Advertisement

ಮನೆ ಸರ್ವೆಗೆ ಏಜೆಂಟರಿಂದ ಹಣ ವಸೂಲಿ

04:39 PM Nov 13, 2019 | Suhan S |

ಕೊರಟಗೆರೆ: ಕಟ್ಟಡಗಳ ದರ, ತೆರಿಗೆ ಪರಿಷ್ಕರಣೆ ಮತ್ತು ಇತರ ಮಾಹಿತಿ ಸಂಗ್ರಹಿಸುವುದಕ್ಕೆ ಗ್ರಾಮ ಪಂಚಾಯಿತಿ ಸೂಚನೆಯಂತೆ ಕೋಲಾರ ಮೂಲದ 25 ಜನ ಏಜೆಂಟರ ತಂಡ 100 ರೂ. ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

Advertisement

ಪ್ರತಿ ಕುಟುಂಬ ಗ್ರಾಪಂಗೆ 50 ರೂ. ಪಾವತಿಸಬೇಕು ಎಂದು ಪಂಚಾಯತ್‌ ರಾಜ್‌ ಇಲಾಖೆ ಆದೇಶಿಸಿದೆ ಎಂಬ ನಕಲಿ ಪತ್ರ ತೋರಿಸಿ ವಸೂಲಿ ದಂಧೆ ನಡೆಸುತ್ತಿದ್ದಾರೆ. ಕಟ್ಟಡ ನಿರ್ಮಾಣ, ದಿನಾಂಕ, ಆಸ್ತಿಯ ಪಾಯದ ವಿಸ್ತೀರ್ಣ, ಕಟ್ಟಡ ವಿನ್ಯಾಸ, ನಿವೇಶನದ ಒಟ್ಟು ವಿಸ್ತೀರ್ಣ, ಚೆಕ್ಕು ಬಂದಿ ವಿವರ ಸಂಗ್ರಹಿಸಿ ಆಯಾ ಗ್ರಾಪಂಗೆ 50 ರೂ. ಸಂಗ್ರಹಿಸಿ ಎಂದು ಗ್ರಾಪಂ ನಕಲಿ ಆದೇಶದಲ್ಲಿ ತಿಳಿಸಿದ್ದರೆ ಏಜೆಂಟರ ತಂಡ 100 ರೂ. ವಸೂಲಿ ಮಾಡುತ್ತಿದೆ.

ತಾಲೂಕಿನ 24 ಗ್ರಾಪಂ ವ್ಯಾಪ್ತಿಯ ಪೈಕಿ 10 ಗ್ರಾಪಂನ ಸುಮಾರು 18 ಸಾವಿರಕ್ಕೂ ಹೆಚ್ಚು ಮನೆಯಿಂದಯಲ್ಲಿ ಪ್ರತಿಮನೆಗೆ 100 ರೂ.ನಂತೆ ಲಕ್ಷಾಂತರ ರೂ. ವಸೂಲು ಮಾಡಲಾಗಿದೆ. ಹಣ ಪಡೆಯುವ ವೇಳೆ ಸರ್ಕಾರದ ಅಧಿಕೃತ ದಾಖಲೆ ಅಥವಾ ಗ್ರಾಪಂ ರಸೀದಿ ನೀಡದೆ ಕೇವಲ 5 ರೂ. ಮೌಲ್ಯದ ಪಟ್ಟಾ ಪುಸ್ತಕ ನೀಡಿ ಅಕ್ರಮವಾಗಿ ಹಣ ಪಡೆಯುತ್ತಿದೆ.

ತಾಲೂಕಿನ 24 ಗ್ರಾಪಂ ವ್ಯಾಪ್ತಿಯ ಹೊಳವನಹಳ್ಳಿ, ಮಾವತ್ತೂರು, ಬುಕ್ಕಾಪಟ್ಟಣ, ಕೋಳಾಲ, ಅಕ್ಕಿರಾಂಪುರ, ದೊಡ್ಡಸಾಗ್ಗೆರೆ, ತುಂಬಾಡಿ, ಎಲೆರಾಂ ಪುರ, ವಜ್ಜನಕುರಿಕೆ, ದೊಡ್ಡಸಾಗ್ಗೆರೆ, ಜೆಟ್ಟಿಅಗ್ರಹಾರ, ತೋವಿನಕೆರೆ, ನೀಲಗೊಂಡನಹಳ್ಳಿ, ಬೋಮ್ಮಲ ದೇವಿಪುರಗಳಲ್ಲಿ ಏಜೆಂಟರ ತಂಡ ಹಣ ವಸೂಲಿ ಮಾಡಿದೆ. ಇನ್ನುಳಿದ 14 ಗ್ರಾಪಂನಲ್ಲಿ ತಾಪಂ ಸಹಕಾರದಿಂದ ಹಣ ವಸೂಲಿ ಮಾಡಲು ಈಗಾಗಲೇ ಸಿದ್ಧತೆ ನಡೆದಿದೆ.

2018ನೇ ಜುಲೈನಲ್ಲಿ ಗ್ರಾಪಂಗಳ ತೆರಿಗೆ ಪರಿಷ್ಕರಣೆ ಹಾಗೂ ವಸೂಲಾತಿ ಪ್ರಕ್ರಿಯೆ ಬಗ್ಗೆ ಕ್ರಮ ಕೈಗೊಳ್ಳಲು ಜಿಪಂಗೆ ಸರ್ಕಾರ ಸೂಚಿಸಿತ್ತು. ಆದರೆ 2019ನೇ ಅಕ್ಟೋಬರ್‌ನಲ್ಲಿ ಜಿಪಂ ಸಿಇಒ ಗಮನಕ್ಕೆ ತರದೆ ಏಕಪಕ್ಷಿಯವಾಗಿ ತಾಪಂ ಇಒ ತಮ್ಮ ವ್ಯಾಪ್ತಿಯ ಗ್ರಾಪಂಗಳಿಗೆ ಖಾಸಗಿ ಸಂಸ್ಥೆ ಮೂಲಕ ಸರ್ವೇ ನಡೆಸಲು ಆದೇಶಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Advertisement

ವಸೂಲಿ 3ನೇ ಸಲ: 2004-05ನೇ ಸಾಲಿನಲ್ಲಿ ಗ್ರಾಪಂಯಿಂದ ಮನೆಗಳ ಸರ್ವೇ ನಡೆದಿದೆ. 2014-15ನೇ ಸಾಲಿನಲ್ಲಿ ಮತ್ತೂಮ್ಮೆ ಖಾಸಗಿ ಸಂಸ್ಥೆಯಿಂದ ಪ್ರತಿ ಕುಟುಂಬದಿಂದ 40 ರೂ. ಪಡೆದು ಸರ್ವೇ ನಡೆಸಿ ಗ್ರಾಪಂಗೆ ವರದಿ ಸಲ್ಲಿಕೆಯಾಗಿದೆ. ಮತ್ತೆ 2018-19ನೇ ಆದೇಶದಂತೆ ಸರ್ವೇ ಕೆಲಸಕ್ಕೆ 100 ರೂ. ಅಕ್ರಮವಾಗಿ ವಸೂಲಿ ಮಾಡುತ್ತಿದ್ದಾರೆ.

11 ಗ್ರಾಪಂನಿಂದ ಪರವಾನಗಿ:  ಹೊಳವನಹಳ್ಳಿ, ಮಾವತ್ತೂರು, ಬುಕ್ಕಾಪಟ್ಟಣ, ಕೋಳಾಲ, ಅಕ್ಕಿರಾಂಪುರ, ದೊಡ್ಡಸಾಗ್ಗೆರೆ, ತುಂಬಾಡಿ, ಎಲೆರಾಂಪುರ, ವಜ್ಜನಕುರಿಕೆ, ದೊಡ್ಡ ಸಾಗ್ಗೆರೆ, ಜೆಟ್ಟಿಅಗ್ರಹಾರ, ತೋವಿನಕೆರೆ, ನೀಲ ಗೊಂಡನಹಳ್ಳಿ, ಬೋಮ್ಮಲದೇವಿಪುರದ ಗ್ರಾಪಂ ನಿಂದ ನಂದಾದೀಪ ನಗರ ಮತ್ತು ಗ್ರಾಮೀಣಾ ಭಿವೃದ್ಧಿ ಟ್ರಸ್ಟ್‌ಗೆ ತೆರಿಗೆ ಪರಿಷ್ಕರಣೆ ಮತ್ತು ಕುಟುಂಬದ ಮಾಹಿತಿ ಪಡೆಯಲು ಆದೇಶಿಸ ಲಾಗಿದೆ. ಮನೆ ಮಾಲೀಕರು ಕಟ್ಟಡದ ಫಾರಂಗೆ 50 ರೂ. ಮತ್ತು ಪಟ್ಟಾಪುಸ್ತಕಕ್ಕೆ 50 ರೂ. ನೀಡುವಂತೆ ಗ್ರಾಪಂ ಪಿಡಿಒ ಮತ್ತು ಅಧ್ಯಕ್ಷರೇ ನೇರವಾಗಿ ಸೂಚಿಸಿದ್ದಾರೆ.

ಸರ್ಕಾರದ ಆದೇಶದ ಪ್ರತಿ ಯಥಾವತ್ತಾಗಿ ಗ್ರಾಪಂಗೆ ವರ್ಗಾವಣೆ ಮಾಡಿದ್ದೇನೆ. ಹಣ ಪಡೆಯುವ ವಿಚಾರವಾಗಿ ಗ್ರಾಪಂ ಸಭೆಯಲ್ಲಿ ಒಪ್ಪಿಗೆ ಮತ್ತು ನಿರ್ಣಯಕ್ಕೆ ಬಿಟ್ಟಿದ್ದೇನೆ. ಪಟ್ಟಾಪುಸ್ತಕ ಮತ್ತು ಸರ್ವೆ ಮಾಡಲು 100 ರೂ. ಪಡೆಯುತ್ತಿರುವ ಬಗ್ಗೆ ಗಮನಕ್ಕೆ ಬಂದಿಲ್ಲ. ತಕ್ಷಣ ಪಿಡಿಒ ಸಭೆ ಕರೆದು ಚರ್ಚಿಸುತ್ತೇನೆ. ಶಿವಪ್ರಕಾಶ್‌, ತಾಪಂ ಇಒ

ಯಾವುದೇ ಸರ್ವೆ ನಡೆಸಲು ಆದೇಶ ಮಾಡಿಲ್ಲ. ಗಮನಕ್ಕೆ ತರದೆ ಕೊರಟಗೆರೆಯಲ್ಲಿ ಸರ್ವೆ ನಡೆಯುತ್ತಿದೆ. ತಕ್ಷಣ ಸರ್ವೆ ಮತ್ತು ತೆರಿಗೆ ಪರಿಷ್ಕರಣೆ ಕೆಲಸ ನಿಲ್ಲಿಸಿ ವರದಿ ಸಲ್ಲಿಸುವಂತೆ ಇಒಗೆ ಸೂಚಿಸಿದ್ದೇನೆ. ಸರ್ಕಾರದ ಅಧಿಕೃತ ರಸೀದಿ ನೀಡದೆ ಜನರಿಂದ ಹಣ ಪಡೆದಿರುವ ಬಗ್ಗೆ ಪರಿಶೀಲಿಸುತ್ತೇನೆ.ಡಾ.ಶುಭ ಕಲ್ಯಾಣ್‌, ಜಿಪಂ ಸಿಇಒ

 

-ಎನ್‌.ಪದ್ಮನಾಭ್‌

Advertisement

Udayavani is now on Telegram. Click here to join our channel and stay updated with the latest news.

Next