Advertisement
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಅವರ ಬಂಧನ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಾಣದಷ್ಟು ಮಟ್ಟಿಗೆ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಭಾರತೀಯ ಪೊಲೀಸ್ ಸೇವೆಗೂ (IPS) ಭ್ರಷ್ಟಾಚಾರ ವಿಸ್ತರಿಸಿದ್ದು, ಇಂದು ಪಿಎಸ್ಐ ನೇಮಕಾತಿಯಲ್ಲಿ ಭಾಗಿಯಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಬಂಧನವಾಗಿದ್ದಾರೆ. ಈ ವಿಚಾರವನ್ನು ಗೃಹ ಸಚಿವರೇ ಒಪ್ಪಿಕೊಂಡಿದ್ದಾರೆ. ಪಿಎಸ್ಐ ನೇಮಕಾತಿಯಲ್ಲಿ ಯಾವುದೇ ಹಗರಣ ನಡೆದಿಲ್ಲ, ಎಲ್ಲವೂ ಪಾರದರ್ಶಕವಾಗಿದೆ ಎಂದು ಗೃಹ ಸಚಿವರು ಸದನದ ದಾರಿ ತಪ್ಪಿಸಿದ್ದರು. ಇನ್ನು ನ್ಯಾಯಾಲಯಕ್ಕೆ ಅಧಿಕಾರಿಗಳು ವಿವಿಧ ವರದಿಗಳನ್ನು ಸಲ್ಲಿಕೆ ಮಾಡಿದ್ದು, ನ್ಯಾಯಾಲಯ ಈಗಾಗಲೇ ಸಿಐಡಿ ತನಿಖೆ ಮೇಲೆ ಅಸಮಾಧಾನ ವ್ಯಕ್ತಪಡಿಸಿದೆ. ನೀವು ಸರಿಯಾಗಿ ತನಿಖೆ ಮಾಡುತ್ತೀರೋ ಅಥವಾ ಬೇರೆಯವರಿಗೆ ತನಿಖೆಯನ್ನು ವಹಿಸಬೇಕೋ ಎಂಬ ಎಚ್ಚರಿಕೆಯನ್ನು ನೀಡಿದೆ ಎಂದರು.
Related Articles
Advertisement
ಕೇವಲ ಪರೀಕ್ಷೆ ಬರೆದ 50 ಸಾವಿರ ಅಭ್ಯರ್ಥಿಗಳ ವಿಚಾರ ಮಾತ್ರವಲ್ಲ. ಅಕ್ರಮವಾಗಿ ಹಣ್ಣು ತಿಂದವರನ್ನು ಮಾತ್ರ ಹಿಡಿದ್ದಾರೆ. ಅಕ್ರಮವಾಗಿ ಹಣ್ಣು ಮಾರಿದವರನ್ನು ಹಿಡಿಯಲಿಲ್ಲ. ದೇಶದಲ್ಲಿ ರಾಜ್ಯ ಪೊಲೀಸರಿಗೆ ಉತ್ತಮ ಹೆಸರಿತ್ತು. ಆದರೆ ಈ ಪ್ರಕರಣದಿಂದ ಇಡೀ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುವ ಕೆಲಸವನ್ನು ಸರ್ಕಾರ ಮಾಡಿದೆ. ಈ ವಿಚಾರವಾಗಿ ನಾಳೆ ನಾನು ಹಾಗೂ ಶಾಸಕಾಂಗ ಪಕ್ಷದ ನಾಯಕರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡುತ್ತೇವೆ. ಗೃಹ ಸಚಿವರು ಸ್ವಾಭಿಮಾನಿಗಳಿದ್ದು, ಇಂದು ಸಂಜೆ ಒಳಗೆ ಅವರೇ ರಾಜೀನಾಮೆ ನೀಡುತ್ತಾರೆ ಎಂದು ನಂಬಿದ್ದೇನೆ. 572 ಅಭ್ಯರ್ಥಿಗಳ ಪೈಕಿ 270 ಅಭ್ಯರ್ಥಿಗಳ ನೇಮಕದಲ್ಲಿ ಅಕ್ರಮವಾಗಿದೆ ಎಂದು ವರದಿ ನೋಡಿದ್ದೆ. ಕುಮಾರಸ್ವಾಮಿ ಅವರು ಈ ಪ್ರಕರಣದಲ್ಲಿ 300 ಕೋಟಿ ಅವ್ಯವಹಾರ ನಡೆದಿದೆ ಎಂದು ಹೇಳಿದ್ದಾರೆ. ಅವರು ಸರ್ಕಾರ ನಡೆಸಿರುವವರು, ಅವರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಲೆಕ್ಕಾಚಾರ ಗೊತ್ತಿರುತ್ತದೆ. ಮಾಹಿತಿ ಇಲ್ಲದೆ ಅವರು ಮಾತನಾಡಿರುವುದಿಲ್ಲ. ನನ್ನ ಲೆಕ್ಕದ ಪ್ರಕಾರ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ನಡೆದಿದೆ. ಮಲ್ಲೇಶ್ವರ ಕ್ಷೇತ್ರದ ಅಭ್ಯರ್ಥಿಗೆ ಸಿಂಗಲ್ ಆರ್ಡರ್ ಆಗಿದೆ. ಆ ಬಗ್ಗೆ ಈಗಲೇ ಮಾತನಾಡುವುದಿಲ್ಲ’ ಎಂದರು.
ಪರೀಕ್ಷೆ ನಡೆಸಬೇಕೆ, ಬೇಡವೆ ಎಂಬ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈಗ ಆ ನಿರ್ಧಾರಕ್ಕೆ ಬರುವುದು ಬೇಡ. ಯುವಕರ ಉದ್ಯೋಗದ ಬಗ್ಗೆ ನಾವು ಚಿಂತನೆ ನಡೆಸುತ್ತಿದ್ದು, ಅವರ ಭವಿಷ್ಯದ ಬಗ್ಗೆ ದೀರ್ಘಾವಧಿ ಚಿಂತನೆ ನಡೆಸಬೇಕೇ ಹೊರತು, ಅಲ್ಪಾವಧಿಗೆ ಅಲ್ಲ. ನಾನು ಕೂಡ ಮಂತ್ರಿ ಆಗಿದ್ದಾಗ 30 ಸಾವಿರ ಜನರನ್ನು ನೇಮಕಾತಿ ಮಾಡಿದ್ದೆ. ನನಗೂ ಈ ರೀತಿ ಮಾಡಲು ಸಾಕಷ್ಟು ಒತ್ತಡ ಬಂದಿತ್ತು. ನಾನು ಅದಕ್ಕೆಲ್ಲ ಒಪ್ಪಲಿಲ್ಲ’ ಎಂದು ತಿಳಿಸಿದರು.