ಬೆಂಗಳೂರು : ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿಗೆ ತರುವ ಪರಿಸ್ಥಿತಿ ಬಂದರೆ ಅದಕ್ಕೆ ಕಾಂಗ್ರೆಸ್ ಕಾರಣವಾಗುತ್ತದೆ. ಬೀದಿ ಬದಿ ವ್ಯಾಪಾರಿಗಳು, ಬಡವರು ಕಾಂಗ್ರೆಸ್‌ಗೆ ಉಗಿತಾ ಇದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸಿಗರ ಕಣ್ಣಮುಂದೆ ಚುನಾವಣೆ ಕುಣಿಯುತ್ತಿದೆ. ಅದಕ್ಕಾಗಿ ಈ ಪಾದಯಾತ್ರೆಯ ನಾಟಕ ನಡೆಸುತ್ತಿದ್ದಾರೆ. ಅವರ ಹೋರಾಟಕ್ಕೆ ನಾವು ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ಸಮಯ ಸಂದರ್ಭ ನೋಡಿಕೊಳ್ಳಬೇಕಿತ್ತು ಎಂದರು.
ಡಿಜಿಪಿ ಕ್ರಮ : ಕನಕಪುರದ ಶಾಲೆಯಲ್ಲಿ ಮಕ್ಕಳನ್ನು ರಾಜಕೀಯ ಚಟುವಟಿಕೆಗೆ ಬಳಸಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗ ಡಿಜಿಪಿಗೆ ಪತ್ರ ಬರೆದಿದೆ. ಟಿವಿಯಲ್ಲಿ ಪ್ರಸಾರವಾದ ವರದಿ ನೋಡಿದರೆ ಶಿವಕುಮಾರ್ ನಿಯಮ ಉಲ್ಲಂಘಿಸಿರುವುದು ಸ್ಪಷ್ಟವಾಗುತ್ತದೆ. ಕಾನೂನು ಅದರದ್ದೇ ಆದ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಪಾದಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದ 30 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸೋಮವಾರ ಮತ್ತೆ 40 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ನಿಯಮ ಉಲ್ಲಂಘಿಸಿದರೆ ನಾವು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಸಹಕಾರಿ ಸಂಘಗಳು ಇನ್ನಷ್ಟು ಕೃಷಿಗೆ ಸಹಾಯ ಮಾಡುವ ಕಾರ್ಯ ಮಾಡಬೇಕು:ವಿಶ್ವೇಶ್ವರ ಹೆಗಡೆ ಕಾಗೇರಿ