Advertisement

ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ

04:11 PM May 01, 2024 | Team Udayavani |

ಮಂಗಳೂರು: ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷ ಅಗ್ನಿ ಆಕಸ್ಮಿಕ ಪ್ರಮಾಣ ಸ್ವಲ್ಪ ಇಳಿಮುಖವಾಗಿದೆ. ಅಲ್ಲಲ್ಲಿ ಗುಡ್ಡಗಳಿಗೆ, ಕುರುಚಲು ಪೊದೆಗಳಿಗೆ ಸಹಿತ ವಿವಿಧ ಸ್ಥಳಗಳಿಗೆ ಬೆಂಕಿ ಬೀಳುವ ಪ್ರಕರಣಗಳು ವರದಿಯಾಗುತ್ತಿದ್ದರೂ ಈ ಪ್ರಮಾಣ ಕಳೆದ ವರ್ಷದಷ್ಟಿಲ್ಲ.

Advertisement

2023ರಲ್ಲಿ ಈ ಅವಧಿಯಲ್ಲಿ ದ.ಕ. ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿತ್ತು. ಆದರೆ ಈ ಬಾರಿ 666 ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂದ ಕರೆಗಳಿಗೆ ಅಗ್ನಿ ಶಾಮಕದಳ ಸ್ಪಂದಿಸಿದೆ. ಪುತ್ತೂರಿನಲ್ಲಿ 137 ಮತ್ತು ಬಂಟ್ವಾಳದಲ್ಲಿ 112 ಪ್ರಕರಣಗಳು ವರದಿಯಾಗಿದ್ದು, ಕಳೆದ ವರ್ಷ ಸುಳ್ಯ ಹೊರತು ಪಡಿಸಿ ಇತರ ಠಾಣೆಗಳಲ್ಲಿ 100- 200ರಷ್ಟು ಪ್ರಕರಣಗಳು ದಾಖಲಾಗಿತ್ತು.

ಪ್ರಸ್ತುತ ದಿನಕ್ಕೆ ಜಿಲ್ಲೆಯಲ್ಲಿ ಸರಾಸರಿ 10-12 ಕರೆಗಳು ಬರುತ್ತಿದ್ದು, ಕೆಲವು ಸಣ್ಣ ಅಗ್ನಿ ಅವಘಡಗಳಲ್ಲಿ ಸ್ಥಳೀಯರೇ ಬೆಂಕಿ ನಂದಿಸುತ್ತಾರೆ. “ಗುಡ್ಡದಲ್ಲಿ ಮುಳಿ ಹುಲ್ಲಿಗೆ ಬೆಂಕಿ ಬಿದ್ದಿದೆ’ ಎನ್ನುವ ಕರೆಗಳೇ ಅಧಿಕ. ಕಳೆದ ವರ್ಷ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕ ಪ್ರದೇಶದಲ್ಲಿಯೇ ನಾಲ್ಕೈದು ಬಾರಿ ಅಗ್ನಿ ಅವಘಡ ಸಂಭವಿಸಿತ್ತು. ಈ ಬಾರಿ ಒಮ್ಮೆ ಮಾತ್ರ ಬೆಂಕಿ ಆಕಸ್ಮಿಕ ಉಂಟಾಗಿದೆ.

ಕೆಲವು ಕಡೆಗಳಲ್ಲಿ ಸಾರ್ವಜನಿಕರೇ ಕಳೆ ಗಿಡ ನಾಶಮಾಡುವ ಉದ್ದೇಶಕ್ಕೆ ಬೆಂಕಿ ಹಚ್ಚುತ್ತಾರೆ. ಹೆಚ್ಚು ವ್ಯಾಪಿಸಿದಾಗ ಆರಿಸಲು ಸಾಧ್ಯವಾಗದೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ ಪ್ರಕರಣಗಳೂ ಇವೆ. ಗಾಳಿಗೆ ವಿದ್ಯುತ್‌ ತಂತಿಗಳು ಒಂದಕ್ಕೊಂದು ತಾಗಿ ಕಿಡಿ ಉಂಟಾಗಿ ಬೆಂಕಿ ಬೀಳುತ್ತವೆ ಎನ್ನುತ್ತಾರೆ ಅಧಿಕಾರಿಗಳು.

ಮಳೆಯಾದರೆ ಸಮಸ್ಯೆ ದೂರ
ಬೇಸಗೆ ಮಳೆ ಆರಂಭವಾದರೆ ಬೆಂಕಿ ಅವಘಡ ಪ್ರಕರಣಗಳಿಗೆ ಮುಕ್ತಿ ದೊರೆಯಲಿದೆ. ಒಂದೆರಡು ಮಳೆ ಯಾದರೆ ಒಣಗಿರುವ ಹುಲ್ಲು, ಪೊದೆಗಳು ಮತ್ತೆ ಚಿಗುರಿ ಬೆಂಕಿ ಅವಘಡಗಳು ಕಡಿಮೆಯಾಗುತ್ತವೆ. ಕಾಡಿಗೆ ಬೆಂಕಿ ಬೀಳುವ ಪ್ರಕರಣಗಳೂ ಇದರಿಂದ ಕಡಿಮೆಯಾಗುತ್ತದೆ ಎನ್ನುತ್ತಾರೆ ಠಾಣಾ ಸಿಬಂದಿ.

Advertisement

ಅಗ್ನಿಶಮನ ವಾಹನಗಳ ಸಂಖ್ಯೆ ಕಡಿಮೆ
ಕೇಂದ್ರ ಸರಕಾರದ ಗುಜರಿ ನೀತಿಯ ಅನ್ವಯ 15 ವರ್ಷಗಳ ಹಳೆಯ ಡೀಸೆಲ್‌ ವಾಹನಗಳನ್ನು ವಿವೇವಾರಿ ಮಾಡ ಬೇಕಾಗಿದ್ದು, ಇದರಿಂದಾಗಿ ವಾಹನಗಳ ಅಗ್ನಿಶಮನ ವಾಹನಗಳ ಸಂಖ್ಯೆ ಕಡಿಮೆಯಾಗಿದೆ. ಮಂಗಳೂರು ನಗರ ಹೊರತುಪಡಿಸಿ ಇತರ ಠಾಣೆಗಳಲ್ಲಿ ಒಂದೊಂದೇ ವಾಹನಗಳು ಇವೆ. ಪಾಂಡೇಶ್ವರದಲ್ಲಿ ಸದ್ಯ 2 ವಾಹನ ಇದೆ. ತುರ್ತು ಸಂದರ್ಭ ಬಂದಾಗ ಪಕ್ಕದ ಠಾಣೆಯಿಂದ ವಾಹನ ಪಡೆಯಲಾಗುತ್ತಿದೆ. ಹೊಸ ವಾಹನಗಳ ಖರೀದಿ ಪ್ರಕ್ರಿಯೆ ರಾಜ್ಯಮಟ್ಟದಲ್ಲಿ ನಡೆಯುತ್ತಿದ್ದು, ಶೀಘ್ರ ವಾಹನಗಳು ಬರುವ ನಿರೀಕ್ಷೆಯಿದೆ. ವಿಮಾನ ನಿಲ್ದಾಣ, ಎನ್‌ಎಂಪಿಎ, ಎಂಆರ್‌ಪಿಎಲ್‌, ಎಂಸಿಎಫ್‌, ಕೆಐಒಸಿಎಲ್‌ ಮೊದಲಾದ
ಸಂಸ್ಥೆಗಳಲ್ಲಿರುವ ಅತ್ಯಾಧುನಿಕ ವಾಹನ ಗಳನ್ನೂ ತುರ್ತು ಸಂದರ್ಭದಲ್ಲಿ ಪಡೆಯ ಲಾಗುತ್ತದೆ ಎಂದು ಅಧಿಕಾರಿಗಳು
ತಿಳಿಸಿದ್ದಾರೆ.

ಕಳೆದ ವರ್ಷ ಬೆಂಕಿ ದುಪ್ಪಟ್ಟು
ಕಳೆದ ವರ್ಷ ಇದೇ ಅವಧಿಯಲ್ಲಿ 1,180 ಪ್ರಕರಣಗಳು ದಾಖಲಾಗಿತ್ತು. ಪಾಂಡೇಶ್ವರ 161, ಕದ್ರಿ 232, ಮೂಡುಬಿದಿರೆ 161, ಬೆಳ್ತಂಗಡಿ 131, ಪುತ್ತೂರು 206, ಸುಳ್ಯ 82 ಪ್ರಕರಣಗಳು ವರದಿಯಾಗಿತ್ತು. 2022ರಲ್ಲಿ ಇಡೀ ವರ್ಷದಲ್ಲಿ 773 ಕರೆಗಳು, 2021ರಲ್ಲಿ 507 ಮತ್ತು 2020ರಲ್ಲಿ 823 ಕರೆಗಳು ದಾಖಲಾಗಿತ್ತು.

ಸ್ವಲ್ಪ ಕಡಿಮೆ
ಬಿಸಿಲ ಬೇಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಇಲ್ಲಿಯವರೆಗೆ ಅಗ್ನಿ ಅವಘಡ ಪ್ರಕರಣಗಳು ಸ್ವಲ್ಪ ಕಡಿಮೆ ಇದೆ. ಪ್ರತೀ ದಿನ 10-12 ಪ್ರಕರಣಗಳು ಕರೆಗಳು ಬರುತ್ತಿವೆ. ಕಳೆದ ವರ್ಷ 30-40 ಕರೆಗಳು ಬರುತಿತ್ತು. ಗುಡ್ಡಗಳಲ್ಲಿ ಮುಳಿಹುಲ್ಲಿಗೆ ಬೆಂಕಿ ಬೀಳುವ ಪ್ರಕರಣಗಳು ಸ್ವಲ್ಪ ಹೆಚ್ಚಿವೆ.
ಭರತ್‌ ಕುಮಾರ್‌ ದ.ಕ. ಜಿಲ್ಲಾ
ಅಗ್ನಿಶಾಮಕ ಅಧಿಕಾರಿ, ಪಾಂಡೇಶ್ವರ

Advertisement

Udayavani is now on Telegram. Click here to join our channel and stay updated with the latest news.

Next