ಉಪೇಂದ್ರ “ಹೋಮ್ ಮಿನಿಸ್ಟರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿ ಹೊಸದೇನಲ್ಲ. ಈಗ ಸದ್ದಿಲ್ಲದೇ ಚಿತ್ರೀಕರಣ ಮುಗಿದಿದೆ. ಸಿನಿಮಾ ನೋಡಿದ ಉಪೇಂದ್ರ ತುಂಬಾನೇ ಖುಷಿಯಾಗಿದ್ದಾರೆ. ಆರಂಭದಲ್ಲಿದ್ದ ಭಯ, ಗೊಂದಲ ಎಲ್ಲವೂ ಈಗ ದೂರವಾಗಿದೆ. ಅದಕ್ಕೆ ಕಾರಣ ಚಿತ್ರ ಮೂಡಿಬಂದ ರೀತಿ. ಮೊದಲರ್ಧ ಔಟ್ ಅಂಡ್ ಔಟ್ ಕಾಮಿಡಿಯಾದರೆ, ಸೆಕೆಂಡ್ ಹಾಫ್ ತುಂಬಾನೇ ಸೀರಿಯಸ್ ಆಗಿ ಸಾಗುತ್ತದೆಯಂತೆ. ಇದು ಉಪೇಂದ್ರ ಅವರಿಗೆ ಖುಷಿ ಕೊಟ್ಟಿದೆ.
“ಇದು ಮೂರು ವರ್ಷಗಳ ಹಿಂದಿನ ಕಮಿಟ್‌ಮೆಂಟ್. ಕಥೆಯೊಂದಿಗೆ ಈ ತಂಡ ನನ್ನ ಬಳಿ ಬಂದಾಗ ನಾನು ಅಷ್ಟೊಂದು ಆಸಕ್ತಿ ತೋರಿಸಲಿಲ್ಲ. ಕಥೆ ಕೇಳಿದಾಗ ಸಣ್ಣ ಭಯ ಕಾಡಿತ್ತು. ಇದು ವಕೌìಟ್ ಆಗಬಹುದಾ ಎಂಬ ಗೊಂದಲ ನನ್ನಲ್ಲಿತ್ತು. ಕೊನೆಗೂ ಒಪ್ಪಿಕೊಂಡೆ.
ಆ ನಂತರವೂ 10 ದಿನ 15 ದಿನ ಎಂದು ಡೇಟ್ಸ್ ಕೊಟ್ಟೆ. ಆದರೆ, ಚಿತ್ರತಂಡ ಮಾತ್ರ ಖುಷಿಯಿಂದಲೇ ಕೆಲಸ ಮಾಡಿ ಸಿನಿಮಾ ಮುಗಿಸಿದೆ. ಇತ್ತೀಚೆಗೆ ಸಿನಿಮಾ ನೋಡಿದ ಮೇಲೆ ನನಗೆ ಈ ಚಿತ್ರದ ಮೇಲಿನ ನಂಬಿಕೆ ಹೆಚ್ಚಿತು. ಚಿತ್ರದ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ಗ್ಲಾಮರ್, ಆ್ಯಕ್ಷನ್, ಕಾಮಿಡಿ …
ಎಲ್ಲವೂ ಇರುವ ಸಿನಿಮಾವಿದು’ ಎಂದು ಚಿತ್ರದ ಬಗ್ಗೆ ಖುಷಿಯಿಂದ ಹೇಳಿಕೊಂಡರು ಉಪೇಂದ್ರ.ಇನ್ನು, “ಹೋಮ್ ಮಿನಿಸ್ಟರ್’ ಒಂದು ಡಬಲ್ ಮೀನಿಂಗ್ ಸಿನಿಮಾ ಎಂದರು ಉಪೇಂದ್ರ. ಹಾಗಂತ ನೀವು ಬೇರೆ ರೀತಿ ಆಲೋಚಿಸಬೇಕಿಲ್ಲ. ಅದೇ ಕಾರಣದಿಂದ ಉಪೇಂದ್ರ ಆ ಬಗ್ಗೆ ಸ್ಪಷ್ಟನೆ ಕೊಟ್ಟರು. “ಹೋಮ್ ಮಿನಿಸ್ಟರ್’ನ ಎರಡು ಪದಕ್ಕೆ ಎರಡು ಅರ್ಥವಿರೋದು ಒಂದು ಕಡೆಯಾದರೆ, ರಾಜಕೀಯವಾಗಿ “ಹೋಮ್ ಮಿನಿಸ್ಟರ್ ‘ಗೆ ಒಂದು ಅರ್ಥವಿರುವ ಜೊತೆಗೆ ಹೆಂಡತಿಯನ್ನು “ಹೋಮ್ ಮಿನಿಸ್ಟರ್’ಎಂದು ಕರೆಯುತ್ತೇವೆ’ ಎಂದರು ಉಪ್ಪಿ.
ವೇದಿಕಾ ಈ ಚಿತ್ರದ ನಾಯಕಿ. “ಶಿವಲಿಂಗ’ ಚಿತ್ರದ ನಂತರ ಮತ್ತೆ ಇಷ್ಟು ಬೇಗ ಆ ತರಹದ ಒಂದು ಒಳ್ಳೆಯ ಪಾತ್ರ ಸಿಗುತ್ತದೆ ಎಂದು ವೇದಿಕಾ ಭಾವಿಸಿರಲಿಲ್ಲವಂತೆ. ಆದರೆ,”ಹೋಮ್ ಮಿನಿಸ್ಟರ್’ ಮೂಲಕ ಮತ್ತೂಂದು ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. “ಉಪೇಂದ್ರ ಅವರ ಜೊತೆ ನಟಿಸಬೇಕೆಂಬ ಆಸೆ ಇತ್ತು. ಅದು ಈ ಸಿನಿಮಾ ಮೂಲಕ ಈಡೇರಿದೆ. ಇಲ್ಲಿ ನನ್ನ ಪಾತ್ರ ತುಂಬಾನೇ ಸವಾಲಿನಿಂದ ಕೂಡಿರುವ ಪಾತ್ರ. ನಾನಿಲ್ಲಿ ಪತ್ರಕರ್ತೆ. ತುಂಬಾ ಮಾತನಾಡುವ ಪಾತ್ರ ಕೂಡಾ. ಇಡೀ ಸಿನಿಮಾದ ಕಾನ್ಸೆಪ್ಟ್ ಹೊಸದಾಗಿದೆ’ ಎಂದರು ವೇದಿಕಾ.
ಚಿತ್ರದಲ್ಲಿ ಲಾಸ್ಯಾ ಕೂಡಾ ನಟಿಸಿದ್ದು, ಅವರಿಲ್ಲಿ ಉಪೇಂದ್ರ ಹಾಗೂ ವೇದಿಕಾ ಅವರನ್ನು ಬೆಸೆಯುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಚಿತ್ರದಲ್ಲಿ ಶ್ರೀನಿವಾಸ್ ಮೂರ್ತಿ ತಂದೆಯಾಗಿ ನಟಿಸಿದ್ದಾರೆ.
ವಿಜಯ್ ಚೆಂಡೂರ್ ನಟಿಸಿದ್ದು, ಉಪೇಂದ್ರ ಅವರ ಫ್ರೆಂಡ್ ಆಗಿ ಸಿನಿಮಾದುದ್ದಕ್ಕೂ ಸಾಗಿಬಂದಿದ್ದಾರಂತೆ. ಸಹಾಯ ಮಾಡುವ ಮನೋಭಾವವಿರುವ ಸಹಾಯ ಮಾಡದ ಸ್ನೇಹಿತನ ಪಾತ್ರವಂತೆ. “ನಾನಿಲ್ಲಿ ಸ್ನೇಹಿತ. ಸಹಾಯ ಮಾಡುವ ಮನಸಿದ್ದು, ಏನೂ ಸಹಾಯ ಮಾಡದ ಫ್ರೆಂಡ್. ಸಿನಿಮಾ ಫಸ್ಟ್‌ಹಾಫ್ ತುಂಬಾ ಜಾಲಿಯಾಗಿ ಸಾಗಿದರೆ, ಸೆಕೆಂಡ್‌ಹಾಫ್ ತುಂಬಾ ಸೀರಿಯಸ್ ಆಗಿದೆ’ ಎಂದರು. ಉಳಿದಂತೆ ಬೇಬಿ ಆದ್ಯಾ, ರವಿಭಟ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರವನ್ನು ಸುಜಯ್ ಶ್ರೀಹರಿ ನಿರ್ದೇಶಿಸಿದ್ದಾರೆ. ಅನಾರೋಗ್ಯದ ಕಾರಣದಿಂದ ಅವರು ಪತ್ರಿಕಾಗೋಷ್ಠಿಗೆ ಬಂದಿರಲಿಲ್ಲ. ಚಿತ್ರವನ್ನು ಶ್ರೀಕಾಂತ್ ಹಾಗೂ ಪೂರ್ಣ ಸೇರಿ ನಿರ್ಮಿಸಿದ್ದಾರೆ.
– ರವಿಪ್ರಕಾಶ್ ರೈ