Advertisement

ಪೊಲೀಸರು ಒಪ್ಪಿದರೆ ಮಾತ್ರ ಬಾಡಿಗೆದಾರರಿಗೆ ಮನೆ! ಮೈಸೂರಿನ ಮನೆ ಮಾಲಕರಿಂದ ವಿನೂತನ ಹೆಜ್ಜೆ

11:17 PM Nov 25, 2022 | Team Udayavani |

ಮೈಸೂರು: ನಗರದಲ್ಲಿ ನಿಮಗೆ ಮನೆ ಅಥವಾ ರೂಮ್‌ಗಳು ಬಾಡಿಗೆಗೆ ಬೇಕೆ? ಹಾಗಿದ್ದರೆ ತಮ್ಮ ಮೂಲ ದಾಖಲೆಗಳೊಂದಿಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪಡೆದ ಕ್ಲಿಯರೆನ್ಸ್‌ ಸರ್ಟಿಫಿಕೆಟ್‌ ಕಡ್ಡಾಯ. ಮನೆಗಳ ಮಾಲಕರೇ ಸ್ವಯಂ ಪ್ರೇರಿತವಾಗಿ ಅಳವಡಿಸಿಕೊಂಡಿರುವ ಸುರಕ್ಷಿತ ಕ್ರಮಕ್ಕೆ ಪೊಲೀಸರೂ ಸಾಥ್‌ ನೀಡಿದ್ದಾರೆ.

Advertisement

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣದ ರೂವಾರಿ ಉಗ್ರ ಶಾರೀಕ್‌ ಮೈಸೂರಿನ ಲೋಕನಾಯಕ ನಗರದಲ್ಲಿ ನಕಲಿ ಗುರುತಿನ ಪತ್ರ ನೀಡಿ ಮನೆ ಬಾಡಿಗೆ ಪಡೆದಿದ್ದ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಮನೆ ಮಾಲಕರು ಸಂಘಟಿತರಾಗಿ, ಬಾಡಿಗೆದಾರರ ಜಾತಕ ಜಾಲಾಡಲು ಮುಂದಾಗಿದ್ದಾರೆ.

ಮನೆ ಬಾಡಿಗೆ, ಮನೆ ಭೋಗ್ಯ ಪಡೆಯುವವರು ಸ್ಥಳೀಯ ಪೊಲೀಸ್‌ ಠಾಣೆಗಳಿಂದ ತಾವು ಸಲ್ಲಿಸುವ ದಾಖಲೆಗಳಾದ ಆಧಾರ್‌, ಚುನಾವಣೆ ಗುರುತಿನ ಚೀಟಿಯನ್ನು ಪರಿಶೀಲಿಸಿರುವ ದೃಢೀಕರಣ ಪತ್ರ ತರುವುದು ಕಡ್ಡಾಯ ಎಂಬ ಹೊಸ ನಿಯಮವನ್ನು ಮನೆ ಮಾಲಕರು ಅನುಸರಿಸುತ್ತಿದ್ದಾರೆ. ನಗರದ ಸರಸ್ವತಿಪುರಂ, ಕುವೆಂಪುನಗರ, ಶಾರದೇವಿನಗರ, ಪಡುವಾರಹಳ್ಳಿ, ಯಾದವಗಿರಿ ಭಾಗಗಳಲ್ಲಿ ಈ ಅಘೋಷಿತ ನಿಯಮ ಚಾಲ್ತಿಗೆ ಬಂದಿದೆ.

ಬ್ರೋಕರ್‌ಗಳು ಮನೆ ತೋರಿಸುವ ಮುನ್ನಾ ಬಾಡಿಗೆ ಪಡೆಯುವವರ ಎಲ್ಲ ಮಾಹಿತಿ ಮತ್ತು ದಾಖಲೆಯನ್ನು ಪರಿಶೀಲಿಸಿದ ಬಳಿಕವಷ್ಟೇ ತಿಳಿಸುವಂತೆ ಹೇಳಿದ್ದಾರೆ. ಇದಕ್ಕೆ ಹೆಚ್ಚುವರಿ ಹಣವನ್ನೂ ನೀಡುತ್ತಿರುವುದು ಕಂಡುಬಂದಿದೆ.

ಕ್ಲಿಯರೆನ್ಸ್‌ ಪಡೆಯುವುದು ಹೇಗೆ?
ಎಲ್ಲ ಪೊಲೀಸ್‌ ಠಾಣೆಗಳಲ್ಲೂ ಈ ವ್ಯವಸ್ಥೆ ಮಾಡಲಾಗಿದ್ದು, ಹೊಸದಾಗಿ ಬಾಡಿಗೆ ಪಡೆಯುವವರು ಪೊಲೀಸ್‌ ಠಾಣೆಗೆ ತೆರಳಿ 100 ರೂ. ಪಾವತಿಸಿ ಅರ್ಜಿ ಪಡೆದು ಕ್ಲಿಯರೆನ್ಸ್‌ ಸರ್ಟಿಫಿಕೆಟ್‌ ಪಡೆಯಬಹುದಾಗಿದೆ. ಹಾಗೆಯೇ ಬ್ಯಾಚುಲರ್‌ ಮತ್ತು ಕುಟುಂಬಗಳಿಗೆ ಪ್ರತ್ಯೇಕ ಅರ್ಜಿಗಳನ್ನು ಇಡಲಾಗಿದೆ. ಜತೆಗೆ ಈಗಾಗಲೇ ಬಾಡಿಗೆ ಇರುವವರು ತಮ್ಮ ಮನೆಯ ಮಾಲಕರ ಮೂಲಕ ಸ್ಥಳೀಯ ಠಾಣೆಗಳಿಗೆ ತಮ್ಮ ಗುರುತಿನ ಚೀಟಿ ಅಥವಾ ದಾಖಲೆ ಸಲ್ಲಿಸುವಂತೆ ಎಲ್ಲ ಮನೆಯ ಮಾಲಕರು, ಪಿಜಿ ಓನರ್‌ಗಳಿಗೆ ಸೂಚಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

Advertisement

ಅಪರಿಚಿತರಿಗೆ ಮತ್ತು ಹೊರಗಿನವರಿಗೆ ಬಾಡಿಗೆ ನೀಡುವ ಮೊದಲು ಅವರ ಹಿನ್ನೆಲೆ ತಿಳಿಯುವ ಜತೆಗೆ ಗುರುತಿನ ಚೀಟಿ, ದಾಖಲೆ ಪಡೆಯುವುದು ಸೂಕ್ತ. ಹಾಗೆಯೇ ಬಾಡಿಗೆದಾರರು ಠಾಣೆಗಳಿಗೆ ಅರ್ಜಿ ಸಲ್ಲಿಸಿ ಪೊಲೀಸರಿಂದ ಕ್ಲಿಯರೆನ್ಸ್‌ ಪಡೆದುಕೊಳ್ಳಬೇಕು. ಈ ಬಗ್ಗೆ ಎಲ್ಲ ಠಾಣೆಗಳಿಗೂ ಸೂಚನೆ ನೀಡಲಾಗಿದೆ.
– ಬಿ.ರಮೇಶ್‌,  ನಗರ ಪೊಲೀಸ್‌ ಆಯುಕ್ತರು

– ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next