ಸರಿಯಾದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳದೇ ಇರುವುದರಿಂದ ಇಂದು ಹೆಚ್ಚಿನವರಲ್ಲಿ ರಕ್ತಹೀನತೆ ಸಮಸ್ಯೆ ಕಾಡುತ್ತಿದೆ. ದೇಹದಲ್ಲಿ ಕೆಂಪು ರಕ್ತ ಕಣಗಳು ಕಡಿಮೆಯಾದಾಗ ರಕ್ತದ ಕೊರತೆ ಕಾಣಿಸಿಕೊಳ್ಳುತ್ತದೆ. ಇದನ್ನೇ ರಕ್ತಹೀನತೆ ಎನ್ನಲಾಗುತ್ತದೆ. ದೇಹದಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸಿ ರಕ್ತಹೀನತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ರಕ್ತಹೀನತೆ ಉಂಟಾದರೆ ದೇಹದಲ್ಲಿ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಇದರಿಂದ ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಅಧಿಕವಾಗಿರುತ್ತದೆ.
ಮುಖ್ಯ ಕಾರಣ
ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ, ಹೊಟ್ಟೆಯ ಸೋಂಕು, ಅಧಿಕ ಪ್ರಮಾಣದ ರಕ್ತಸ್ರಾವದಿಂದಾಗಿ ರಕ್ತಹೀನತೆ ಉಂಟಾಗುತ್ತದೆ.
ರಕ್ತಹೀನತೆಯ ಮುಖ್ಯ ಲಕ್ಷಣಗಳೆಂದರೆ ದೇಹದ ವಿವಿಧ ಭಾಗಗಳಲ್ಲಿ ನೋವು, ಹೃದಯ, ಕಿಡ್ನಿ, ಪಿತ್ತಜನಕಾಂಗದಲ್ಲಿ ಸಮಸ್ಯೆ, ಸ್ನಾಯಗಳ ದೌರ್ಬಲ್ಯ, ಚರ್ಮದ ಬಣ್ಣ ಬದಲಾವಣೆ, ಕೈಕಾಲು ತಣ್ಣಗಿರುವುದು, ಬೇಗನೆ ವಾಸಿಯಾಗದ ಗಾಯಗಳು, ಮುಟ್ಟಿನ ವೇಳೆ ಅತ್ಯಧಿಕ
ನೋವು ಮೊದಲಾದವುಗಳೊಂದಿಗೆ ಬೇಗ ಆಯಾಸವಾಗುತ್ತದೆ.
ರಕ್ತ ಹೀನತೆಯನ್ನು ಕಡಿಮೆ ಮಾಡಲು ಒಂದು ಲೋಟ ನೀರಿಗೆ ಸ್ವಲ್ಪ ನಿಂಬೆರಸ, ಒಂದು ಚಮಚ ಜೇನುತುಪ್ಪ ಸೇರಿಸಿ ನಿತ್ಯವೂ ಕುಡಿಯಬೇಕು. ಇದರಿಂದ ದೇಹದಲ್ಲಿ ರಕ್ತ ಬೇಗನೆ ವೃದ್ಧಿಯಾಗುತ್ತದೆ.
ಹಸುರು ಸೊಪ್ಪು, ತರಕಾರಿಗಳ ಸೇವನೆ, ಟೊಮ್ಯಾಟೋ ರಸ, ಜ್ಯೂಸ್ ಕುಡಿಯುವುದು, ಮೆಕ್ಕೆ ಜೋಳ ತಿನ್ನುವುದು, ಬೆಲ್ಲದೊಂದಿಗೆ ಕಡಲೆಕಾಯಿ ತಿನ್ನುವುದು, ರಾತ್ರಿಯೀಡಿ ನೆನೆಸಿಟ್ಟ ಒಣ ದ್ರಾಕ್ಷಿ ಸೇವಿಸುವುದು, ಖರ್ಜೂರ, ದಾಳಿಂಬೆ ಮೊದಲಾದ ಹಣ್ಣುಗಳ ಸೇವನೆಯಿಂದಲೂ ಅತೀ ಶೀಘ್ರವಾಗಿ ದೇಹದಲ್ಲಿ ರಕ್ತದ ಉತ್ಪತ್ತಿಯಾಗುತ್ತದೆ.