Advertisement

ಅಡುಗೆ ಕೋಣೆಯ ಶಿಸ್ತಲ್ಲಿದೆ ಮನೆಯ ನೆಮ್ಮದಿ…

01:10 PM Nov 20, 2017 | |

ಮನೆಯ ವಾಸ್ತುವಿನ ಕುರಿತಾದ ವಿಚಾರದಲ್ಲಿ ಸಾಮಾನ್ಯವಾಗಿ ಎಲ್ಲರೂ ಮನೆಯ ಬಾಗಿಲು ಯಾವ ದಿಕ್ಕು ಎಂಬುದರ ಬಗೆಗೇ ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ. ಬಿಟ್ಟರೆ ಮನೆಯಲ್ಲಿನ ಇತರ ವಿಚಾರಗಳ ಬಗೆಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಾರರು. ಪ್ರಮುಖವಾಗಿ ಬೆಂಕಿಯ ಬಗೆಗೂ, ನೀರಿನ ಬಗೆಗೂ ಹಲವು ವಿಚಾರಗಳನ್ನು ಗಮನಿಸಲೇಬೇಕು. ಬೆಂಕಿಯು ಸದಾ ಉರಿಯುವ ಘಟಕ. ಅದು ಒಂದನ್ನು ಉಪಯೋಗಿಸಿಕೊಂಡು ತಾನು ಉರಿಯುತ್ತದೆ.

Advertisement

ಯಾವುದನ್ನು ಉಪಯೋಗಿಸಿಕೊಳ್ಳುತ್ತದೋ ಅದರಲ್ಲಿ ತಾನೇ ಸ್ಥಾಯಿಯಾಗಿ ಆಶ್ರಯವನ್ನು ಪಡೆದಿರುತ್ತದೆ. ರುದ್ರನ ನೇತೃತ್ವದಲ್ಲಿ ಮಧ್ಯದ ಮೂರನೆಯ ನೇತ್ರ ಬೆಂಕಿಯನ್ನು ಒಳಗೊಂಡು ಸುಡುತ್ತದೆ.  ಹೀಗಾಗಿ ತಂದದ್ದು ಜೀರ್ಣವಾಗುವುದಕ್ಕೆ ಪಾಚಕ ರಸಗಳ ಸುಡುವ ಗುಣವೇ ಕಾರಣವಾಗಿವೆ. ಸೂರ್ಯನು ಉದಯಿಸುವ ಪೂರ್ವಕ್ಕೆ ಮುಖಮಾಡಿ ಆಗ್ನೇಯದತ್ತ ಒಲೆಗಳು ಬರುವಂತಿದ್ದು ಅಡುಗೆಯನ್ನು ಮಾಡುವುದು ಸೂಕ್ತ. ಈಶಾನ್ಯಕ್ಕೆ ಅಡುಗೆ ಮನೆಯಿದ್ದರೂ ಅದು ಸರಿಯೇ. ಆದರೆ ಈಶಾನ್ಯವು ಬೆಳೆಯದಂತೆ ಮೊಟುಕುಗೊಳಿಸಿ ಈಶಾನ್ಯದ ಕಡೆ ಅಡುಗೆ ಕೋಣೆ ಸಮಾವೇಶಗೊಳ್ಳುವುದು ಸ್ವಾಗತಾರ್ಹವಲ್ಲ. ಅಡುಗೆ ಕೋಣೆಯು ಪೂರ್ವದ ಕಡೆ ಕಿಟಕಿ ಹೊಂದಿರುವುದು ಅವಶ್ಯವಾಗಿದೆ.

ಅಡುಗೆಗೆ ಒಂದು ಕಟ್ಟೆ ಇರಲಿ. ಕಟ್ಟೆ ಮೇಲೆ ಒಲೆಗಳು ಬರಲಿ. ಆಧುನಿಕತೆಯು ನಮ್ಮ ಶಾಸ್ತ್ರೀಯವಾದ ಅಡುಗೆ ಒಲೆಗಳ ವಿನ್ಯಾಸಕ್ಕೆ ತೊಂದರೆ ತರುತ್ತದೆ. ಹೀಗಾಗಿ ಕಟ್ಟೆಯು ಹೆಚ್ಚಾಗಿ ದಕ್ಷಿಣದ ಮೂಲೆಯಿಂದ ಹತ್ತು ಅಡಿಗಿಂತಲೂ ಕಡಿಮೆ ಅಂತರದಲ್ಲಿ ಕಟ್ಟಲ್ಪಡಲಿ. ಅಡುಗೆ ಮನೆಯು ಈಶಾನ್ಯದ ಕಡೆ ತುಸು ಬೆಳೆದಿದ್ದರೆ ಅದು ತೊಂದರೆಯಾಗುವಂಥದ್ದಲ್ಲ. ಪೂರ್ವದ ಗೋಡೆಯ ಬದಿಗೆ ಒಂದು ಕನ್ನಡಿ ಇರುವುದೂ ಸೂಕ್ತ. ಆವರಿಸಿಕೊಂಡ ಒಲೆಯ ಬೆಂಕಿಯನ್ನು ಅದು ಹಿಂತಿರುಗಿ ಪ್ರತಿಫ‌ಲಿಸುವ ವಿಚಾರ ಒಂದು ರೀತಿಯ ಸಂಪನ್ನತೆಯನ್ನು ಆಹಾರದ ಘಟಕಗಳ ಬಗೆಗೆ ವೈಶಿಷ್ಟ ನಿರ್ಮಿಸಲು ಅನುಕೂಲವಾಗುತ್ತದೆ. ಈಗ ಅನಿಲದ ಸಿಲಿಂಡರಿನ ಕಾಲವಾದುದರಿಂದ ಅಡುಗೆ ಕೋಣೆಯ ಆಗ್ನೇಯ ದಿಕ್ಕಿನಲ್ಲಿ ಅದು ಇರಲಿ.

ಇನ್ನು ಮನೆಯ ಉಪಯೋಗಕ್ಕಾಗಿನ ನೀರು ಸಂಗ್ರಹದ ಕೊಳಾಯಿ, ಸಂಪು, ಬೋರ್‌ ಈಶಾನ್ಯವನ್ನು ಬಳಸಿಕೊಳ್ಳುವಂತೆ ಹೊಮ್ಮಿಕೊಳ್ಳಲಿ. ಎಲ್ಲಾ ಸಂದರ್ಭದಲ್ಲಿ ಇದು ಸಾಧ್ಯವಾಗುತ್ತದೆ ಎಂಬುದು ನಿರ್ದಿಷ್ಟವಲ್ಲ. ಹೀಗಾಗಿ ನೈಋತ್ಯವನ್ನೋ, ವಾಯುವ್ಯವನ್ನೋ ಕೂಡ ಇದಕ್ಕಾಗಿ ಬಳಸಿಕೊಳ್ಳಬಹುದು. ಆದರೂ ಈಶಾನ್ಯವೇ ಹೆಚ್ಚು ಸೂಕ್ತ ಎಂಬುದು ನೆನಪಿರಲಿ. ನೀರಿರುವ ಸ್ಥಳದಲ್ಲಿ ಬಿಸಿಲು ಉತ್ತಮವಾಗಿ ಪಸರಿಸಿ ಕೊಂಡಿರುವುದು ಸ್ವಾಗತಾರ್ಹ. ಬಿಸಿಲಿಗೆ ಶುದ್ದಗೊಳಿಸುವ ಸಂವಿಧಾನವಿದೆ. ಕಣ್ಣಿಗೆ ಕಾಣದ ಸೂಕ್ಷ್ಮಾಣುಗಳು ಬಿಸಿಲಿಗೆ, ಶಾಖದಿಂದಾಗಿ ಸಾಯುತ್ತವೆ. ನೀರಿನ ಪರಿಶುದ್ಧತೆಗೆ ಇದು ಉಪಯೋಗಕಾರಕ ಸಂಗತಿ.
ಬಿಸಿಲಿರುವ ಈಶಾನ್ಯ ಮೂಲೆಗೆ ನೀರಿನ ಕೊಳ, ಸಂಪು, ಬೋರ್‌ ಇರುವುದೇ ಕ್ಷೇಮ. 

ನೀರಿನ ಸಂಬಂಧವಾದ ವಿಚಾರ, ಅಗ್ನಿಯ ಸಂಬಂಧವಾದ ವಿಚಾರದಲ್ಲಿ ರಾಹು ಗ್ರಹದ ಪಾತ್ರ ಪ್ರಧಾನವಾದದ್ದು. ಹೀಗಾಗಿ ಕೆಲ ನ್ಯೂನತೆಗಳೇನಾದರೂ ಇದ್ದರೆ ರಾಹುವಿಗೆ ಸಂಬಂಧಿಸಿದ ಆರಾಧನೆ ನಡೆಸುವುದು ಸೂಕ್ತ. ಹೋಮ, ಹವನಾದಿಗಳು ಬೇಕಾಗಿಲ್ಲ. ಸುಲಭವಾಗುವಂತೆ ಮನೆಯ ಯಜಮಾನ ಅಥವಾ ಜವಾಬ್ದಾರಿಯುತ ಸದಸ್ಯ ರಾಹು ಪೀಡನಿವಾರಣಾ ಸ್ತೋತ್ರವನ್ನೋ, ರಾಹು ಕವಚವನ್ನೋ, ಓದಲಿ. ರಾಹು ಸ್ತೋತ್ರ ಪಠಣವೂ ಯುಕ್ತ ಅನುಷ್ಠಾನವೇ ಆಗಿದೆ. ಉತ್ತರ ಹಾಗೂ ದಕ್ಷಿಣಗಳು ಭಿನ್ನ ದ್ರುವಗಳಾಗಿ ಒಂದು ಇನ್ನೊಂದನ್ನು ಆಕರ್ಷಿಸುವ ಆಕರ್ಷಣ ಶಕ್ತಿ ಜಾಸ್ತಿ. ಹೀಗಾಗಿ ನೀರು, ಬೆಂಕಿ ಪರಸ್ಪರ ಭಿನ್ನ ಸ್ವಭಾವ ಧಾತುಗಳಾಗಿರುವುದರಿಂದ ರಾಹುವಿನ ಕುರಿತಾದ ಅನುಷ್ಠಾನ ಉತ್ತರ ಹಾಗೂ ದಕ್ಷಿಣದಿಕ್ಕಿನ ಸಮನ್ವಯವನ್ನೂ, ಬೆಂಕಿ ಹಾಗೂ ನೀರಿಗೆ ಬೇಕಾದ ಅನಿವಾರ್ಯವಾದ ಅಂತರವನ್ನೂ ಒಟ್ಟಿಗೆ ನಡೆಸುತ್ತದೆ. 

Advertisement

ಅನಂತಶಾಸ್ತ್ರಿ ಅನಂತಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next