Advertisement

ಹೋಮ್‌ಮೇಡ್‌ ಲಿಪ್‌ಬಾಮ್‌…

06:45 PM Sep 24, 2019 | mahesh |

ತುಟಿ ಕಪ್ಪಾಗುವುದು, ಒಣಗುವುದು, ಒಡೆಯುವುದು, ಹಲವರು ಎದುರಿಸುವ ಸಮಸ್ಯೆ. ತುಟಿಗಳ ಆರೋಗ್ಯ ಹಾಗೂ ಸೌಂದರ್ಯ ವರ್ಧನೆಗೆ ಏನೇನೆಲ್ಲಾ ಕಸರತ್ತು ಮಾಡುತ್ತಾರವರು. ಅದರ ಬದಲು, ಮನೆಯಲ್ಲಿಯೇ ಲಿಪ್‌ಬಾಮ್‌ಗಳನ್ನು ತಯಾರಿಸಬಹುದು. ಹಾಗೆ ತಯಾರಾದ ನೈಸರ್ಗಿಕ ವಸ್ತುಗಳ ಲಿಪ್‌ಬಾಮ್‌ನಿಂದ ತುಟಿಗೆ ಯಾವುದೇ ರೀತಿಯಲ್ಲಿ ಹಾನಿಯಾಗುವುದಿಲ್ಲ.

Advertisement

1. ಬಾದಾಮಿ ತೈಲದ ಲಿಪ್‌ಬಾಮ್‌
ಬೇಕಾಗುವ ಸಾಮಗ್ರಿ: 4 ಚಮಚ ಬಾದಾಮಿ ತೈಲ, 2 ಚಮಚ ಜೇನುತುಪ್ಪ , 2 ಚಮಚ ಜೇನುಮೇಣ, 3 ಚಮಚ ಶೀ ಬಟರ್‌, 2 ಚಮಚ ಕೋಕಾಬಟರ್‌.

ಮಾಡುವ ವಿಧಾನ: ಮೊದಲು ಜೇನುಮೇಣ, ಶೀ ಬಟರ್‌ ಹಾಗೂ ಕೋಕಾ ಬಟರ್‌ಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಅಗಲ ಬಾಯಿಯ ಪಾತ್ರೆಯಲ್ಲಿ ನೀರು ಬಿಸಿ ಮಾಡಿ, ನಂತರ ಇನ್ನೊಂದು ಚಿಕ್ಕ ಪಾತ್ರೆಯನ್ನು ಅದರಲ್ಲಿಟ್ಟು , ಈ ಮಿಶ್ರಣವನ್ನು ಸೇರಿಸಬೇಕು. ಮಿಶ್ರಣ ಕರಗುತ್ತಾ ಬಂದಾಗ ಬಾದಾಮಿ ತೈಲ ಬೆರೆಸಬೇಕು. ಆಮೇಲೆ ಜೇನುತುಪ್ಪ ಬೆರೆಸಿ ಚೆನ್ನಾಗಿ ಕಲಕಿ, ಆರಿಸಬೇಕು. ಗಾಜಿನ ಕರಡಿಗೆ/ ಬಾಟಲ್‌ನಲ್ಲಿ ಸಂಗ್ರಹಿಸಿಡಬಹುದು. ಫ್ರಿಜ್‌ನಲ್ಲಿಟ್ಟರೆ ತುಂಬಾ ದಿನದವರೆಗೆ ಕೆಡುವುದಿಲ್ಲ.

2. ಕೊಬ್ಬರಿ ಎಣ್ಣೆ ಜೇನುಮೇಣ
ಬೇಕಾಗುವ ಸಾಮಗ್ರಿ: 5 ಚಮಚ ಜೇನುಮೇಣ, 5 ಚಮಚ ಕೊಬ್ಬರಿ ಎಣ್ಣೆ, 1 ಚಮಚ ಜೇನು, 2 ವಿಟಮಿನ್‌ ಇ ಕ್ಯಾಪ್ಸೂಲ್‌.

ಮಾಡುವ ವಿಧಾನ: ಜೇನುಮೇಣವನ್ನು ತುರಿದು, ಅದನ್ನು ಬಿಸಿ ಮಾಡುವಾಗ ಕೊಬ್ಬರಿ ಎಣ್ಣೆ ಸೇರಿಸಬೇಕು. ಕೊನೆಯಲ್ಲಿ ವಿಟಮಿನ್‌ ಇ ತೈಲ (ಕ್ಯಾಪ್ಸೂಲಿನಲ್ಲಿರುವ) ಬೆರೆಸಿ, ಜೇನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಆರಿದ ಬಳಿಕ ಸಣ್ಣ ಟಿನ್‌ ಅಥವಾ ಕರಡಿಗೆಯಲ್ಲಿ ಸಂಗ್ರಹಿಸಿ.

Advertisement

3. ಚಾಕೊಲೇಟ್‌ ಲಿಪ್‌ಬಾಮ್‌
ಬೇಕಾಗುವ ವಸ್ತು: ಬಿಳಿ ಚಾಕೊಲೇಟ್‌ ಚಿಪ್ಸ್‌- 5, ಶೀ ಬಟರ್‌- 5 ಚಮಚ, ಜೇನು- 1 ಚಮಚ, ಬಾದಾಮಿ ತೈಲ- 1 ಚಮಚ, ಆಲಿವ್‌ ತೈಲ- 1 ಚಮಚ, ತುರಿದ ಜೇನುಮೇಣ- 1 ಚಮಚ, 2 ಚಿಟಿಕೆ ಓಟ್‌ಮಿಲ್‌ ಪುಡಿ.

ಮಾಡುವ ವಿಧಾನ: ಮೊದಲು ಎಲ್ಲ ತೈಲಗಳನ್ನೂ ಬೆರೆಸಿ, ಚೆನ್ನಾಗಿ ಕಲಕಬೇಕು. ಒಂದು ಪಾತ್ರೆಯಲ್ಲಿ ಜೇನುಮೇಣ ಬಿಸಿ ಮಾಡಿ, ಇನ್ನೊಂದರಲ್ಲಿ ಚಾಕೊಲೇಟ್‌ ಹುಡಿಯನ್ನು , ಓಟ್‌ಮೀಲ್‌ ಪುಡಿಯನ್ನು ಬಿಸಿ ಮಾಡಬೇಕು. ತದನಂತರ ಬಿಸಿ ಮಾಡಿದ ಜೇನುಮೇಣ ಹಾಗೂ ಚಾಕೋಲೇಟ್‌ ಹುಡಿಯನ್ನು ಬೆರೆಸಬೇಕು. ಬಳಿಕ ವಿವಿಧ ತೈಲ ಹಾಗೂ ಜೇನು ಬೆರೆಸಿ ಕಲಕಬೇಕು. ಗಾಳಿಯಾಡದ ಕರಡಿಗೆಯಲ್ಲಿ ಹಾಕಿ, ಫ್ರಿಜ್‌ನಲ್ಲಿಟ್ಟು ಬಳಸಬೇಕು.

4. ಬೀಟ್‌ರೂಪ್‌ ಲಿಪ್‌ಬಾಮ್‌
ಬೇಕಾಗುವ ವಸ್ತು: ಮಧ್ಯಮ ಗಾತ್ರದ ಬೀಟ್‌ರೂಟ್‌ 1, ಕೊಬ್ಬರಿ ಎಣ್ಣೆ 10 ಚಮಚ, ಆಲಿವ್‌ ತೈಲ 10 ಚಮಚ.

ಮಾಡುವ ವಿಧಾನ: ಬೀಟ್‌ರೂಟ್‌ ಸಿಪ್ಪೆ ತೆಗೆದು, ಸಣ್ಣಸಣ್ಣ ತುಂಡುಗಳಾಗಿ ಹೆಚ್ಚಿ, ನೀರು ಸೇರಿಸದೆ ಮಿಕ್ಸಿಯಲ್ಲಿ ಪೇಸ್ಟ್‌ ತಯಾರಿಸಿ. ಅದನ್ನು ಸೋಸಿ, ಬೀಟ್‌ರೂಟ್‌ನ ದಪ್ಪ ರಸವನ್ನು ಒಂದು ಸಣ್ಣ ಕರಡಿಗೆಯಲ್ಲಿ ಸಂಗ್ರಹಿಸಿ, ಸ್ವಲ್ಪ ಕೊಬ್ಬರಿ ಎಣ್ಣೆ ಬೆರೆಸಬೇಕು. ನಂತರ ಆಲಿವ್‌ ತೈಲ ಬೆರೆಸಿ ಚೆನ್ನಾಗಿ ಕಲಕಿ, ಅದನ್ನು ಫ್ರಿಜ್‌ನಲ್ಲಿಡಬೇಕು.

5. ಗುಲಾಬಿ ದಳಗಳ ಲಿಪ್‌ಬಾಮ್‌
ಬೇಕಾಗುವ ಸಾಮಗ್ರಿ:1/4 ಕಪ್‌ ಜೇನುಮೇಣ, 10 ಚಮಚ ಕೊಬ್ಬರಿ ಎಣ್ಣೆ , 1 ಚಮಚ ಆಲಿವ್‌ ತೈಲ, 1/4 ಕಪ್‌ ಒಣಗಿದ ಗುಲಾಬಿ ದಳಗಳು, 1/4 ಚಮಚ ಜೇನು.

ಮಾಡುವ ವಿಧಾನ: ಮೊದಲು ಹುರಿದ ಜೇನುಮೇಣ, ಕೊಬ್ಬರಿ ಎಣ್ಣೆ ಹಾಗೂ ಆಲಿವ್‌ ತೈಲವನ್ನು ಬೆರೆಸಿ ಬಿಸಿ ಮಾಡಬೇಕು. ಬಿಸಿಯಾಗುತ್ತ ಬಂದಾಗ ಗುಲಾಬಿ ದಳಗಳನ್ನು ಬೆರೆಸಿ, ಚೆನ್ನಾಗಿ ಕಲಕಿ ಮತ್ತೆ ಸ್ವಲ್ಪ ಹೊತ್ತು ಬಿಸಿ ಮಾಡಬೇಕು. ಕೊನೆಯಲ್ಲಿ ಜೇನುತುಪ್ಪ ಬೆರೆಸಿ ಚೆನ್ನಾಗಿ ಕಲಕಬೇಕು.

6. ಜೇನು ಹಾಗೂ ನಿಂಬೆಯ ಲಿಪ್‌ಬಾಮ್‌
ಬೇಕಾಗುವ ಸಾಮಗ್ರಿ: 5 ಚಮಚ ವ್ಯಾಸಲಿನ್‌, 5 ಚಮಚ ಲಿಂಬೆರಸ ಹಾಗೂ 5 ಚಮಚ ಜೇನು.

ಮಾಡುವ ವಿಧಾನ: ವ್ಯಾಸಲಿನ್‌ ಅನ್ನು ಬಿಸಿ ಮಾಡಿ, ಅದಕ್ಕೆ ಲಿಂಬೆರಸ ಹಾಗೂ ಜೇನು ಬೆರೆಸಿ ಆರಲು ಬಿಡಬೇಕು. ನಂತರ ಸಣ್ಣ ಕರಡಿಗೆಯಲ್ಲಿ ಹಾಕಿ 10 ನಿಮಿಷ ಫ್ರಿಜ್‌ನಲ್ಲಿಡಬೇಕು. ಆಮೇಲೆ 4 ಗಂಟೆ ಫ್ರೀಜರ್‌ನಲ್ಲಿಡಬೇಕು. ಹೀಗೆ ತಯಾರಾದ ಲಿಪ್‌ಬಾಮ್‌ ಎಲ್ಲ ಕಾಲಗಳಲ್ಲೂ ಬಳಸಲು ಯೋಗ್ಯ.

-ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next