಬೆಂಗಳೂರು : ಕೇಂದ್ರದ ಆಯುಷ್ಮಾನ್ ಭಾರತ್ ಹಾಗೂ ರಾಜ್ಯದ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಆಯುರ್ವೇದ ಮತ್ತು ಹೋಮಿಯೋಪಥಿಗೆ ಹೆಚ್ಚಿನ ಆದ್ಯತೆ ನೀಡಿಲ್ಲ. ಈ ಎರಡೂ ಚಿಕಿತ್ಸಾ ವಿಧಾನವನ್ನು ಯೋಜನೆಯೊಳಗೆ ಸೇರಿಸಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಆರೋಗ್ಯ ಸಚಿವ ಶಿವಾನಂದ ಎಸ್.ಪಾಟೀಲ್ ಹೇಳಿದ್ದಾರೆ.
ಕರ್ನಾಟಕ ಹೋಮಿಯೋಪಥಿ ಮಂಡಳಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೋಮಿಯೋ ಭವನದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಒಟ್ಟೊಟ್ಟಿಗೆ ಸೇವೆ ಸಲ್ಲಿಸಲಿದೆ. ಆದರೆ, ಈ ಎರಡು ಯೋಜನೆಯಲ್ಲೂ ಆಯುರ್ವೇದ ಮತ್ತು ಹೋಮಿಯೋಪಥಿಗೆ ಕಡಿಮೆ ಆದ್ಯತೆ ನೀಡಲಾಗಿದೆ. ಆಯುರ್ವೇದ ಅಥವಾ ಹೋಮಿಯೋಪಥಿ ಮೂಲಕ ಚಿಕಿತ್ಸೆ ಪಡೆಯಲು ಈ ಯೋಜನೆಯಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಆಯುರ್ವೇದ, ಹೋಮಿಯೋಪಥಿ, ಯುನಾನಿ, ನ್ಯಾಚುರೋಪಥಿ ಮೊದಲಾದ ಭಾರತೀಯ ವೈದ್ಯಪದ್ಧತಿಯ ವೈದ್ಯರಲ್ಲಿ ಹೊಂದಾಣಿಕೆ ಅಗತ್ಯ. ಹೊಂದಾಣಿಕೆ ಇಲ್ಲದೇ ಅಲೋಪಥಿ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಆಯುಷ್ ಅಡಿಯಲ್ಲಿ ಬರುವ ವೈದ್ಯ ಹಾಗೂ ಅಧಿಕಾರಿಗಳು ಹೊಂದಾಣಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಚೀನಾದಲ್ಲಿ ಇಂದಿಗೂ ಸಾಂಪ್ರದಾಯಿಕ ವೈದ್ಯಪದ್ಧತಿಯನ್ನೇ ಅತಿಯಾಗಿ ಅವಲಂಬಿಸಿಕೊಂಡಿದ್ದಾರೆ. ಆಯುಷ್‌ಗೆ ಹೆಚ್ಚಿನ ಆದ್ಯತೆ ನೀಡಿದ್ದರೆ ಭಾರತದಲ್ಲೂ ಅಲೋಪಥಿ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆಯಾಗಿ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತದೆ. ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್ ಭಾರತ್‌ನಲ್ಲಿ ಬುದ್ಧಿಮಾಂದ್ಯತೆ ಚಿಕಿತ್ಸೆ ಬಗ್ಗೆ ಸೇರಿಸಿಲ್ಲ. ಆ ಬಗ್ಗೆ ಕೇಂದ್ರಕ್ಕೂ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.
ಕರ್ನಾಟಕ ಹೋಮಿಯೋಪಥಿ ಮಂಡಳಿ ಅಧ್ಯಕ್ಷ ಡಾ.ಬಿ.ಟಿ.ರುದ್ರೇಶ್ ಮಾತನಾಡಿ, ರಾಜ್ಯದಲ್ಲಿ 13 ಸಾವಿರ ಹೋಮಿಯೋಪಥಿ ವೈದ್ಯರಿದ್ದಾರೆ. ಪ್ರತಿ ತಾಲೂಕಿನಲ್ಲೂ ಹೋಮಿಯೋಪಥಿ ಚಿಕಿತ್ಸಾ ಘಟಕಾ ತೆರೆಯಬೇಕು. ಹಾಗೆಯೇ ಕೇರಳ ಮಾದರಿಯಲ್ಲಿ ಹೋಮಿಯೋಪಥಿ ಚಿಕಿತ್ಸಾ ವಿಧಾನಕ್ಕೆ ರಾಜ್ಯದಲ್ಲೂ ಪ್ರೋತ್ಸಾಹ ನೀಡಬೇಕು. ಸರ್ಕಾರ ನೀಡುತ್ತಿದ್ದ ವಿವಿಧ ಭತ್ಯೆಯ ಕೂಡಿಟ್ಟು ಹೋಮಿಯೋ ಭವನಕ್ಕೆ 86 ಲಕ್ಷ ರೂ. ಸಂಗ್ರಹಿಸಿದ್ದೇವೆ. ಸರ್ಕಾರದಿಂದಲೂ ಇದಕ್ಕೆ ಅಗತ್ಯ ಸಹಾಯ, ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಮಂಡಳಿಯ ರಿಜಿಸ್ಟ್ರಾರ್ ಡಾ.ಅಶ್ವತ್ಥ್ ನಾರಾಯಣ, ಆಯುಷ್ ಇಲಾಖೆ ನಿರ್ದೇಶಕಿ ಮೀನಾಕ್ಷಿ ನೇಗಿ, ಬಿಬಿಎಂಪಿ ಸದಸ್ಯೆ ಆರ್.ಪ್ರತಿಮಾ ಮೊದಲಾದವರು ಉಪಸ್ಥಿತರಿದ್ದರು.
ಹೋಮಿಯೋಪಥಿ ಔಷಧ ಸಂತಾನೋತ್ಪತ್ತಿಗೂ ಪರಿಣಾಮಕಾರಿ ಎಂಬುದು ಸಂಶೋಧನೆಯಿಂದ ಸಾಬೀತಾದರೆ ದೇಶದಲ್ಲಿ ಅಲೋಪಥಿ ಬದಲಿಗೆ ಹೋಮಿಯೋಪಥಿ ಔಷಧ ಬಳಸುವರ ಸಂಖ್ಯೆ ಒಮ್ಮೆಗೆ ಹೆಚ್ಚಾಗಲಿದೆ. ಪಾರಂಪರಿಕ ವಿದ್ಯೆ ಇಂದು ನಶಿಸುತ್ತಿದೆ. ದೇಶದ ಆರೋಗ್ಯ ಸೇವೆಗೆ ಆಯುಷ್ ವಿಶೇಷ ಕೊಡುಗೆ ನೀಡಿದೆ.
– ಶಿವಾನಂದ ಎಸ್.ಪಾಟೀಲ್, ಆರೋಗ್ಯ ಸಚಿವ