ಹಾವೇರಿ: ಕರ್ನಾಟಕ ಸರ್ಕಾರದ ವಸತಿ ಇಲಾಖೆ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜಕುಮಾರ ಮೀನಾ ಅವರು ಗುರುವಾರ ಜಿಲ್ಲೆಯ ವಿವಿಧ ನೆರೆ ಸಂತ್ರಸ್ತ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಮನೆ ನಿರ್ಮಾಣ ಕಾರ್ಯ ಆರಂಭ ಕುರಿತಂತೆ ಪರಿಶೀಲನೆ ನಡೆಸಿದರು.
ಶಿಗ್ಗಾವಿ, ಸವಣೂರು, ಹುರಳಿಕೊಪ್ಪಿ, ಕುರುಬರಮಲ್ಲೂರು, ಕುಣಿಮೆಳ್ಳಿಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತರ ಮನೆ ನಿರ್ಮಾಣ ಕುರಿತಂತೆ ಅಧಿಕಾರಿಗಳು ಹಾಗೂ ಸಂತ್ರಸ್ತರೊಂದಿಗೆ ಮಾಹಿತಿ ಪಡೆದರು. ಮಳೆ ಮತ್ತು ನೆರೆಯಿಂದ ಕುಸಿದಿರುವ ಮನೆಗಳನ್ನು ಪುನರ್ ನಿರ್ಮಾಣ ಕುರಿತಂತೆ ಈಗಾಗಲೇ ಮುಖ್ಯಮಂತ್ರಿಗಳು ಕಾರ್ಯಾದೇಶ ಪತ್ರವನ್ನು ಸಂತ್ರಸ್ತರಿಗೆ ತಲುಪಿಸುವ ನಿಟ್ಟಿನಲ್ಲಿ ಕ್ರಮವಹಿಸಿದ್ದಾರೆ. ಕಾರ್ಯಾದೇಶಪತ್ರಗಳು ಸಂತ್ರಸ್ತರಿಗೆ ತಲುಪಿದ ಕುರಿತಂತೆ ಫಲಾನುಭವಿಗಳಿಂದ ಮಾಹಿತಿ ಪಡೆದುಕೊಂಡರು.
ವಸತಿ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಸಂದಾಯವಾಗಿರುವ ಪರಿಹಾರ ಹಣ ಕುರಿತಂತೆ ಫಲಾನುಭವಿಗಳಿಂದ ಮಾಹಿತಿ ಪಡೆದ ಉಸ್ತುವಾರಿ ಕಾರ್ಯದರ್ಶಿ ಮನೋಜಕುಮಾರ, ಪರಿಹಾರ ಹಣ ಜಮೆಯಾಗಿರುವ ಕುರಿತಂತೆ ಸಂತ್ರಸ್ತರ ಬ್ಯಾಂಕ್ ಪಾಸ್ ಪುಸ್ತಕ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮನೆ ನಿರ್ಮಾಣ ಆರಂಭ ಮಾಡಿದ ಫಲಾನುಭವಿಗಳಿಗೆ ತಕ್ಷಣವೇ ಮನೆ ನಿರ್ಮಾಣ ಆರಂಭ ಮಾಡಿ, ಈಗಾಗಲೇ ನಿಮಗೆ ಮೊದಲ ಕಂತು ಹಣ ಜಮೆಯಾಗಿದೆ. ಎರಡನೇ ಕಂತಿನ ಹಣ ಬಿಡುಗಡೆಗೆ ಇಂದಿನಿಂದಲೇ ಜಿಪಿಎಸ್ ಮಾಡಿ ದಾಖಲೆಗಳನ್ನು ನಿಗಮದ ವೆಬ್‌ಸೈಟ್ ಗೆ ಅಪ್‌ಲೋಡ್ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದರಿಂದ ಎರಡನೇ ಕಂತಿನ ಅನುದಾನ ಬಿಡುಗಡೆಗೆ ಅನುಕೂಲವಾಗಲಿದೆ ಎಂದರು.
ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವತ್ಛತಾ ವ್ಯವಸ್ಥೆ ಕುರಿತಂತೆ ಪರಿಶೀಲನೆ ನಡೆಸಿದರು. ಕುರಬರಮಲ್ಲಾಪೂರದ ಶುದ್ಧ ನೀರಿನ ಘಟಕ್ಕೆ ಭೇಟಿ ನೀಡಿ ನಳದ ನೀರು ಕುಡಿದು ಪರಿಶೀಲನೆ ನಡೆಸಿದರು. ಹುರಳಿಕೊಪ್ಪ ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದ ತಿಪ್ಪೆಗಳ ಸ್ಥಳಾಂತರ ಹಾಗೂ ಕಸದ ಸಂಸ್ಕರಣೆ ಕುರಿತಂತೆ ಜನರಿಗೆ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಗ್ರಾಮಗಳ ಜನರೊಂದಿಗೆ ಮಾತನಾಡಿ, ಕುಡಿಯುವ ನೀರಿನ ಮಿತ ಬಳಕೆ ಹಾಗೂ ಗ್ರಾಮದ ಸ್ವತ್ಛತೆ ಕುರಿತಂತೆ ಗ್ರಾಮಸ್ತರು ಜವಾಬ್ದಾರಿ ತೆಗೆದುಕೊಳ್ಳಬೇಕು. ಅಧಿಕಾರಿಗಳೊಂದಿಗೆ ಸಹಕರಿಸಬೇಕು. ಶುದ್ಧ ವಾತಾವರಣ, ಶುದ್ಧ ನೀರು, ಶುದ್ಧ ಪರಿಸರದ ಬಗ್ಗೆ ಜನರು ಕಾಳಜಿ ಹೊಂದಬೇಕು ಎಂದು ಜನರಿಗೆ ತಿಳಿಸಿದರು.
ಜಿಲ್ಲಾಧಿ ಕಾರಿ ಕೃಷ್ಣ ಭಾಜಪೇಯಿ, ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿ ಕಾರಿ ಎನ್ .ತಿಪ್ಪೇಸ್ವಾಮಿ, ಸವಣೂರು ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಜಿಪಂ ಸಹಾಯಕ ಕಾರ್ಯದರ್ಶಿ ಜಾಫರ್ ಸುತಾರ್, ಶಿಗ್ಗಾವಿ ಹಾಗೂ ಸವಣೂರ ತಹಶೀಲ್ದಾರ್ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.