ಬೆಂಗಳೂರು: ಪದೇ ಪದೆ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಮನೆಗಳ್ಳನೊಬ್ಬ ಬೆರಳಚ್ಚಿನ ಗುರುತಿನಿಂದ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಉತ್ತರಹಳ್ಳಿ ಮುಖ್ಯರಸ್ತೆ ನಿವಾಸಿ ಲೋಕೇಶ್ ಅಲಿಯಾಸ್ ಲೋಕಿ(33) ಬಂಧಿತ ಆರೋಪಿ. 8.5 ಲಕ್ಷ ರೂ. ಮೌಲ್ಯದ 125 ಗ್ರಾಂ ಚಿನ್ನಾಭರಣ, 1 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಲೋಕೇಶ್ ಸುಬ್ರಮಣ್ಯಪುರ ಠಾಣೆಯ ರೌಡಿಶೀಟರ್ ಆಗಿದ್ದು, ಆತನ ವಿರುದ್ಧ ಸುಬ್ರಮಣ್ಯಪುರ ಠಾಣೆಯಲ್ಲಿ 7 ಹಾಗೂ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಂದು ಪ್ರಕರಣ ಬೆಳಕಿಗೆ ಬಂದಿದೆ.
ಏ.22ರಂದು ಉತ್ತರಹಳ್ಳಿ ಸರ್ಕಲ್ ಸೆಂಟ್ ಮಾರ್ಥಾಸ್ ರಸ್ತೆಯಲ್ಲಿರುವ ಮೆಹಬೂಬ್ ಎಂಬುವವರ ಮನೆಗೆ ನುಗ್ಗಿ ಬೀಗ ಒಡೆದು 8.5 ಲಕ್ಷ ರೂ. ಮೌಲ್ಯದ 125 ಗ್ರಾಂ ಚಿನ್ನಾಭರಣ ದೋಚಿದ್ದ. ಈ ಕುರಿತು ಮೆಹಬೂಬ್ ಅವರು ಸುಬ್ರಮಣ್ಯಪುರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ತನಿಖೆ ಕೈಗೊಂಡ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿದ್ದ ಬೆರಳಚ್ಚನ್ನು ಸಂಗ್ರಹಿಸಿ ಹಳೆ ಕಳ್ಳರ ಬೆರಳಚ್ಚಿಗೆ ಹೋಲಿಕೆ ಮಾಡಿ ನೋಡಿದಾಗ ಆರೋಪಿ ಲೋಕೇಶ್‌ನ ಬೆರಳಚ್ಚು ತಾಳೆಯಾಗಿತ್ತು. ಈ ಸಾಕ್ಷ್ಯದ ಆಧಾರದಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಬಗ್ಗೆ ವಿವರಿಸಿದ್ದಾನೆ ಎಂದು ತಿಳಿದು ಬಂದಿದೆ.