Advertisement

ಮಳೆಗಾಲದ ತುರ್ತುಸ್ಥಿತಿಗೆ ಗೃಹರಕ್ಷಕ ದಳ ಸನ್ನದ್ಧ

06:00 AM Jun 12, 2018 | |

ಉಡುಪಿ : ಮಳೆಗಾಲದಲ್ಲಿ ಸಂಭವಿಸಬಹುದಾದ ಯಾವುದೇ ರೀತಿಯ ಅನಾಹುತಗಳಿಂದ ಸಾರ್ವಜನಿಕರನ್ನು ಪಾರು ಮಾಡಿ ರಕ್ಷಿಸಲು ಗೃಹರಕ್ಷಕ ದಳ ಇದೀಗ ಸರ್ವ ಸನ್ನದ್ಧಗೊಂಡಿದೆ.

Advertisement

ಪ್ರವಾಸಿಗರ ರಕ್ಷಣೆಗೆ “ಪ್ರವಾಸಿ ಮಿತ್ರ’
ಜೂನ್‌ನಿಂದ ಆಗಸ್ಟ್‌ ವರೆಗೆ ಪ್ರವಾಸಿಗರು ಸಮುದ್ರದ ನೀರಿಗೆ ಇಳಿದು ಅಪಾಯ ತಂದೊಡ್ಡಿಕೊಳ್ಳುವುದು ಜಾಸ್ತಿ. ಇದನ್ನು ತಪ್ಪಿಸಲು ಪ್ರಮುಖ ಬೀಚ್‌ಗಳಾದ ಪಡುಬಿದ್ರಿ, ಕಾಪು, ಮಲ್ಪೆ, ಮರವಂತೆ, ಬೈಂದೂರು – ಒತ್ತಿನೆಣೆಯ ಸೋಮೇಶ್ವರ ಬೀಚ್‌ ಮತ್ತು ಮಲ್ಪೆಯ ಸೀ ವಾಕ್‌ ಪ್ರದೇಶಗಳಲ್ಲಿ ಪ್ರವಾಸಿಗರು ನೀರಿಗಿಳಿಯದಂತೆ ಜಾಗೃತಿ ಮೂಡಿಸಲು ಮತ್ತು ಆಕಸ್ಮಿಕವಾಗಿ ಪ್ರವಾಸಿ ಗರು ತೊಂದರೆಗೀಡಾದರೆ ಅವರನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಗೃಹರಕ್ಷಕರು ಹೊತ್ತಿದ್ದಾರೆ. 

ಹೆಚ್ಚುವರಿ ಪ್ರವಾಸಿ ಮಿತ್ರ
ಈಗಾಗಲೇ ಜಿಲ್ಲೆಯಲ್ಲಿ 10 ಮಂದಿ ಗೃಹರಕ್ಷಕರು ಪ್ರವಾಸಿ ಮಿತ್ರರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಬಾರಿ ಜಿಲ್ಲಾಡಳಿತದ ಕೋರಿಕೆ ಮೇರೆಗೆ  ಗೃಹರಕ್ಷಕ ದಳದ ಮಹಾ ಸಮಾದೇಷ್ಟರು ಹೆಚ್ಚುವರಿ 10 ಮಂದಿ ಪ್ರವಾಸಿ ಮಿತ್ರರನ್ನು ನಿಯೋಜಿಸಿದ್ದಾರೆ. ಇವರು ಮಳೆಗಾಲದ ಅಂತ್ಯದ ವರೆಗೆ ಕಾರ್ಯನಿರ್ವಹಿಸಲಿದ್ದಾರೆ. ಸಮುದ್ರ ಪ್ರದೇಶದಲ್ಲಿ ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡಲು ಮೆಗಾ ಫೋನ್‌ ಬಳಸಲಾಗುತ್ತದೆ. ಇದು ಸುಮಾರು 20 ಮೀ. ದೂರದ ವರೆಗೆ ಕೇಳಿಸಲಿದ್ದು, ಇದರ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. 

ಜಿಲ್ಲೆಯ ಎಲ್ಲ ಪೊಲೀಸ್‌ ಠಾಣೆಗಳಲ್ಲಿ ಒಟ್ಟು 106 ಗೃಹರಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಬಹುತೇಕರಿಗೆ ಈಜು ಗೊತ್ತಿರುವ ನೆಲೆಯಲ್ಲಿ ಅವರೂ ಕೂಡ ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತ ತಡೆಯಲು ಸಿದ್ಧರಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 8 ಗೃಹರಕ್ಷಕ ಘಟಕಗಳವೆ. ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಮಣಿಪಾಲ, ಕಾಪು, ಪಡುಬಿದ್ರಿ, ಕಾರ್ಕಳ ಘಟಕಗಳಲ್ಲಿ ಒಟ್ಟು 500 ಮಂದಿ ಸಾರ್ವಜನಿಕ ಸೇವೆಯಲ್ಲಿದ್ದಾರೆ. ಪೊಲೀಸ್‌ ಇಲಾಖೆಯಲ್ಲದೆ, ಇನ್ನುಳಿದ ಇಲಾಖೆಗಳಲ್ಲಿಯೂ ಗೃಹರಕ್ಷಕರು ಕಾರ್ಯಾ ಚರಿಸುತ್ತಿದ್ದಾರೆ. 

ಪರಿಕರಗಳು 
ತುರ್ತು ಪರಿಸ್ಥಿತಿ ಎದುರಾದಾಗ ಬಳಸ ಬಹುದಾದ  20 ಲೈಫ್ ಜಾಕೆಟ್‌, 20 ಲೈಫ್ ಬಾಯ್‌, ಲೈಫ್ಲೈನ್‌ ರೋಪ್‌ಗ್ಳು (ನೀರಿಗೆ ಬಿದ್ದವರನ್ನು ರಕ್ಷಿಸಲು 60 ಅಡಿ ಉದ್ದದ 1.5 ಇಂಚು ದಪ್ಪವಿರುವ 15 ರೋಪ್‌ಗ್ಳು, ನೆರೆ ಎದುರಾದಾಗ ಜನರನ್ನು ಅಪಾಯದಿಂದ ಪಾರು ಮಾಡಲು 200 ಮೀ. ಉದ್ದ 3 ಇಂಚಿನ ರೋಪ್‌), 8 ಆಸ್ಕಾ ಲೈಟ್‌ಗಳು, 8 ಎಕ್ಸೆಂಟೇಶನ್‌ ಲ್ಯಾಡರ್‌ (ಏಣಿ) ಗಳಿವೆ. ಈ ಎಲ್ಲ ಪರಿಕರಗಳು 8 ಘಟಕಗಳಲ್ಲಿಯೂ ಇವೆ.

Advertisement

ಇನ್‌ಫಾರ್ಮರ್‌
ಕರಾವಳಿ ಪೊಲೀಸ್‌ ಪಡೆಯಲ್ಲಿ 132 ಮಂದಿ ಗೃಹರಕ್ಷಕರು ಇನ್‌ಫಾರ್ಮರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಮುದ್ರದ ದಡದಲ್ಲಿ ಸದಾ ಇರುವ ಇವರು ಹೊರಗಿನಿಂದ ಬರುವ ಬೋಟ್‌ಗಳ ಬಗ್ಗೆ, ಅಪರಿಚಿತರಿಂದ ಅಪಾಯ ಎದುರಾಗುವ ಲಕ್ಷಣ ತೋರಿ ಬಂದಾಗ ಇಲಾಖೆಗೆ ಮಾಹಿತಿ ನೀಡಿ ಅಪಾಯ ತಪ್ಪಿಸುವ ಕಾರ್ಯ ಮಾಡುತ್ತಾರೆ.

ತುರ್ತು ಸ್ಥಿತಿಗೆ ಸದಾ ಸಿದ್ಧ
ಹಿಂದೆ ಜಿಲ್ಲೆಯಲ್ಲಿ ಗೃಹರಕ್ಷರ ಸಂಖ್ಯೆ ಕಡಿಮೆಯಿತ್ತು. ಇದೀಗ ಜಿಲ್ಲೆಯಲ್ಲಿ ಒಟ್ಟು 500 ಮಂದಿ ನಿಯೋಜಿಸಲ್ಪಟ್ಟಿದ್ದಾರೆ. ಮಳೆಗಾಲದಲ್ಲಿ ಎದುರಾಗಬಹುದಾದ ಯಾವುದೇ ತರಹದ ಸಮಸ್ಯೆಗೆ ಸ್ಪಂದಿಸಲು ಬೇಡಿಕೆ ಬಂದಾಗ ರಕ್ಷಣಾ ಕಾರ್ಯಕ್ಕೆ ಗೃಹರಕ್ಷಕರು ಸದಾ ಸಿದ್ಧರಿದ್ದಾರೆ.

– ಡಾ| ಕೆ. ಪ್ರಶಾಂತ್‌ ಕುಮಾರ್‌ ಶೆಟ್ಟಿ
ಜಿಲ್ಲಾ ಸಮಾದೇಷ್ಟರು, ಜಿಲ್ಲಾ ಗೃಹರಕ್ಷಕ ದಳ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next