Advertisement

ಲಕ್ಷ ಕಾರ್ಮಿಕರು ತವರಿಗೆ ; 115 ರೈಲುಗಳ ಮೂಲಕ ಸಂಚಾರ ,ಹಲವೆಡೆ ಸಂಭ್ರಮ

08:29 AM May 08, 2020 | Sriram |

ಹೊಸದಿಲ್ಲಿ: ಕೋವಿಡ್‌ 19 ಕಾಟದಿಂದಾಗಿ ದೇಶದ ವಿವಿಧೆಡೆ ಸಿಲುಕಿದ್ದ ಲಕ್ಷಾಂತರ ವಲಸೆ ಕಾರ್ಮಿಕರು ಈಗ ತಮ್ಮೂರುಗಳಿಗೆ ತೆರಳುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ. ಮೇ 1ರಿಂದ 5ರವರೆಗೆ 115 ಶ್ರಮಿಕ ವಿಶೇಷ ರೈಲುಗಳು ಸುಮಾರು ಒಂದು ಲಕ್ಷ ವಲಸಿಗರನ್ನು ಮನೆ ತಲುಪಿಸಿದೆ ಎಂದು ರೈಲ್ವೇ ಇಲಾಖೆ ಬುಧವಾರ ಮಾಹಿತಿ ನೀಡಿದೆ. ಹಲವು ದಿನಗಳ ಕಾತರದ ಬಳಿಕ ತಮ್ಮೂರುಗಳಿಗೆ ತಲುಪುತ್ತಿದ್ದಂತೆ ಕಾರ್ಮಿಕರು ಸಂಭ್ರಮದಿಂದ ಕುಣಿದಾಡಿದ್ದಾರೆ.

Advertisement

ಬುಧವಾರ ಒಂದೇ ದಿನ 42 ವಿಶೇಷ ರೈಲುಗಳು ಸಂಚರಿಸಿವೆ. ಮಂಗಳವಾರ ರಾತ್ರಿಯವರೆಗೆ 88 ರೈಲುಗಳು ದೇಶದ ಮೂಲೆ ಮೂಲೆಗಳಿಗೆ ಕಾರ್ಮಿಕರನ್ನು ಹೊತ್ತೂಯ್ದಿದೆ. ಪ್ರತಿಯೊಂದು ರೈಲಲ್ಲೂ 24 ಬೋಗಿಗಳಿದ್ದು, ಒಟ್ಟಾರೆ 72 ಆಸನಗಳ ಸಾಮರ್ಥ್ಯ ಹೊಂದಿವೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ, ಮಧ್ಯದ ಆಸನ ಖಾಲಿ ಬಿಟ್ಟು ಕೇವಲ 54 ಮಂದಿಗಷ್ಟೇ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ 5 ದಿನಗಳಲ್ಲಿ ವಿವಿಧ ಭಾಗಗಳಿಗೆ ಕಾರ್ಮಿಕರನ್ನು ಹೊತ್ತೂಯ್ಯಬೇಕಾಗಿದ್ದ 10 ರೈಲುಗಳನ್ನು ಕರ್ನಾಟಕ ಸರಕಾರವು ರದ್ದು ಮಾಡಿದೆ. ಆದರೂ, ಬೆಂಗಳೂರಿನಿಂದ ಮೂರು ರೈಲುಗಳು ಬಿಹಾರಕ್ಕೆ ತೆರಳಲಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ವೆಚ್ಚದ ಮಾಹಿತಿಯಿಲ್ಲ: ವಿಶೇಷ ಸೇವೆಗಾಗಿ ರೈಲ್ವೆಯು ಒಟ್ಟು ಎಷ್ಟು ಮೊತ್ತವನ್ನು ವ್ಯಯಿಸಿದೆ ಎಂಬ ಮಾಹಿತಿಯನ್ನು ಇಲಾಖೆ ಬಿಟ್ಟುಕೊಟ್ಟಿಲ್ಲ. ಶೇ.85ರಷ್ಟು ವೆಚ್ಚವನ್ನು ರೈಲ್ವೇ ಇಲಾಖೆ ಮತ್ತು ಶೇ.15ರಷ್ಟು ವೆಚ್ಚವನ್ನು ಆಯಾ ರಾಜ್ಯ ಸರಕಾರಗಳು ಭರಿಸಲಿವೆ ಎಂದು ಕೇಂದ್ರ ಸರಕಾರ ಹೇಳಿತ್ತು. ರೈಲ್ವೇ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, ರೈಲ್ವೆಯು ಪ್ರತಿ ಸೇವೆಗೆ 80 ಲಕ್ಷ ರೂ. ವೆಚ್ಚ ಮಾಡಿದೆ.

ಎಲ್ಲೆಲ್ಲಿಗೆ ಎಷ್ಟೆಷ್ಟು?
ಈಗಾಗಲೇ ವಲಸಿಗರನ್ನು ಹೊತ್ತ 13 ರೈಲುಗಳು ಬಿಹಾರ ತಲುಪಿವೆ. 11 ರೈಲುಗಳು ಬಿಹಾರದತ್ತ ಪ್ರಯಾಣ ಬೆಳೆ ಸಿದ್ದು, ಇನ್ನೂ 6 ರೈಲುಗಳು ಆ ರಾಜ್ಯಕ್ಕೆ ತೆರಳಲಿವೆ. ಉತ್ತರ ಪ್ರದೇಶಕ್ಕೆ 10 ರೈಲುಗಳು ತಲುಪಿದ್ದು, ಇನ್ನೂ 17 ರೈಲುಗಳು ಸಂಚರಿಸಲಿವೆ. ಪಶ್ಚಿಮ ಬಂಗಾಲ ಸರಕಾರವು ಕೇವಲ ಎರಡು ರೈಲುಗಳಿಗಷ್ಟೇ ಅನುಮತಿ ನೀಡಿದ್ದು, ರಾಜಸ್ಥಾನ ಮತ್ತು ಕೇರಳದಿಂದ ವಲಸಿಗರು ಅಲ್ಲಿಗೆ ತಲುಪಲಿದ್ದಾರೆ. ಜಾರ್ಖಂಡ್‌ ಗೆ 4 ರೈಲುಗಳ ಮೂಲಕ ಕಾರ್ಮಿಕರು ತಲುಪಿದ್ದು, ಇನ್ನೂ 7 ರೈಲುಗಳು ಬರಲು ಬಾಕಿಯಿವೆ.

ಸಾರಿಗೆ ಶೀಘ್ರವೇ ಶುರು: ಗಡ್ಕರಿ
ಸಾರ್ವಜನಿಕ ಸಾರಿಗೆಯನ್ನು ಶೀಘ್ರವೇ ಪುನಾರಂಭಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಭರವಸೆ ನೀಡಿದ್ದಾರೆ. ಬಸ್‌ ಹಾಗೂ ಕಾರ್‌ ಆಪರೇಟರ್ ಸಂಘಟನೆಗಳ ಜೊತೆ ಬುಧವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದ ಅವರು, ಅಗತ್ಯ ಮಾರ್ಗಸೂಚಿಗಳೊಂದಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ತ್ವರಿತವಾಗಿ ಪ್ರಾರಂಭಿಸಲಾಗುವುದು. ಬಸ್‌ ಹಾಗೂ ಕಾರು ಸಂಚರಿಸುವ ವೇಳೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು, ಸಾಮಾಜಿಕ ಅಂತರ, ಕೈಗಳ ಸ್ವತ್ಛತೆ, ಸ್ಯಾನಿಟೈಸರ್‌ ಬಳಕೆ, ಮಾಸ್ಕ್ ಧರಿಸುವುದು ಮತ್ತಿತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಗಂಟೆಗಟ್ಟಲೆ ಕ್ಯೂನಿಂತ ವಲಸಿಗರು
ಪುಣೆಯ ಆಸ್ಪತ್ರೆಯೊಂದರ ಮುಂದೆ ಬುಧವಾರ ಸುಮಾರು 300ಕ್ಕೂ ಅಧಿಕ ವಲಸೆ ಕಾರ್ಮಿಕರು ಸರತಿಯಲ್ಲಿ ಗಂಟೆಗಟ್ಟಲೆ ನಿಂತಿರುವ ದೃಶ್ಯ ವೈರಲ್‌ ಆಗಿದೆ. ತಮ್ಮೂರುಗಳಿಗೆ ವಾಪಸಾಗಬೇಕೆಂದರೆ ವೈದ್ಯಕೀಯ ಪ್ರಮಾಣಪತ್ರ ಹೊಂದಿರಬೇಕಾದ್ದು ಕಡ್ಡಾಯ. ಹೀಗಾಗಿ, ಈ ಸರ್ಟಿಫಿಕೇಟ್‌ ಪಡೆಯಲೆಂದು ಕಾರ್ಮಿಕರು ಆಸ್ಪತ್ರೆಯ ಮುಂದೆ ಸಾಲಾಗಿ ನಿಂತಿದ್ದಾರೆ. ಮಂಗಳವಾರ ರಾತ್ರಿಯಿಂದಲೇ ಬಂದು ಕ್ಯೂನಲ್ಲಿ ನಿಂತಿದ್ದರೂ, ಬುಧವಾರ ಮಧ್ಯಾಹ್ನವಾದರೂ ಸರ್ಟಿಫಿಕೇಟ್‌ ಕೈ ಸೇರಿಲ್ಲ. ಉಣ್ಣಲು ಆಹಾರವೂ ಇಲ್ಲ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ಹಳಿಗಳಲ್ಲೀಗ ಸರಕು ರೈಲುಗಳದ್ದೇ ಹವಾ!
ಈವರೆಗೆ ಹಳಿಗಳ ಮೇಲೆ ತೆವಳುತ್ತಾ ಸಾಗುತ್ತಿದ್ದ ಸರಕು ರೈಲುಗಳ ಸ್ಪೀಡ್‌ ಈಗ ಹೆಚ್ಚಾಗಿದೆ. ಕೋವಿಡ್‌ 19 ಲಾಕ್‌ ಡೌನ್‌ ನಿಂದಾಗಿ ಪ್ರಯಾಣಿಕ ರೈಲುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಕಾರಣ,ಹಳಿಗಳಲ್ಲೀಗ ಸರಕು ರೈಲುಗಳದ್ದೇ ಹವಾ! ಸರಕುಗಳನ್ನು ಹೊತ್ತು ನಿಧಾನವಾಗಿ ಸಾಗುತ್ತಿದ್ದ ರೈಲುಗಳು ಲಾಕ್‌ ಡೌನ್‌ ಅವಧಿಯಲ್ಲಿ ವೇಗ ವರ್ಧಿಸಿಕೊಂಡು ಸಾಗುತ್ತಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಬಹುತೇಕ ವಲಯಗಳಲ್ಲಿ ಸರಕು ರೈಲುಗಳ ವೇಗವು ಶೇ.66ರಷ್ಟು, ಅದರಲ್ಲೂ ಕೆಲವೊಂದು ಕಡೆ ದುಪ್ಪಟ್ಟು ಹೆಚ್ಚಾಗಿದೆ. ಸಾಮಾನ್ಯವಾಗಿ, ಈ ರೈಲುಗಳು ಗಂಟೆಗೆ 24 ಕಿ.ಮೀ. ವೇಗದಲ್ಲಿ ಸಂಚರಿಸಿದರೆ, ಈಗ ಗಂಟೆಗೆ 53.15 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿವೆ. ಇತರೆ ದಿನಗಳಲ್ಲಿ, ವೇಗವಾಗಿ ಬರುವ ಪ್ರಯಾಣಿಕ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲೆಂದು ಸರಕು ರೈಲುಗಳನ್ನು ಹಲವು ಕಡೆ ನಿಲ್ಲಿಸಲಾಗುತ್ತದೆ. ಹೀಗಾಗಿ, ಸರಕು ರೈಲುಗಳ ಸರಾಸರಿ ವೇಗ ಕಡಿಮೆಯಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next