ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ರಾಜೀನಾಮೆಯಿಂದ ತೆರವಾಗಿರುವ ಗೃಹ ಖಾತೆಯನ್ನು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ನೀಡಲು ಹೈ ಕಮಾಂಡ್ ಒಲವು ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಈ ಸಂಬಂಧ ಸೂಚನೆ ನೀಡಿದೆ ಎನ್ನಲಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಭಾವಿ ಸಚಿವರಾಗಿರುವ ಡಿ.ಕೆ. ಶಿವ ಕುಮಾರ್ ಅವರಿಗೆ ಪವರ್ ಫುಲ್ ಖಾತೆಯಾದ ಗೃಹ ಇಲಾಖೆಯನ್ನು ಕೊಡಲು ಅಪಸ್ವರ ಎತ್ತಿದ್ದಾರೆ ಎನ್ನಲಾಗಿದೆ.
ಸಚಿವ ಡಿ.ಕೆ. ಶಿವಕುಮಾರ್ ಆಪತ್ ಕಾಲದಲ್ಲಿ ಪಕ್ಷಕ್ಕೆ ನೆರವಾಗಿದ್ದನ್ನು ಪರಿಗಣಿಸಿ ಪ್ರಮುಖ ಖಾತೆಯಾದ ಗೃಹ ಇಲಾಖೆಯ ಹೊಣೆಯನ್ನು ವಹಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಿದೆ ಎಂದು ಮೂಲಗಳು ಹೇಳಿವೆ. ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರನ್ನು
ರಕ್ಷಿಸಲು ಯಾರೂ ಮುಂದಾಗ ದಿದ್ದಾಗ ಡಿ.ಕೆ. ಶಿವಕುಮಾರ್ ಐಟಿ ದಾಳಿಗೂ ಹೆದರದೆ, ಶಾಸಕರಿಗೆ ರಕ್ಷಣೆ ನೀಡಿದ್ದಕ್ಕೆ ಪ್ರತಿಫಲವಾಗಿ ಗೃಹ ಖಾತೆಯ ಕೊಡುಗೆಯನ್ನು ಕರುಣಿಸಲು ಹೈ ಕಮಾಂಡ್ ಮುಂದಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರು ಮತ್ತು ರಾಯಚೂರಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲೂ ಸಹ ಸಚಿವ ಡಿ.ಕೆ. ಶಿವಕುಮಾರ್ ಗುಜರಾತ್‌ನ ಕಾಂಗ್ರೆಸ್ ಶಾಸಕರ ರಕ್ಷಣೆ ಸಂದರ್ಭದಲ್ಲಿ ತೋರಿದ ಧೈರ್ಯ, ಚಾಣಾಕ್ಷತನ ಮತ್ತು ಪಕ್ಷ ನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸಿ ಬೆನ್ನು ತಟ್ಟಿದ್ದರು. ಅಷ್ಟೇ ಅಲ್ಲ, ಶಿವಕುಮಾರ್ ಜೊತೆ ಪ್ರತ್ಯೇಕವಾಗಿ ಮಾತನಾಡಿ ಪಕ್ಷದಲ್ಲಿ ಮತ್ತಷ್ಟು ಜವಾಬ್ದಾರಿ ನೀಡುವ ಸುಳಿವು ನೀಡಿದ್ದರು. ಸಚಿವ ಡಿ.ಕೆ.ಶಿಗೆ ಹೈ ಕಮಾಂಡ್ ತಾನು ನೀಡಿದ ಮಾತಿನಂತೆ ಸಿಎಂ ಬಳಿ ಇರುವ ಗೃಹ ಖಾತೆಯನ್ನು ಶಿವಕುಮಾರ್‌ಗೆ ನೀಡಲು ಆಸಕ್ತಿ ತೋರಿದೆ ಎನ್ನಲಾಗಿದೆ. ಆದರೆ, ಇದಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮದೇ ಆದ ಕಾರಣಗಳನ್ನು ಪ್ರಸ್ತಾಪಿಸಿ ಸಚಿವ ಶಿವಕುಮಾರ್‌ಗೆ ಗೃಹ ಖಾತೆಯ ಜವಾಬ್ದಾರಿ ನೀಡಲು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸಿಎಂ ಅಪಸ್ವರ ಏಕೆ?: ಸಚಿವ ಡಿ.ಕೆ. ಶಿವಕುಮಾರ್‌ಗೆ ಗೃಹ ಖಾತೆ ನೀಡಿದರೆ, ಅದು ಮತ್ತೂಂದು ವಿವಾದಕ್ಕೆ ಕಾರಣವಾಗುತ್ತದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅವರಿಗೆ ಗೃಹ ಖಾತೆ ನೀಡುವುದು ಸೂಕ್ತವಲ್ಲ. ಐಟಿ ದಾಳಿಗೆ ಡಿ.ಕೆ.ಶಿ. ಒಳಗಾಗಿರುವುದರಿಂದ ಗೃಹ ಖಾತೆ ನೀಡಿದರೆ, ಪ್ರತಿಪಕ್ಷ ಬಿಜೆಪಿ ಅದನ್ನೇ ಚುನಾವಣಾ ಬಂಡವಾಳ ಮಾಡಿಕೊಂಡು ಹೋರಾಟ ನಡೆಸುವ ಸಾಧ್ಯತೆಗಳಿವೆ ಎನ್ನುವ ವಾದವನ್ನು ಮುಂದಿಟ್ಟಿದ್ದಾರೆ. ಸಚಿವ ಶಿವಕುಮಾರ ಮೇಲೆ ಕಳಂಕಿತರು ಎನ್ನುವ ಆಪಾದನೆ ಸಹ ಬಿಜೆಪಿ ಹೊರೆಸಿದ್ದು, ಈ ವಿಚಾರದಲ್ಲಿ ಎಚ್ಚರಿಕೆಯ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಲುವನ್ನುಹೈಕಮಾಂಡ್‌ಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಗೃಹ ಖಾತೆಯನ್ನು ಸಚಿವ ಡಿ.ಕೆ. ಶಿ ಬದಲಿಗೆ ಕರಾವಳಿ ಭಾಗದ ಹಿರಿಯ ಸಚಿವರಾದ ರಮಾನಾಥ ರೈ ಅವರಿಗೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ವ್ಯಕ್ತಪಡಿಸಿದ್ದು, ಅವರ ಪರ ಇಂದಿಗೂ ವಕಾಲತ್ತು ವಹಿಸುತ್ತಿದ್ದಾರೆ. ಗೃಹ ಖಾತೆಗೆ ಈಗ ಸಚಿವ ಡಿ.ಕೆ.ಶಿ ಮತ್ತು ರಮಾನಾಥ ರೈ ನಡುವೆ ತೆರೆ ಮರೆಯಲ್ಲಿ ಪೈಪೋಟಿ ನಡೆದಿದೆ ಎನ್ನಲಾಗಿದೆ.