Advertisement

ಡಿಜಿಪಿಗೆ ಪಾಟೀಲ್‌ ತರಾಟೆ 

01:57 AM Jan 26, 2019 | |

ಬೆಂಗಳೂರು: ಪೊಲೀಸ್‌ ಅಧಿಕಾರಿಗಳ ವರ್ಗಾವಣೆ, ಮುಂಬಡ್ತಿ ಸೇರಿದಂತೆ ಇಲಾಖೆಯ
ವಿಚಾರಗಳಲ್ಲಿ ತಮ್ಮ ಮಾತು ನಡೆಯದ ಬಗ್ಗೆ ಗೃಹ ಸಚಿವ ಎಂ.ಬಿ.ಪಾಟೀಲ್‌ ಬೇಸರಗೊಂಡಿದ್ದಾರೆ.

Advertisement

ಗುರುವಾರ ನಾಲ್ವರು ಎಸ್ಪಿ ಹಂತದ ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಮುಂಬಡ್ತಿ ನೀಡಿ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮೈಸೂರಿಗೆ ನಿಯೋಜಿಸಲಾಗಿದ್ದು, ಈ ವಿಚಾರವನ್ನು ಗೃಹ ಸಚಿವರ ಗಮನಕ್ಕೆ ತಂದಿರಲಿಲ್ಲ. ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಆದೇಶ ಹೊರಡಿಸಲಾಗಿದೆ.

ಆ ಪೈಕಿ ಕೆ.ಟಿ.ಬಾಲಕೃಷ್ಣ ಅವರನ್ನು ಮೈಸೂರು ಪೊಲೀಸ್‌ ಆಯುಕ್ತರಾಗಿ ವರ್ಗಾವಣೆ ಮಾಡಿದ್ದು, ಸಿದ್ದರಾಮಯ್ಯ ಅವರು ಕೋಪಗೊಂಡಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಅವರ ಪುತ್ರನ ವಿರುದ್ಧ   ಪ್ರಕರಣ ದಾಖಲಿಸಿದ್ದ ಎಸಿಪಿ ಮೋಹನ್‌ ಎಂಬುವರನ್ನು ಕಾರವಾರದಿಂದ ಮತ್ತೆ ಮೈಸೂರಿಗೆ ಇತ್ತೀಚೆಗೆ ವರ್ಗಾವಣೆ ಮಾಡಲಾಗಿತ್ತು. ಈ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಗೃಹ ಸಚಿವ ಎಂ.ಬಿ.ಪಾಟೀಲ್‌ ಅವರು, ರಾಜ್ಯ ಪೊಲೀಸ್‌
ಮಹಾನಿರ್ದೇಶಕಿ ನೀಲಮಣಿ ರಾಜು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ನಾನು ಗೃಹ ಸಚಿವನಾದ ನಂತರ ಪ್ರಮುಖ ವಿಷಯಗಳನ್ನು ನನ್ನ ಗಮನಕ್ಕೆ ತರುತ್ತಿಲ್ಲ. ಹಲವು  ತೀರ್ಮಾನಗಳು ನನಗೆ ಗೊತ್ತಿಲ್ಲದೆ ಆಗಿವೆ. ಹೀಗಾದರೆ, ನಾನು ಗೃಹಸಚಿವನಾಗಿ ಯಾಕೆ ಇರಬೇಕು?’ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ನೀಲಮಣಿ ರಾಜು ಅವರು, ಮುಖ್ಯಮಂತ್ರಿಯವರ ಸೂಚನೆ ಇದ್ದ ಬಗ್ಗೆ ಸಮಾಜಾಯಿಷಿ ನೀಡಿದರು. ಆದರೂ ಗೃಹ ಸಚಿವನಾದ ನನ್ನ ಗಮನಕ್ಕೆ ಬರದಿದ್ದರೆ ಹೇಗೆ? ಎಂದು ಆಕ್ರೋಶ ಹೊರಹಾಕಿದರು ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next